ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಆರಂಭದಲ್ಲೇ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮಂಡ್ಯ–ಮೈಸೂರು ಭಾಗದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಈ ನಡುವೆ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಸದ್ಯಕ್ಕೆ ಕೇವಲ 11 ಟಿಎಂಸಿ ನೀರು ಮಾತ್ರ ಉಳಿದಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಕೆಗೆ ಲಭ್ಯವಿರುವುದು ಕೇವಲ 6 ಟಿಎಂಸಿ ನೀರು ಮಾತ್ರ.
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ಉದ್ದೇಶದಿಂದ ಮುಂದಿನ ಮೂರು ತಿಂಗಳುಗಳ ಕಾಲ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಬಹುತೇಕ ಇಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಈ ನಿರ್ಧಾರದಿಂದ ಮಂಡ್ಯ, ಮೈಸೂರು ಹಾಗೂ ಕೊಡಗು ಭಾಗದ ರೈತರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಮಳೆ ಕೊರತೆಯಿಂದ ಕಬ್ಬು ಸೇರಿದಂತೆ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ನೀರನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದ ಸಾವಿರಾರು ರೈತರ ಬದುಕು ಇದೀಗ ಅನಿಶ್ಚಿತತೆಯತ್ತ ಸಾಗುತ್ತಿದೆ.
ಇನ್ನು ಮಳೆಯಾಗದೆ ಇದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, ಕೆಆರ್‌ಎಸ್ ಜಲಾಶಯ ಶೀಘ್ರ ಭರ್ತಿಯಾಗಲಿ ಎಂಬುದು ರೈತರ ಆಶೆಯಾಗಿದೆ.



