ಬಂಡೆಯಂಥ ಸಮಸ್ಯೆಗಳು ಹಿಮದಂತೆ ಕರಗಲು ಅಜ್ಜಯ್ಯನ ತಪೋಶಕ್ತಿಯೇ ಕಾರಣ ಎಂಬ ನಂಬಿಕೆ ಸಿಎಂಗೆ ಇದೆ: ಡಾ. ವೀರಸೋಮೇಶ್ವರ ಶಿವಾಚಾರ್ಯರು
ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾಲಿಗೆ ಲಿಂ. ವೀರಗಂಗಾಧರ ಶಿವಾಚಾರ್ಯರೇ ಆಪತ್ಬಾಂಧವರು. ಅಜ್ಜಯ್ಯನ ಮೇಲೆ ಡಿಕೆಶಿ ಅಪಾರ ಶ್ರದ್ಧೆ ಮತ್ತು ಭಕ್ತಿ ಹೊಂದಿದ್ದಾರೆ. ಅಜ್ಜಯ್ಯನನ್ನು ಸ್ಮರಿಸದೆ, ಪೂಜೆ ಸಲ್ಲಿಸದೆ ತಮ್ಮ ದೈನಂದಿನ ಯಾವುದೇ ಕಾರ್ಯವನ್ನೂ ಅವರು ಆರಂಭಿಸುವುದಿಲ್ಲ. ಜೀವನದಲ್ಲಿ ಎದುರಾದ ಬಂಡೆಯಂಥ ಸಮಸ್ಯೆಗಳು ಹಿಮದಂತೆ ಕರಗಿ ಹೋಗಲು ಅಜ್ಜಯ್ಯನ ತಪೋಶಕ್ತಿಯೇ ಕಾರಣ ಎಂಬ ನಂಬಿಕೆ ಅವರಲ್ಲಿದೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದಲ್ಲಿ ನಡೆದ ಲಿಂ. ವೀರಗಂಗಾಧರ ಶಿವಾಚಾರ್ಯರ 44ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಪಡೆಯುವ ಮುನ್ನವೂ, ಅಧಿಕಾರಕ್ಕೆ ಬಂದ ನಂತರವೂ ಅಜ್ಜಯ್ಯನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ವೀರಗಂಗಾಧರ ಅಜ್ಜಯ್ಯನ ಮೇಲಿನ ಅವರ ಭಕ್ತಿ ಮತ್ತು ನಂಬಿಕೆ ಅಪಾರವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೂ ಮುಖ್ಯಮಂತ್ರಿ ವಿಶೇಷ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಮುಕ್ತಿ ಮಂದಿರದಲ್ಲಿ ಈಗಾಗಲೇ ತ್ರಿಕೋಟಿ ಲಿಂಗಗಳ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಮುಂಬರುವ 45ನೇ ಪುಣ್ಯಸ್ಮರಣೋತ್ಸವದ ವೇಳೆಗೆ ಎಲ್ಲ ಲಿಂಗಗಳ ಪ್ರಾಣಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಳ್ಳಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಯಾವುದೇ ಸಂಕಲ್ಪಿತ ಕಾರ್ಯ ಯಶಸ್ವಿಯಾಗಬೇಕಾದರೆ ಎಲ್ಲ ಶಕ್ತಿಗಳೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಡಾ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.










