ಚಾಮರಾಜನಗರ: ಮಂತ್ರಿ ಸ್ಥಾನಕ್ಕಾಗಿ ಹಣ ಪಾವತಿಸಲಾಗಿದೆ ಹಾಗೂ ವಿಧಾನಸೌಧದಲ್ಲಿ ಹಣ ಪಡೆದಿದ್ದಾರೆ ಎಂಬ ಮಾಜಿ ಸಚಿವ ತಿಮ್ಮಾಪುರ ಮತ್ತು ಕಾಂಗ್ರೆಸ್ ಮುಖಂಡ ಎಸ್.ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಕುರಿತು ಸಚಿವ ಸಿ. ಪುಟ್ಟರಂಗಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
“ಪುಟ್ಟರಂಗಶೆಟ್ಟಿ ಎಲ್ಲಿ ಹಣ ಹೂತಿಟ್ಟಿದ್ದರು? ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂಬುದನ್ನು ಆರೋಪ ಮಾಡುವವರನ್ನೇ ಕೇಳಿ. ಇಲ್ಲವಾದರೆ ನಾನು ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ” ಎಂದು ಅವರು ಕಿಡಿಕಾರಿದರು.
ವಿಧಾನಸೌಧದಲ್ಲಿ ಹಣ ಪಡೆದಿದ್ದಾರೆ ಎಂಬ ಆರೋಪದ ಕುರಿತು ಈಗಾಗಲೇ ಎಲ್ಲ ರೀತಿಯ ಪರಿಶೀಲನೆ ನಡೆದಿದೆ. ಈ ಸಂಬಂಧ ಅಗತ್ಯ ಕ್ರಮಗಳೂ ಆಗಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ಸುಳ್ಳು ಆರೋಪ ಹಾಗೂ ಅಪಪ್ರಚಾರ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, “ಈ ರೀತಿಯ ಸುಳ್ಳು ಪ್ರಚಾರ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಹೇಳಿದರು.
“ಆಡಿಯೋ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದು ಯಾರ ಧ್ವನಿ, ಯಾರು ಆ ರೀತಿಯ ಹೇಳಿಕೆ ನೀಡಿದ್ದಾರೆ ಹಾಗೂ ಅದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ” ಎಂದು ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.



