ಹೈದರಾಬಾದ್: ಜೂನ್ 4ರಂದು ಬಿಡುಗಡೆಯಾಗಲಿರುವ ‘ಪೆದ್ದಿ’ ಚಿತ್ರದ ಪ್ರಚಾರದ ವೇಳೆ ನಟಿ ಜಾನ್ವಿ ಕಪೂರ್ ನೀಡಿರುವ ಒಂದು ಭಾಷಣ ಇದೀಗ ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವೇದಿಕೆಯಲ್ಲಿ ನಿರರ್ಗಳ ತೆಲುಗಿನಲ್ಲಿ ಮಾತನಾಡಿದ ಜಾನ್ವಿ, ಕೇವಲ ಸಿನಿಮಾ ಪ್ರಚಾರ ಮಾಡಲಿಲ್ಲ; ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೀರ್ಘಕಾಲದ ನೆಲೆ ಕಟ್ಟುವ ತಮ್ಮ ಉದ್ದೇಶವನ್ನೂ ಪರೋಕ್ಷವಾಗಿ ಬಹಿರಂಗಪಡಿಸಿದರು.
ರಾಮ್ ಚರಣ್ ಜೊತೆಗೆ ನಟಿಸಿರುವ ‘ಪೆದ್ದಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ವಿ, ಪ್ರೇಕ್ಷಕರನ್ನು ರಂಜಿಸುವುದೇ ತಮ್ಮ ಜೀವನದ ಉದ್ದೇಶ ಎಂದು ಹೇಳಿದರು. ಭಾಷಣದ ಪೂರ್ಣ ಅವಧಿಯಲ್ಲಿ ಅವರು ತೋರಿದ ಭಾಷಾ ಪಾಂಡಿತ್ಯ ಮತ್ತು ಆತ್ಮವಿಶ್ವಾಸ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.
ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಲು ಹೋರಾಟ ನಡೆಸುತ್ತಿರುವ ಜಾನ್ವಿ, ಈಗ ಪ್ಯಾನ್-ಇಂಡಿಯಾ ಸಿನಿಮಾಗಳತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದರೂ, ದಕ್ಷಿಣ ಭಾರತದ ಮಾರುಕಟ್ಟೆಯೇ ತಮ್ಮ ಭವಿಷ್ಯಕ್ಕೆ ದೊಡ್ಡ ಅವಕಾಶ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಮುಂದುವರಿಯುತ್ತಿದ್ದಾರೆ ಎನ್ನಲಾಗುತ್ತಿದೆ.
ತೆಲುಗು ಚಿತ್ರರಂಗದಲ್ಲಿ ಒಮ್ಮೆ ಅಗ್ರಸ್ಥಾನದಲ್ಲಿದ್ದ ಶ್ರೀದೇವಿ ಅವರ ವಾರಸುದಾರೆಯಾಗಿ ಜಾನ್ವಿ ಈಗ ಅದೇ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಾಯಿಯಂತೆ ಭಾಷೆ, ಸಂಸ್ಕೃತಿ ಮತ್ತು ಪ್ರೇಕ್ಷಕರನ್ನು ಅಪ್ಪಿಕೊಳ್ಳುವ ಮೂಲಕ ದಕ್ಷಿಣದಲ್ಲಿ ಶಾಶ್ವತ ಸ್ಥಾನ ನಿರ್ಮಿಸಿಕೊಳ್ಳಲು ಅವರು ಮುಂದಾಗಿದ್ದಾರೆ.
ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡರೆ, ಜಾನ್ವಿ ಕಪೂರ್ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ತಿರುವಾಗಲಿದೆ. ಈಗಾಗಲೇ ಹಲವು ದಕ್ಷಿಣ ಭಾರತೀಯ ನಿರ್ಮಾಪಕರು ಅವರತ್ತ ಗಮನ ಹರಿಸಿದ್ದು, ‘ಪೆದ್ದಿ’ ಫಲಿತಾಂಶದ ಬಳಿಕ ಜಾನ್ವಿಯ ಬೇಡಿಕೆ ಹೊಸ ಎತ್ತರ ತಲುಪುವ ಸಾಧ್ಯತೆ ಇದೆ.



