HomeKarnataka Newsಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಸೈಬರ್ ಭದ್ರತೆವರೆಗೆ ಎಐ ಬಳಕೆ: ಆಂಥ್ರೋಪಿಕ್ ನೆರವು ಕೋರಿದ ಸಿಎಂ ಡಿ.ಕೆ....

ಪ್ರಶ್ನೆ ಪತ್ರಿಕೆ ತಯಾರಿಕೆಯಿಂದ ಸೈಬರ್ ಭದ್ರತೆವರೆಗೆ ಎಐ ಬಳಕೆ: ಆಂಥ್ರೋಪಿಕ್ ನೆರವು ಕೋರಿದ ಸಿಎಂ ಡಿ.ಕೆ. ಶಿವಕುಮಾರ್!

For Dai;y Updates Join Our whatsapp Group

ಬೆಂಗಳೂರು:ಆಡಳಿತ, ಉನ್ನತ ಶಿಕ್ಷಣ, ಆರೋಗ್ಯ ರಕ್ಷಣೆ, ಸಂಶೋಧನೆ ಹಾಗೂ ರಾಜ್ಯದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ ಹೆಚ್ಚಿಸಲು ಸುದೀರ್ಘ ಸಹಭಾಗಿತ್ವ ಸಾಧಿಸುವ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಆಂಥ್ರೋಪಿಕ್’ ಸಂಸ್ಥೆಯ ನಿಯೋಗದೊಂದಿಗೆ ಚರ್ಚೆ ನಡೆಸಿದರು.

ಕರ್ನಾಟಕದಲ್ಲಿ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಜಾಗತಿಕ ಎಐ ನಾಯಕರನ್ನು ತೊಡಗಿಸಿಕೊಳ್ಳುವ ರಾಜ್ಯದ ಪ್ರಯತ್ನಗಳ ಭಾಗವಾಗಿ, ಐಟಿ ಬಿಟಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಂಥ್ರೋಪಿಕ್ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಗುರುವಾರ ಭೇಟಿ ಮಾಡಿದ್ದರು.

ಜವಾಬ್ದಾರಿಯುತ ಬಳಕೆ, ಡೇಟಾ ಗೌಪ್ಯತೆ ಮತ್ತು ಡೇಟಾ ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳುವ ಮೂಲಕ, ಸರ್ಕಾರ ಹಾಗೂ ಉದ್ಯಮಗಳಿಗಾಗಿ ಅನ್ವಯಿಕ ಎಐ (Applied AI) ಪರಿಹಾರಗಳ “ಪ್ರಯೋಜನಕಾರಿ ಅಳವಡಿಕೆ”ಯ ಕುರಿತು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಸ್ತಾವಿತ ‘ಎಐ ವಿಶ್ವವಿದ್ಯಾಲಯ’, ಬೃಹತ್ ಮಟ್ಟದ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಡೀಪ್-ಟೆಕ್ ಅನ್ವೇಷಣೆಗಳಿಗೆ ನೀಡುವ ಬೆಂಬಲವನ್ನು ಒಳಗೊಂಡಂತೆ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕರ್ನಾಟಕದ ದೃಷ್ಟಿಕೋನವನ್ನು ಮುಖ್ಯಮಂತ್ರಿಗಳು ವಿವರಿಸಿದರು. ದೇಶದಲ್ಲೇ ಅತಿ ದೊಡ್ಡ ಎಐ ಪ್ರಮಾಣೀಕೃತ ಪ್ರತಿಭಾವಂತರನ್ನು ರೂಪಿಸಲು, ರಾಜ್ಯದ ‘ನಿಪುಣ’ (NIPUNA) ಕಾರ್ಯಕ್ರಮದಡಿ ‘ಕ್ಲಾಡ್’ (Claude) ಸರ್ಟಿಫಿಕೇಶನ್ ಸೇರಿದಂತೆ ಎಐ-ಸಂಬಂಧಿತ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಪರಿಚಯಿಸುವ ಬಗ್ಗೆ ಚರ್ಚಿಸಿದರು.

ಆರೋಗ್ಯ ರಕ್ಷಣೆ ಮತ್ತು ಲೈಫ್ ಸೈನ್ಸಸ್ ಕ್ಷೇತ್ರಗಳಲ್ಲಿ ಎಐ ಬಳಕೆ, ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸಹಯೋಗದೊಂದಿಗೆ ವೈಜ್ಞಾನಿಕ ಸಂಶೋಧನೆಗಾಗಿ ಎಐ ಬಳಸುವ ಕುರಿತು ಚರ್ಚೆಗಳು ನಡೆದವು. ಉನ್ನತ ಶಿಕ್ಷಣದಲ್ಲಿ ಎಐ ಆಧಾರಿತ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ಆಂಥ್ರೋಪಿಕ್ ನಿಯೋಗವು ಆಸಕ್ತಿ ವ್ಯಕ್ತಪಡಿಸಿತು.

ಉದ್ಯಮಗಳಲ್ಲಿ ಎಐ ಅಳವಡಿಕೆ, ಡೇಟಾ ಸ್ಥಳೀಯತೆ (Data Residency) ಮತ್ತು ಸಾರ್ವಭೌಮ ಸರ್ಕಾರಿ ಡೇಟಾವನ್ನು ರಾಜ್ಯದೊಳಗಿನ ಸರ್ವರ್‌ಗಳಲ್ಲೇ ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆಯೂ ಪ್ರಮುಖವಾಗಿ ಚರ್ಚಿಸಲಾಯಿತು. ರಾಜ್ಯ ಸರ್ಕಾರವು ತನ್ನ “ಸರ್ಕಾರಕ್ಕೆ ಮೊದಲ ಆದ್ಯತೆ” (Government First) ನೀತಿಯನ್ನು ಪುನರುಚ್ಚರಿಸಿತು. ಎಐ ಆಧಾರಿತ ಸಾರ್ವಜನಿಕ ಪರಿಹಾರಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಸರ್ಕಾರಿ ಡೇಟಾಸೆಟ್‌ಗಳನ್ನು ಸುರಕ್ಷಿತವಾಗಿಡುವ ಬಗ್ಗೆ ಚರ್ಚಿಸಿದರು.

