HomeIndia Newsಮರಣದಂಡನೆ: ನೇಣು ಶಿಕ್ಷೆಯೇ ಮುಂದುವರಿಕೆ, ಇಂಜೆಕ್ಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮರಣದಂಡನೆ: ನೇಣು ಶಿಕ್ಷೆಯೇ ಮುಂದುವರಿಕೆ, ಇಂಜೆಕ್ಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

For Dai;y Updates Join Our whatsapp Group

ನವದೆಹಲಿ: ಭಾರತದಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ನೇಣು ಹಾಕುವ ಪದ್ಧತಿಯ ಬದಲಿಗೆ ಮಾರಕ ವಿಷಕಾರಿ ಚುಚ್ಚುಮದ್ದು ಬಳಸಬೇಕೆಂಬ ಬಹುದಿನಗಳ ಚರ್ಚೆಗೆ ಭಾರತದ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಗಲ್ಲು ಶಿಕ್ಷೆಗಿಂತ ಮಾರಕ ಇಂಜೆಕ್ಷನ್ ಹೆಚ್ಚು ವೈಜ್ಞಾನಿಕ, ಶಾಂತಿಯುತ ಅಥವಾ ಮಾನವೀಯ ಎಂದು ಸಾಬೀತುಪಡಿಸಲು ಯಾವುದೇ ಗಣನೀಯ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿರುವ ಕಾನೂನಿನಿಂದ ನೇಣು ಶಿಕ್ಷೆಯನ್ನು ತೆಗೆದುಹಾಕಬೇಕೆಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ವಜಾಗೊಳಿಸಿದೆ.

ಮಾರಕ ಇಂಜೆಕ್ಷನ್ ಪದ್ಧತಿಯಲ್ಲಿ ಗಂಭೀರ ಲೋಪಗಳಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮಾರಕ ಇಂಜೆಕ್ಷನ್‌ಗಾಗಿ ಮೂರು ಹಂತದ ಔಷಧಿಗಳನ್ನು ಬಳಸಲಾಗುತ್ತದೆ. ಮೊದಲನೆಯದು ಪ್ರಜ್ಞೆ ತಪ್ಪಿಸಲು, ಎರಡನೆಯದು ಸ್ನಾಯುಗಳ ಚಲನೆ ನಿಲ್ಲಿಸಲು ಮತ್ತು ಮೂರನೆಯದು ಹೃದಯ ಸ್ಥಗಿತಗೊಳಿಸಲು. ಮೊದಲ ಔಷಧ ಸಮರ್ಪಕವಾಗಿ ಕೆಲಸ ಮಾಡದಿದ್ದರೆ, ವ್ಯಕ್ತಿ ಹೊರನೋಟಕ್ಕೆ ಶಾಂತವಾಗಿ ಕಂಡರೂ ದೇಹದೊಳಗೆ ಅಸಹನೀಯ ಉರಿ ಮತ್ತು ನರಕಯಾತನೆ ಅನುಭವಿಸುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.

ದೆಹಲಿ ಎನ್‌ಎಲ್‌ಯುನ ‘ಪ್ರಾಜೆಕ್ಟ್ 39ಎ’ ವರದಿಯ ಪ್ರಕಾರ, ಅಮೆರಿಕದಲ್ಲಿ ನಡೆದ 9,000 ಮರಣದಂಡನೆಗಳಲ್ಲಿ 276 ಪ್ರಕರಣಗಳು ತಾಂತ್ರಿಕವಾಗಿ ಎಡವಿವೆ ಎಂಬ ಅಂಶವನ್ನೂ ಪೀಠ ಉಲ್ಲೇಖಿಸಿದೆ. 2024ರಲ್ಲಿ ಅಮೆರಿಕದ ಇಡಾಹೊದಲ್ಲಿ ಥಾಮಸ್ ಕ್ರೀಚ್ ಎಂಬ ಅಪರಾಧಿಗೆ ರಕ್ತನಾಳ ಸಿಗದೆ 8 ಬಾರಿ ಪ್ರಯತ್ನಿಸಿ ವಿಫಲವಾದಾಗ ಶಿಕ್ಷೆಯನ್ನೇ ಮುಂದೂಡಲಾಗಿತ್ತು ಎಂಬ ಉದಾಹರಣೆಯನ್ನೂ ನೀಡಲಾಗಿದೆ.

ಭಾರತದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ವಾದ ಮಂಡಿಸಿ, ಭಾರತದಲ್ಲಿ ನೇಣು ಶಿಕ್ಷೆಯು ಅತ್ಯಂತ ವಿಶ್ವಾಸಾರ್ಹವಾಗಿದ್ದು ಎಂದೂ ವಿಫಲವಾಗಿಲ್ಲ, ಆದರೆ ಇಂಜೆಕ್ಷನ್ ವಿಧಾನದಲ್ಲಿ ರಕ್ತನಾಳ ಪತ್ತೆ ಹಚ್ಚುವುದು ಮತ್ತು ಔಷಧಿ ಕೊರತೆಯಂತಹ ಸಮಸ್ಯೆಗಳಿವೆ ಎಂದು ವಿವರಿಸಿದರು.

1983ರ ‘ದೀನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲೂ ನ್ಯಾಯಾಲಯವು ವಿದ್ಯುತ್ ಕುರ್ಚಿ, ಗ್ಯಾಸ್ ಚೇಂಬರ್ ಮತ್ತು ಇಂಜೆಕ್ಷನ್‌ಗಳಿಗಿಂತ ನೇಣು ಪದ್ಧತಿಯೇ ಹೆಚ್ಚು ತ್ವರಿತ ಹಾಗೂ ಕಡಿಮೆ ದೋಷಪೂರಿತ ಎಂದು ಅಭಿಪ್ರಾಯಪಟ್ಟಿತ್ತು. ಈ ಎಲ್ಲಾ ಐತಿಹಾಸಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಇರುವ ನೇಣು ಶಿಕ್ಷೆಯ ವಿಧಾನವೇ ಮುಂದುವರಿಯಲಿದೆ ಎಂದು ತೀರ್ಪು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img