HomeGadag Newsಮಾಜಿ ಪೈಲ್ವಾನರ ಮಾಸಾಶನ ವಿಳಂಬ

ಮಾಜಿ ಪೈಲ್ವಾನರ ಮಾಸಾಶನ ವಿಳಂಬ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಒಂದು ಕಾಲದಲ್ಲಿ ಕುಸ್ತಿ ಅಖಾಡದಲ್ಲಿ `ನಾನು’ ಎಂದವರನ್ನು ಮಕಾಡೆ ಮಲಗಿಸಿ ಮಣ್ಣು ಮುಕ್ಕಿಸಿದ ಜಗಜಟ್ಟಿ ಪೈಲ್ವಾನರು ಇಂದು, ವೃದ್ಧಾಪ್ಯದ ಹೊಸ್ತಿಲಲ್ಲಿ ನಿಂತಿದ್ದು, ತಮ್ಮ ಮಾಸಾಶನಕ್ಕಾಗಿ ಸರ್ಕಾರಿ ಕಚೇರಿಗಳನ್ನು ಎಡತಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಇವರಿಗೆ ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಹೀಗಾಗಿ, ಗದಗ ಜಿಲ್ಲೆಯ ಏಳು ತಾಲೂಕಿನ ಸುಮಾರು 140 ಮಾಜಿ ಪೈಲ್ವಾನರು ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ಇಲಾಖೆಯ ಎದುರು ಸೇರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಅವರಿಗೆ ಪ್ರತಿ ತಿಂಗಳು ಮಾಸಾಶನ ಸಕಾಲಕ್ಕೆ ಬರುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಸಕಾಲಕ್ಕೆ ಸಿಗುತ್ತಿಲ್ಲ. ಅದರಲ್ಲೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಇನ್ನೂ ತಡವಾಗುತ್ತಿದೆ ಎಂದು ಮಾಜಿ ಪೈಲ್ವಾನರು ಆರೋಪಿಸಿದರು. ಕ್ರೀಡಾ ಇಲಾಖೆಯ ಕಚೇರಿಯ ಎದುರು ಸೇರಿದ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಕಚೇರಿಯಲ್ಲಿ ಲಭ್ಯವಿರಲಿಲ್ಲ. ಹೀಗಾಗಿ, ಹಿರಿಯ ಜೀವಗಳು ಅವರಿಗೆ ಕಾದು ಸುಸ್ತಾಗಿ, ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೋಗಿದ್ದಾರೆ.

Delay in massaging of ex-pillars

ಯೌವನದ ಕಾಲದಲ್ಲಿ ಕುಸ್ತಿ ಅಖಾಡದಲ್ಲಿ ಮದಗಜಗಳ ಹಾಗೆ ಕಾದಾಡಿ, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತಂದುಕೊಟ್ಟಿದ್ದೇವೆ. ಈಗ ನಮಗೆ ವಯಸ್ಸಾಗಿದೆ. ಮಕ್ಕಳು ಕೂಡಾ ನಿಮ್ಮ ಮಾಶಾಸನದಲ್ಲಿಯೇ ಆಸ್ಪತ್ರೆ ಖರ್ಚು ನಿಭಾಯಿಸಿ ಎನ್ನುತ್ತಾರೆ. ಆದರೆ, ಸರ್ಕಾರ ಮಾತ್ರ ನಮಗೆ ಸಕಾಲಕ್ಕೆ ಮಾಶಾಸನ ನೀಡದೇ ಸತಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಓರ್ವ ಮಾಜಿ ಪೈಲ್ವಾನನಿಗೆ 3,500 ರೂಪಾಯಿ ಮಾಸಾಶನ ನೀಡಲಾಗುತ್ತದೆ. ಈ ಮೊತ್ತವನ್ನು ಹೆಚ್ಚಿಸಬೇಕು. ಅಂತೆಯೇ ಉಚಿತವಾಗಿ ಬಸ್ ಪಾಸ್ ನೀಡಬೇಕು ಎಂದು ಈ ಹಿಂದೆ ಮನವಿ ಮಾಡಲಾಗಿತ್ತು. ನಮ್ಮ ಯಾವ ಬೇಡಿಕೆಗಳೂ ಈಡೇರಿಲ್ಲ ಎಂದು ಸೇರಿದ್ದ ಮಾಜಿ ಪೈಲ್ವಾನರು ತಿಳಿಸಿದರು.

ಸರ್ಕಾರ ಅನೇಕ ಯೋಜನೆಗಳಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಆದರೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದ ಪೈಲ್ವಾನರಿಗೆ ಮಾಸಾಶನ ನೀಡದಷ್ಟು ಸರ್ಕಾರ ಬಡವಾಯಿತಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು, ಮಾಜಿ ಪೈಲ್ವಾನರಿಗೆ ನ್ಯಾಯಯುತವಾಗಿ ಸಿಗಬೇಕಾದ ಮಾಸಾಶನವನ್ನು ಕಾಲಕಾಲಕ್ಕೆ ದೊರಕುವಂತೆ ಮಾಡಿ, ಅವರ ವೃದ್ಧಾಪ್ಯದಲ್ಲಿ ಊರುಗೋಲಾಗಲಿ ಎಂಬ ಆಶಯ ವ್ಯಕ್ತವಾಗಿದೆ.

ಈ ಕುರಿತು ಕ್ರೀಡಾ ಇಲಾಖೆಯ ಗದಗ ಜಿಲ್ಲಾ ಸಹಾಯಕ ನಿರ್ದೇಶಕರನ್ನು ಪ್ರಶ್ನಿಸಿದರೆ, ಸರ್ಕಾರ ತ್ರೈಮಾಸಿಕವಾಗಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಅನುದಾನ ಬಂದ ಕೂಡಲೇ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img