ಇ-ಆಡಳಿತ, ಗೃಹ ಇಲಾಖೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಲ್ಲಿ ಎಐ ಅನ್ವಯಿಕೆಗಳನ್ನು ಗುರುತಿಸಲು ಇಲಾಖಾವಾರು ಕಾರ್ಯಪಡೆಗಳನ್ನು ರಚಿಸುವ ಕುರಿತೂ ಸಭೆಯಲ್ಲಿ ಪರಿಶೀಲಿಸಲಾಯಿತು. ಸೈಬರ್ ಬೆದರಿಕೆಗಳ ವಿರುದ್ಧದ ಸುರಕ್ಷತಾ ಕ್ರಮಗಳು, ನಾಗರಿಕರ ಡೇಟಾ ಮತ್ತು ಗೌಪ್ಯತೆಯ ರಕ್ಷಣೆ ಸೇರಿದಂತೆ ಜವಾಬ್ದಾರಿಯುತ ಎಐ ಪದ್ಧತಿಗಳನ್ನು ಭವಿಷ್ಯದ ಯೋಜನಾ ಅಳವಡಿಕೆಗಳ ಅಗತ್ಯ ಅಂಶಗಳಾಗಿ ಚರ್ಚಿಸಲಾಯಿತು.

ಸರ್ಕಾರಿ ವ್ಯವಸ್ಥೆಗಳಲ್ಲಿ ನಡೆಯುವ ವಂಚನೆಗಳನ್ನು ತಡೆಯಲು ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ದಕ್ಷತೆ, ಭದ್ರತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಹೇಗೆ ನೆರವಾಗುತ್ತದೆ ಎಂಬುದರ ಕುರಿತು ಮುಖ್ಯಮಂತ್ರಿಗಳು ಆಂಥ್ರೋಪಿಕ್‌ನ ತಾಂತ್ರಿಕ ಸಲಹೆ ಕೋರಿದರು.

ಎಐ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಂಥ್ರೋಪಿಕ್‌ನ ‘ಕ್ಲಾಡ್ ಎಐ’ ವೇದಿಕೆಯ ಲಭ್ಯತೆಗೆ ರಿಯಾಯಿತಿ/ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. ‘ಸಿಎಂ 100 ದಿನಗಳ’ ಮೈಲಿಗಲ್ಲನ್ನು ಈ ಸಹಯೋಗದೊಂದಿಗೆ ಸಾಧಿಸುವ ಕುರಿತೂ ಚರ್ಚಿಸಲಾಯಿತು.

ಕರ್ನಾಟಕದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು, ವಿಶೇಷವಾಗಿ ಡೀಪ್-ಟೆಕ್ ಕ್ಷೇತ್ರದಲ್ಲಿರುವ ರಾಜ್ಯದ 20,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಆಂಥ್ರೋಪಿಕ್‌ನಿಂದ ಬೆಂಬಲ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಯಿತು. ತೆರಿಗೆ ಸಂಗ್ರಹಣೆ ಮತ್ತು ಸಾರ್ವಜನಿಕ ಸೇವಾ ವಿತರಣೆಯಂತಹ ಕ್ಷೇತ್ರಗಳಲ್ಲಿ ಎಐ ಅನ್ವಯಿಕೆಗಳನ್ನು ಪ್ರಾಯೋಗಿಕ ಯೋಜನೆಗಳಾಗಿ (Pilot Projects) ಗುರುತಿಸಲಾಯಿತು.

ಎಐ ತಂತ್ರಜ್ಞಾನಗಳನ್ನು ವಿಶಾಲವಾದ ಸಾಮಾಜಿಕ ಒಳಿತಿಗಾಗಿ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳೊಂದಿಗಿನ ಸಹಭಾಗಿತ್ವದ ಕುರಿತೂ ಸಭೆಯು ಪರಿಶೀಲಿಸಿತು.

ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ ಎನ್., ಮುನೀಶ್ ಮೌದ್ಗಿಲ್ ಹಾಗೂ ಸಿಎಂ ಹಣಕಾಸು ಸಲಹೆಗಾರ ಎಲ್. ಕೆ. ಅತೀಕ್, ಆಂಥ್ರೋಪಿಕ್ ಸಂಸ್ಥೆಯ ಪರವಾಗಿ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟೋ, ಅಂತಾರಾಷ್ಟ್ರೀಯ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ ಸಿಯೌರಿ, ಭಾರತದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಷ್, ಭಾರತದ ನೀತಿ ವಿಭಾಗದ ಮುಖ್ಯಸ್ಥ ಆಮ್ಲಾನ್ ಮೊಹಾಂತಿ, ಮತ್ತು ಸಾರ್ವಜನಿಕ ವಲಯ, ಆರೋಗ್ಯ ಹಾಗೂ ಶಿಕ್ಷಣ ವಿಭಾಗದ ಗೋ-ಟು-ಮಾರ್ಕೆಟ್ ಉಸ್ತುವಾರಿ ಸಮರ್ಥ್ ಮಸ್ಸೋನ್ ಅವರು ಉಪಸ್ಥಿತರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img