ಬೆಂಗಳೂರು: ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ–2016ರ ಅಡಿಯಲ್ಲಿ ರಾಜ್ಯ ವಿಕಲಚೇತನರ ಆಯುಕ್ತರಿಗೆ ಖಾಸಗಿ ಸಂಸ್ಥೆಗಳ ವಿರುದ್ಧವೂ ಆದೇಶ ಹೊರಡಿಸುವ ಹಾಗೂ ಪರಿಹಾರ ನೀಡುವಂತೆ ನಿರ್ದೇಶಿಸುವ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂತ್ರಸ್ತ ಶಿಕ್ಷಕಿಗೆ ಪರಿಹಾರ ನೀಡುವಂತೆ ರಾಜ್ಯ ವಿಕಲಚೇತನರ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಯ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದ್ದು, ಆಯುಕ್ತರ ಆದೇಶವನ್ನು ಎತ್ತಿಹಿಡಿದಿದೆ.
ಶಿಕ್ಷಕಿಗೆ ನೀಡಲಾಗಿರುವ ₹10 ಲಕ್ಷ ಪರಿಹಾರವನ್ನು ದಂಡ ಎಂದು ಪರಿಗಣಿಸಲಾಗುವುದಿಲ್ಲ. ಗಂಭೀರ ಅಪಘಾತದ ಬಳಿಕ ಅವರು ಭರಿಸಿರುವ ₹46 ಲಕ್ಷಕ್ಕೂ ಅಧಿಕ ವೈದ್ಯಕೀಯ ವೆಚ್ಚದ ಹಿನ್ನೆಲೆಯಲ್ಲಿ ಈ ಮೊತ್ತ ಅತ್ಯಂತ ನ್ಯಾಯಸಮ್ಮತವಾದ ಕನಿಷ್ಠ ಪರಿಹಾರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಶಿಕ್ಷಕಿಗೆ ಸೌಲಭ್ಯ ಒದಗಿಸಲು ಶಾಲೆಗೆ ನಿರ್ದೇಶನ
ನ್ಯಾಯಾಲಯವು ಶಾಲಾ ಆಡಳಿತ ಮಂಡಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದೆ. ಶಿಕ್ಷಕಿ ಬರ್ನಾಲಿ ರಾವತ್ ಅವರಿಗೆ ತಕ್ಷಣವೇ ಲಿಖಿತ ಮರುನೇಮಕಾತಿ ಆದೇಶ ನೀಡಬೇಕು. ನೆಲಮಹಡಿಯಲ್ಲೇ ವ್ಹೀಲ್‌ಚೇರ್ ಸಂಚಾರಕ್ಕೆ ಅನುಕೂಲವಾಗುವ ತರಗತಿ ಕೊಠಡಿ, ವಿಕಲಚೇತನ ಸ್ನೇಹಿ ಶೌಚಾಲಯ, ಮಾಸಿಕ ₹15,000 ವಾಹನ ಭತ್ಯೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆದೇಶಿಸಿದೆ.
ಇದರ ಜೊತೆಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ 15 ನಿಮಿಷಗಳ ವಿಶ್ರಾಂತಿ ನೀಡಬೇಕು ಹಾಗೂ ಆರೋಗ್ಯದ ಕಾರಣದಿಂದ ಶಾಲೆಗೆ ಹಾಜರಾಗಲು ಸಾಧ್ಯವಾಗದ ದಿನಗಳಲ್ಲಿ ಆನ್‌ಲೈನ್ ಮೂಲಕ ಪಾಠ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.
ವಿಕಲಚೇತನ ಸ್ನೇಹಿ ಮೂಲಸೌಕರ್ಯಕ್ಕೆ ಎಸ್‌ಒಪಿ ರೂಪಿಸಲು ಆದೇಶ
ರಾಜ್ಯದ ಎಲ್ಲಾ ಸಾರ್ವಜನಿಕ ಮೂಲಸೌಕರ್ಯಗಳನ್ನು ವಿಕಲಚೇತನ ಸ್ನೇಹಿಯಾಗಿಸಲು ನ್ಯಾಯಾಲಯವು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಸಂಬಂಧ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ರೂಪಿಸಿ ಜಾರಿಗೊಳಿಸಬೇಕು ಎಂದು ತಿಳಿಸಿದೆ.
ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಸಾರಿಗೆ ಕೇಂದ್ರಗಳು, ಧಾರ್ಮಿಕ ಸ್ಥಳಗಳು ಹಾಗೂ ವಸತಿ ಸಮುಚ್ಚಯಗಳಲ್ಲಿ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಪೀಠ ಹೇಳಿದೆ.
