HomeSports News2027ರ ಏಕದಿನ ವಿಶ್ವಕಪ್ʼಗೆ ಸನ್ನಿ ಆಯ್ಕೆ ಮಾಡಿದ ಬಲಿಷ್ಠ ಟೀಂ ಇಂಡಿಯಾ: ಆಕಾಶ್ ಚೋಪ್ರಾ ಕೊಟ್ಟಿದ್ದು...

2027ರ ಏಕದಿನ ವಿಶ್ವಕಪ್ʼಗೆ ಸನ್ನಿ ಆಯ್ಕೆ ಮಾಡಿದ ಬಲಿಷ್ಠ ಟೀಂ ಇಂಡಿಯಾ: ಆಕಾಶ್ ಚೋಪ್ರಾ ಕೊಟ್ಟಿದ್ದು 10ಕ್ಕೆ 9 ಅಂಕ!

For Dai;y Updates Join Our whatsapp Group

2027ರ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ 14 ತಿಂಗಳುಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಸಂಭಾವ್ಯ ಸಂಯೋಜನೆ ಕುರಿತು ಚರ್ಚೆಗಳು ಜೋರಾಗಿವೆ. ಈ ಮಧ್ಯೆ ಭಾರತದ ದಿಗ್ಗಜ ಕ್ರಿಕೆಟಿಗ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸುನಿಲ್ ಗವಾಸ್ಕರ್, ಮುಂಬರುವ ವಿಶ್ವಕಪ್‌ಗೆ ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಅದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಭಾರತವು ಕೊನೆಯ ಬಾರಿಗೆ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ನಂತರ 2023ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಜೇಯವಾಗಿ ಫೈನಲ್‌ಗೇರಿದರೂ, ಅಂತಿಮ ಹಣಾಹಣಿಯಲ್ಲಿ ಸೋತು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಬಳಿಕ ಭಾರತ 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಟಿ20 ವಿಶ್ವಕಪ್ ಗೆದ್ದು ಸತತ ಮೂರು ಐಸಿಸಿ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಶುಭ್ಮನ್ ಗಿಲ್ ನಾಯಕತ್ವದಲ್ಲಿ 2027ರ ಏಕದಿನ ವಿಶ್ವಕಪ್ ಗೆಲ್ಲುವತ್ತ ತಂಡದ ಗುರಿ ನೆಟ್ಟಿದೆ.

ಗವಾಸ್ಕರ್ ಆಯ್ಕೆ ಮಾಡಿದ ತಂಡದಲ್ಲಿ ಶುಭ್ಮನ್ ಗಿಲ್ ನಾಯಕರಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಟಾಪ್-5 ಬ್ಯಾಟರ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಬ್ಯಾಕ್‌ಅಪ್ ವಿಕೆಟ್‌ಕೀಪರ್ ಆಗಿ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ.

ಆಲ್‌ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಏಕೈಕ ತಜ್ಞ ಸ್ಪಿನ್ನರ್ ಆಗಿದ್ದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ.

ಆದರೆ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ಗವಾಸ್ಕರ್ ತಮ್ಮ ಸಂಭಾವ್ಯ ತಂಡದಲ್ಲಿ ಸ್ಥಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ. 2027ರ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವುದರಿಂದ ಅನುಭವಿ ವೇಗಿಗಳ ಅಗತ್ಯವಿದೆ ಎಂಬ ಚರ್ಚೆ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ.

ಇದೇ ವೇಳೆ, ಗವಾಸ್ಕರ್ ಆಯ್ಕೆ ಮಾಡಿದ ತಂಡವನ್ನು ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಾಪ್-5 ಬ್ಯಾಟರ್‌ಗಳ ಆಯ್ಕೆಯ ಜೊತೆಗೆ ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗದಲ್ಲೂ ಉತ್ತಮ ಸಮತೋಲನ ಸಾಧಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿತೀಶ್ ಕುಮಾರ್ ರೆಡ್ಡಿ, ಜಡೇಜಾ ಜೊತೆಗೆ ಅಕ್ಷರ್ ಪಟೇಲ್ ಹಾಗೂ ಎಡಗೈ ವೇಗಿ ಅರ್ಶದೀಪ್ ಸಿಂಗ್‌ರನ್ನು ಆಯ್ಕೆ ಮಾಡಿರುವುದು ತಂಡದ ಬಲ ಹೆಚ್ಚಿಸಿದೆ. ಬುಮ್ರಾ, ಸಿರಾಜ್, ಕುಲ್ದೀಪ್ ಹಾಗೂ ಹರ್ಷಿತ್ ರಾಣಾ ಕೂಡ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಈ ತಂಡಕ್ಕೆ ನಾನು 10ಕ್ಕೆ 8.5ರಿಂದ 9 ಅಂಕ ನೀಡುತ್ತೇನೆ,” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ ಸಂಭಾವ್ಯ 15 ಸದಸ್ಯರ ಭಾರತ ತಂಡ:

ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img