ಬೆಂಗಳೂರು: ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕೇ ಅಥವಾ ಬೇಡವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಹಿಜಾಬ್ ವಿಚಾರವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಟೀಕಿಸಿದ ಅವರು, ಇದು ಮತೀಯ ಓಲೈಕೆಯ ರಾಜಕೀಯದ ಭಾಗವಾಗಿದೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, “ಹಿಜಾಬ್ಗೆ ಅವಕಾಶ ನೀಡಿ, ಜನಿವಾರ ಹಾಗೂ ರುದ್ರಾಕ್ಷಿಯನ್ನೂ ಅದಕ್ಕೆ ಸೇರಿಸಿ, ಕೇಸರಿ ಶಾಲಿಗೆ ನಿಷೇಧ ಹೇರುವ ರೀತಿಯಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿದೆ” ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಹಿಜಾಬ್ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಾವು ಹಿಜಾಬ್ ಅನ್ನು ವಿರೋಧಿಸಿಲ್ಲ. ಆದರೆ ಶಾಲೆಗಳಲ್ಲಿ ಯೂನಿಫಾರಂ ವ್ಯವಸ್ಥೆಯ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
“ಯಾವಾಗಿನಿಂದ ಯೂನಿಫಾರಂ ವ್ಯವಸ್ಥೆ ಜಾರಿಗೆ ಬಂದಿದೆ? ಅದರ ಉದ್ದೇಶವೇನು?” ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಸಚಿವರಿಗೆ ಅದರ ಇತಿಹಾಸ ಮತ್ತು ಉದ್ದೇಶದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು. “ಅಕ್ಷರ ಮತ್ತು ಜ್ಞಾನ ಹೆಚ್ಚಿಸಬೇಕಾದ ಶಿಕ್ಷಣ ಸಚಿವರು ಮತೀಯ ಓಲೈಕೆಯ ರಾಜಕೀಯದ ಭಾಗವಾಗಿ ಶಾಲೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಜಾತ್ಯತೀತತೆಯ ಹೆಸರಿನಲ್ಲಿ ಅವಕಾಶ ನೀಡಿದ್ದಾರೆ” ಎಂದು ಆರೋಪಿಸಿದರು.
ಶಾಲೆ ಹಾಗೂ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಸಮಾನರು ಎಂಬ ಭಾವನೆ ಬೆಳೆಸಲು ವಸ್ತ್ರಸಂಹಿತೆ ಜಾರಿಗೆ ತರಲಾಗಿದೆ ಎಂದು ಸಿ.ಟಿ.ರವಿ ಹೇಳಿದರು. ವಿದ್ಯಾರ್ಥಿಗಳು ಬೇರೆ ಬೇರೆ ಧರ್ಮ ಮತ್ತು ಸಂಪ್ರದಾಯಗಳಿಗೆ ಸೇರಿದವರಾಗಿದ್ದರೂ, ಶಾಲೆಯಲ್ಲಿ ಎಲ್ಲರೂ ಸಮಾನವಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಯೂನಿಫಾರಂ ವ್ಯವಸ್ಥೆ ಅಳವಡಿಸಲಾಗಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಿಷನರಿಗಳು ಹಾಗೂ ಮೈಸೂರು ಸಂಸ್ಥಾನದ ಕಾಲಘಟ್ಟದಲ್ಲೇ ಯೂನಿಫಾರಂ ವ್ಯವಸ್ಥೆ ಜಾರಿಗೆ ಬಂದಿತ್ತು ಎಂದು ತಿಳಿಸಿದ ಅವರು, ಆ ಸಮಯದಲ್ಲಿಯೂ ಯೂನಿಫಾರಂ ಒಳಗೆ ಹಿಜಾಬ್ ಪ್ರವೇಶ ಮಾಡಿರಲಿಲ್ಲ ಎಂದು ಹೇಳಿದರು.