ರಾಜ್ಯ ಮಟ್ಟದಲ್ಲಿ ಪ್ರವೇಶಾಧಿಕಾರ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಸೂಚಿಸಿರುವ ನ್ಯಾಯಾಲಯ, ವಿಕಲಚೇತನರ ಹಕ್ಕುಗಳ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ಕಟ್ಟಡ ನಿರ್ಮಾಣವಾಗದಿದ್ದರೆ ಸಾರ್ವಜನಿಕ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಬಾರದು ಎಂದು ನಿರ್ದೇಶಿಸಿದೆ.
ಸಾರ್ವಜನಿಕ ರಸ್ತೆ ಅಥವಾ ಪಾದಚಾರಿ ಮಾರ್ಗದಿಂದ ಕಟ್ಟಡದ ಮುಖ್ಯ ಭಾಗಕ್ಕೆ ಕನಿಷ್ಠ ಒಂದು ಮೆಟ್ಟಿಲುರಹಿತ ಪ್ರವೇಶ ಮಾರ್ಗ ಇರಬೇಕು. ರ್ಯಾಂಪ್‌ಗಳು ನಿಗದಿತ ಮಾನದಂಡಗಳಂತೆ ನಿರ್ಮಾಣವಾಗಬೇಕು. ಎರಡೂ ಬದಿಗಳಲ್ಲಿ ಹ್ಯಾಂಡ್ರೈಲ್‌ಗಳು ಹಾಗೂ ಜಾರದ ಮೇಲ್ಮೈ ಇರಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಇದಲ್ಲದೆ, ಒಟ್ಟು ಪಾರ್ಕಿಂಗ್ ಸ್ಥಳಗಳ ಕನಿಷ್ಠ ಶೇ.2 ಅಥವಾ ಕನಿಷ್ಠ ಒಂದು ಸ್ಥಳವನ್ನು ವಿಕಲಚೇತನರಿಗೆ ಮೀಸಲಿಡಬೇಕು. ಮಾಲ್‌ಗಳು, ವಿಮಾನ ನಿಲ್ದಾಣಗಳಂತಹ ದೊಡ್ಡ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ನಾಲ್ಕು ವಿಶೇಷ ಪಾರ್ಕಿಂಗ್ ಸ್ಥಳಗಳನ್ನು ಒದಗಿಸಬೇಕು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ
2013ರ ಆಗಸ್ಟ್ 22ರಂದು ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅಂಕಗಳನ್ನು ತಿದ್ದಿದ ವಿಚಾರ ಬೆಳಕಿಗೆ ಬಂದ ಬಳಿಕ, ಶಿಕ್ಷಕರ ಪ್ರಶ್ನೆಗೆ ಹೆದರಿದ ಆಕೆ ಮೊದಲ ಮಹಡಿಯ ಕಿಟಕಿಯ ಹೊರಭಾಗದಲ್ಲಿ ನಿಂತು ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಳು.
ಈ ವೇಳೆ ವಿದ್ಯಾರ್ಥಿನಿಯನ್ನು ರಕ್ಷಿಸಲು ಶಿಕ್ಷಕಿ ಬರ್ನಾಲಿ ರಾವತ್ ಸ್ವಯಂಪ್ರೇರಿತವಾಗಿ ಕಿಟಕಿಯ ಹೊರಭಾಗಕ್ಕೆ ಇಳಿದಿದ್ದರು. ಆದರೆ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಿಂದ ಅವರು ಶಾಶ್ವತ ದೈಹಿಕ ವಿಕಲತೆಗೆ ಒಳಗಾಗಿದ್ದರು.
ಶಾಲೆಯು ಆರಂಭದಲ್ಲಿ ಚಿಕಿತ್ಸೆಗಾಗಿ ₹11.63 ಲಕ್ಷ ವೆಚ್ಚ ಭರಿಸಿದ್ದರೂ, ಬಳಿಕ ಹೆಚ್ಚುವರಿ ಸೌಲಭ್ಯ ಮತ್ತು ಪರಿಹಾರ ನೀಡಲು ನಿರಾಕರಿಸಿತ್ತು. ಇದರಿಂದ ಶಿಕ್ಷಕಿ 2019ರಲ್ಲಿ ರಾಜ್ಯ ವಿಕಲಚೇತನರ ಆಯುಕ್ತರ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಆಯುಕ್ತರು 2020ರ ಜೂನ್ 12ರಂದು ಶಿಕ್ಷಕಿಯ ಪರವಾಗಿ ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಆಯುಕ್ತರ ಆದೇಶವನ್ನು ಮಾನ್ಯಗೊಳಿಸಿ ಅರ್ಜಿಯನ್ನು ತಿರಸ್ಕರಿಸಿದೆ.



