ಬೆಂಗಳೂರು: ಕಾಂಗ್ರೆಸ್ ಪಕ್ಷವು ಯುವಜನರ ರಕ್ತ ಹೀರಿ ಬದುಕುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಡಿಸಿಎಂ ಸಿ.ಎನ್. ಅಶ್ವಥ್ ನಾರಾಯಣ ಅವರ ಕಚೇರಿಗೆ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಖಂಡಿಸಿರುವ ಅವರು, ಇದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಯಾವಾಗಲೂ ಪೋಸ್ಟರ್ ಚಳವಳಿಯ ಮೂಲಕ ರಾಜಕೀಯ ಮಾಡುತ್ತಿದೆ. ಆದರೆ, ಜೆನ್ ಜೀ (Gen Z) ಯುವ ಸಮೂಹ ದೇಶದ ಭವಿಷ್ಯವಾಗಿದ್ದು, ಯುವಕರ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿನ ಪರೀಕ್ಷಾ ಅಕ್ರಮಗಳ ಕುರಿತು ಸರ್ಕಾರವನ್ನು ಪ್ರಶ್ನಿಸಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ನೀಟ್ ಪರೀಕ್ಷೆಗೆ ಸೀಮಿತವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲೇಜು ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಎಸ್‌ಸಿ ಅಕ್ರಮ ಖಂಡಿಸಿ ಪಶುವೈದ್ಯರು ಹಾಗೂ ಕೃಷಿ ವಿಶ್ವವಿದ್ಯಾಲಯದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಅಕ್ರಮ ಪ್ರಕರಣಗಳನ್ನು ಸರ್ಕಾರ ಸಿಬಿಐ ತನಿಖೆಗೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸಭಾಪತಿ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ಕಿಡಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ ಛಲವಾದಿ ನಾರಾಯಣಸ್ವಾಮಿ, ಮುಖ್ಯಮಂತ್ರಿ ಅವರು ಎರಡು ಬಾರಿ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ಕೇಳಿದ್ದಾರೆ. ಅಲ್ಲದೇ, ಮನೆಗೆ ಕರೆಸಿಕೊಂಡು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.
ಸಭಾಪತಿಗಳನ್ನು ಮುಖ್ಯಮಂತ್ರಿ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವುದು ಶಿಷ್ಟಾಚಾರದ ಉಲ್ಲಂಘನೆ. ಮುಖ್ಯಮಂತ್ರಿಗಳೇ ಅವರ ಮನೆಗೆ ತೆರಳಿದ್ದರೆ ಅದು ಸೂಕ್ತವಾಗುತ್ತಿತ್ತು ಎಂದರು.
ಹಿಂದೆ ವಿರೋಧ ಪಕ್ಷದವರು ಸಭಾಪತಿ ಸ್ಥಾನದಲ್ಲಿದ್ದಾಗ ಅವರನ್ನು ಗೌರವಿಸುವ ಸಂಪ್ರದಾಯ ಇತ್ತು. ಆದರೆ, ಕಾಂಗ್ರೆಸ್ ಈಗ ಅವಿಶ್ವಾಸ ನಿರ್ಣಯದ ಬೆದರಿಕೆ ಹಾಕುತ್ತಿದೆ. ಎಐಸಿಸಿ ಲೆಟರ್ ಹೆಡ್‌ನಲ್ಲಿ ಸಭಾಪತಿಗಳ ಹೆಸರು ಉಲ್ಲೇಖಿಸಿರುವುದು ಸದನ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿದರು.
ಈ ವಿಚಾರದ ನೈತಿಕ ಹೊಣೆ ಹೊತ್ತು ಮಲ್ಲಿಕಾರ್ಜುನ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಬಸವರಾಜ ಹೊರಟ್ಟಿ ಅವರಿಗೆ ಬೆಂಬಲ ಸೂಚಿಸಿದ ಅವರು, ಯಾವುದೇ ಕಾರಣಕ್ಕೂ ಬೆದರದೆ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

