ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶತಮಾನೋತ್ಸವ ಆಚರಿಸಿರುವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾದಾನ ಸಮಿತಿಯ ವಿಡಿಎಸ್ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ‘ಅಂಬ್ರೆಲಾ ಡೇ’ (ಮಾನ್ಸೂನ್ ಡೇ)ವನ್ನು ಸಂಭ್ರಮದಿಂದ ಆಚರಿಸಲಾಯಿತು.
1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಛತ್ರಿಗಳನ್ನು ರಿಬ್ಬನ್, ಬಲೂನ್, ಮಿಂಚುಪಟ್ಟಿ ಹಾಗೂ ಬಣ್ಣಬಣ್ಣದ ಕಾಗದಗಳಿಂದ ಆಕರ್ಷಕವಾಗಿ ಅಲಂಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಕ್ಕಳು ತುಂತುರು ಮಳೆಯ ನಡುವೆ ಛತ್ರಿಗಳನ್ನು ಹಿಡಿದು ‘ಮಳೆ ಬಿಲ್ಲೆ… ಮಳೆ ಬಿಲ್ಲೆ…’ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಹಿರಿಯ ಶಿಕ್ಷಕಿ ರೇಣುಕಾ ವೆಂಕಟಾಪುರ ಮಾತನಾಡಿ, ಅಂಬ್ರೆಲಾದ ಉಪಯೋಗ, ಮಳೆಯ ಮಹತ್ವ ಹಾಗೂ ಭೂಮಿಯ ಮೇಲಿನ ಜೀವಸಂಕುಲಕ್ಕೆ ಮಳೆಯಿಂದಾಗುವ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಿಕ್ಷಕಿಯರಾದ ಮಂಜುಳಾ ಪರಾಪುರ ಮತ್ತು ಐಶ್ವರ್ಯ ಕುಲಕರ್ಣಿ ಮಕ್ಕಳಿಗೆ ನೃತ್ಯ ತರಬೇತಿ ನೀಡಿ, ಅವರೊಂದಿಗೆ ಸಂಭ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರು, ಸೇವಾ ತರಬೇತಿ ಪ್ರಶಿಕ್ಷಣಾರ್ಥಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



