ಮುಖ್ಯಮಂತ್ರಿಯಾದ ಬಳಿಕ ತಮ್ಮ ಉಡುಪು ಶೈಲಿಯಿಂದಲೇ ಸುದ್ದಿಯಾಗಿದ್ದ ದಳಪತಿ ವಿಜಯ್ ಇದೀಗ ಅದೇ ವಿಚಾರಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕಪ್ಪು-ಬಿಳಿ ಸೂಟ್ ಧರಿಸುವ ಕುರಿತು ಎದ್ದಿದ್ದ ಟೀಕೆಗಳಿಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಿರುಚಿರಾಪಳ್ಳಿಯಲ್ಲಿ ನಡೆದ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ವಿಜಯ್, “ನಾವು ಕೋಟ್ ಹಾಕಬಾರದೇ? ಅದು ಕೆಲವರ ಏಕಸ್ವಾಮ್ಯವಲ್ಲ. ನಾನು ಕಪ್ಪು-ಬಿಳಿ ಬಣ್ಣದ ಉಡುಪನ್ನು ಧರಿಸುವುದು ಪಾರದರ್ಶಕ ಆಡಳಿತದ ಸಂದೇಶಕ್ಕಾಗಿ” ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ವಿಜಯ್ ಕೋಟ್-ಸೂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಆದರೆ ಅದಕ್ಕೆ ತೆರೆ ಎಳೆದಿರುವ ಅವರು, “ನನ್ನ ಆಡಳಿತವೂ ಈ ಉಡುಪಿನಂತೆ ಸ್ಪಷ್ಟ ಮತ್ತು ಸರಳವಾಗಿರುತ್ತದೆ” ಎಂದು ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, “ಆರು ತಿಂಗಳು ಕಾಯುತ್ತೇವೆ ಎಂದವರು ಆರು ದಿನವೂ ಕಾಯಲಿಲ್ಲ. ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ದೂರು ನೀಡಲು ಆರಂಭಿಸಿದರು” ಎಂದು ಟೀಕಿಸಿದರು.
“ತಮಿಳುನಾಡನ್ನು ವರ್ಷಗಳ ಕಾಲ ಆಳಿದ ಎರಡು ಪ್ರಮುಖ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರವಾಗಿ ನೋಡುತ್ತಿಲ್ಲ. ಜನರ ಮನೆಯ ಅಣ್ಣ, ತಮ್ಮ ಹಾಗೂ ಸೇವಕನಾಗಿ ಕೆಲಸ ಮಾಡುತ್ತೇನೆ” ಎಂದು ಘೋಷಿಸಿದರು.
ವಿಜಯ್ ಅವರ ಈ ಭಾಷಣ ಹಾಗೂ ಸೂಟ್ ಕುರಿತ ಸ್ಪಷ್ಟನೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



