ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿರುವುದು ಅನೇಕರನ್ನು ಬೆಚ್ಚಿಬೀಳಿಸಿದೆ. ಎದೆನೋವು ಕಾಣಿಸಿಕೊಂಡರೂ ಸ್ಮಾರ್ಟ್ ವಾಚ್ ತೋರಿಸಿದ ವರದಿ ನಂಬಿ ಅವರು ನಿರ್ಲಕ್ಷ್ಯ ಮಾಡಿದ್ದರೆಂಬ ಮಾಹಿತಿ ಈಗ ಚರ್ಚೆಗೆ ಗ್ರಾಸವಾಗಿದೆ.
ಮೇ 12ರ ರಾತ್ರಿ ದಿಲೀಪ್ ರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ವೇಳೆ ಸ್ಮಾರ್ಟ್ ವಾಚ್‌ನಲ್ಲಿ ಹೃದಯ ಬಡಿತ ಪರಿಶೀಲಿಸಿದಾಗ ಎಲ್ಲವೂ ನಾರ್ಮಲ್ ಎಂದು ತೋರಿಸಿತ್ತು. ಇದರಿಂದ ಅವರು ಆಸ್ಪತ್ರೆಗೆ ಹೋಗದೆ ವಿಶ್ರಾಂತಿ ಪಡೆದಿದ್ದಾರೆ ಎನ್ನಲಾಗಿದೆ.
ಮೇ 13ರ ಬೆಳಿಗ್ಗೆ ವೈದ್ಯರ ಅಪಾಯಿಂಟ್ಮೆಂಟ್ ಪಡೆದಿದ್ದರೂ, ಚಿಕಿತ್ಸೆ ಪಡೆಯುವ ಮುನ್ನವೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ವೈದ್ಯಕೀಯ ತಪಾಸಣೆಗೆ ಬದಲು ತಂತ್ರಜ್ಞಾನವನ್ನು ಅತಿಯಾಗಿ ನಂಬುವುದು ಎಷ್ಟು ಅಪಾಯಕಾರಿ ಎಂಬ ಪ್ರಶ್ನೆ ಇದೀಗ ಮೂಡಿದೆ.
ಸ್ಮಾರ್ಟ್ ವಾಚ್‌ಗಳು ಆರೋಗ್ಯದ ಮೂಲಭೂತ ಮಾಹಿತಿಗಳನ್ನು ನೀಡಬಹುದಾದರೂ, ಅವು ವೈದ್ಯಕೀಯ ಪರೀಕ್ಷೆಗೆ ಪರ್ಯಾಯವಲ್ಲ ಎಂದು ತಜ್ಞರು ಹೇಳುತ್ತಾರೆ. ಎದೆನೋವು, ಉಸಿರಾಟ ತೊಂದರೆಗಳಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು ಎಂಬ ಎಚ್ಚರಿಕೆಯೂ ವ್ಯಕ್ತವಾಗಿದೆ.
ದಿಲೀಪ್ ರಾಜ್ ಅವರು ನಟ, ನಿರ್ಮಾಪಕ ಮತ್ತು ಡಬ್ಬಿಂಗ್ ಕಲಾವಿದರಾಗಿ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.



