ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ.
ಇದರೊಂದಿಗೆ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ನವೆಂಬರ್ 11ರವರೆಗೆ ಒಟ್ಟು 14 ದಿನಗಳ ಕಾಲ ಭಕ್ತರಿಗೆ ದೇವಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆಶ್ವೀಜ ಕೃಷ್ಣ ಪಕ್ಷದ ಚತುರ್ಥಿ ಹಾಗೂ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ 30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತವು ದರ್ಶನ, ಭದ್ರತೆ ಹಾಗೂ ಸಾರಿಗೆ ವ್ಯವಸ್ಥೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಹಾಸನಾಂಬೆ ದರ್ಶನದ ಸಮಯ ಮತ್ತು ಟಿಕೆಟ್ ದರ:
ಭಕ್ತರ ಅನುಕೂಲಕ್ಕಾಗಿ ಸಾರ್ವಜನಿಕ ಧರ್ಮದರ್ಶನದ ಜೊತೆಗೆ 300 ರೂ. ಹಾಗೂ 1,000 ರೂ. ಮುಖಬೆಲೆಯ ಪ್ರತ್ಯೇಕ ಸರತಿ ಸಾಲಿನ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಗೋಲ್ಡನ್ ಪಾಸ್ ಹೊಂದಿರುವವರಿಗೆ ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪಾಸ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶವಿರಲಿದೆ.
ಇನ್ನು ವಿಐಪಿ ದರ್ಶನಕ್ಕೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಅವಕಾಶ ನೀಡಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಾತ್ರೆಯ ಮೊದಲ ದಿನವಾದ ಇಂದು ಹಾಗೂ ಕೊನೆಯ ದಿನ ಯಾವುದೇ ಶಿಷ್ಟಾಚಾರ ಮತ್ತು ಪಾಸ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಲಡ್ಡು, ದೊನ್ನೆ ಪ್ರಸಾದದ ದರ ನಿಗದಿ:
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗಾಗಿ ಪ್ರಸಾದದ ದರವನ್ನೂ ನಿಗದಿಪಡಿಸಲಾಗಿದೆ. ಎರಡು ಲಡ್ಡುಗಳ ಪ್ಯಾಕೆಟ್‌ಗೆ 56 ರೂ. ಹಾಗೂ ಒಂದು ದೊನ್ನೆ ಪ್ರಸಾದಕ್ಕೆ 17 ರೂ. ದರ ನಿಗದಿಪಡಿಸಲಾಗಿದೆ.
2,000ಕ್ಕೂ ಅಧಿಕ ಪೊಲೀಸರಿಂದ ಭದ್ರತೆ:
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. 2,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದೇವಸ್ಥಾನದ ಸುತ್ತಮುತ್ತ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಜೊತೆಗೆ ಡೆಡಿಕೇಟೆಡ್ ಡ್ರೋನ್ ಕ್ಯಾಮೆರಾಗಳನ್ನೂ ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಹಾಸನಾಂಬೆ ಉತ್ಸವವು ಹಿಂದಿನ ವರ್ಷಗಳಿಗಿಂತ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ಸ್ಥಳೀಯರು ಸೇರಿದಂತೆ ಎಲ್ಲರೂ ಆಗಮಿಸುವ ಭಕ್ತರನ್ನು ಪ್ರೀತಿಯಿಂದ ಸ್ವಾಗತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
ದಸರಾ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು:
ಈ ಬಾರಿಯ ಹಾಸನಾಂಬೆ ಜಾತ್ರೆಯ ಅಂಗವಾಗಿ ಮೈಸೂರು ದಸರಾ ಮಾದರಿಯಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು 450 ಮಂದಿ ಭಾಗವಹಿಸುವ ಮುಕ್ತ ಕುಸ್ತಿ ಪಂದ್ಯಾಟ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ.
ಇದರ ಜೊತೆಗೆ ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ಜೋಡೆತ್ತುಗಳ ಪ್ರದರ್ಶನ, ಶ್ವಾನ, ಬೆಕ್ಕು ಹಾಗೂ ಟಗರುಗಳ ಪ್ರದರ್ಶನ, ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.
ಭಕ್ತರಿಗಾಗಿ ವಿಶೇಷ ರೈಲು, ಹೆಚ್ಚುವರಿ ಬಸ್‌ಗಳ ವ್ಯವಸ್ಥೆ:
ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರ ಸುಗಮ ಸಂಚಾರಕ್ಕಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು–ಹಾಸನ ಹಾಗೂ ಅರಸೀಕೆರೆ–ಹಾಸನ ಮಾರ್ಗಗಳಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಎರಡು ವಿಶೇಷ ರೈಲುಗಳನ್ನು ಓಡಿಸಲು ಅನುಮತಿ ನೀಡಲಾಗಿದೆ.
ಇನ್ನು ಸಾರಿಗೆ ಇಲಾಖೆಯು ಬೆಂಗಳೂರು, ಮೈಸೂರು, ಮಡಿಕೇರಿ ಸೇರಿದಂತೆ ಪ್ರಮುಖ ಸ್ಥಳಗಳಿಂದ ಹಾಸನಕ್ಕೆ 200ಕ್ಕೂ ಅಧಿಕ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿದೆ. ಇದರಿಂದ ಜಾತ್ರೆಯ ಅವಧಿಯಲ್ಲಿ ಭಕ್ತರು ಸುಲಭವಾಗಿ ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯಲು ಅನುಕೂಲವಾಗಲಿದೆ.
ಒಟ್ಟಿನಲ್ಲಿ, ಈ ಬಾರಿ ಹಾಸನಾಂಬೆ ಜಾತ್ರೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಭಕ್ತರು ದರ್ಶನದ ಸಮಯ, ಟಿಕೆಟ್ ವ್ಯವಸ್ಥೆ ಹಾಗೂ ಸಾರಿಗೆ ಸೌಲಭ್ಯಗಳ ಮಾಹಿತಿಯನ್ನು ತಿಳಿದುಕೊಂಡು ಪ್ರಯಾಣಿಸುವುದು ಉತ್ತಮ.










