ಯಾದಗಿರಿ: ಜಮೀನು ಕಬ್ಜಾ ಕೊಡಿಸುವ ಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿರುವ ಆರೋಪ ಯಾದಗಿರಿ ಜಿಲ್ಲೆಯಲ್ಲಿ ಕೇಳಿಬಂದಿದೆ.
ಹೈಕೋರ್ಟ್ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಜಮೀನಿನ ಸರ್ವೇ ನಂಬರ್ ಹಾಗೂ ಹಿಸ್ಸಾವನ್ನು ಸರಿಯಾಗಿ ಪರಿಶೀಲಿಸದೆ ಪಕ್ಕದ ರೈತರ ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಬೆಳೆ ನಾಶಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಡಗೇರಾ ತಾಲೂಕಿನ ತೇಕರಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈಕೋರ್ಟ್ ಆದೇಶ ಜಾರಿಗೊಳಿಸುವ ವೇಳೆ ಎಡವಟ್ಟು?
ಹೊನ್ನಮ್ಮ ಬಾವೂರ್ ಎಂಬುವವರಿಗೆ ಜಮೀನು ಕಬ್ಜಾ ಕೊಡಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಜಾರಿಗೊಳಿಸಲು ವಡಗೇರಾ ತಹಸೀಲ್ದಾರ್ ಮಂಗಳಾ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ತೇಕರಾಳ ಗ್ರಾಮಕ್ಕೆ ಆಗಮಿಸಿದ್ದರು.
ಆದರೆ, ಕಬ್ಜಾ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ಜಮೀನಿನ ಸರ್ವೇ ನಂಬರ್ ಹಾಗೂ ಹಿಸ್ಸಾಗಳನ್ನು ಸಮರ್ಪಕವಾಗಿ ಪರಿಶೀಲಿಸದೆ, ಮುಂಜಾಗ್ರತಾ ಸರ್ವೇ ನಡೆಸದೆ ಪಕ್ಕದ ಜಮೀನಿಗೆ ಟ್ರ್ಯಾಕ್ಟರ್ ನುಗ್ಗಿಸಿ ಬೆಳೆ ನಾಶಪಡಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
3 ಎಕರೆ ಪ್ರದೇಶದ ಬೆಳೆ ಧ್ವಂಸ:
ಕಂದಾಯ ಇಲಾಖೆ ಅಧಿಕಾರಿಗಳ ಈ ಕ್ರಮದಿಂದ ಸರ್ವೇ ನಂಬರ್ 253ರ ವಿವಿಧ ಹಿಸ್ಸಾಗಳಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ರೈತರು ನೀಡಿರುವ ಮಾಹಿತಿಯ ಪ್ರಕಾರ, ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಬೆಳೆ ಸಂಪೂರ್ಣ ನಾಶವಾಗಿದ್ದು, ಮತ್ತೊಂದು ಎಕರೆ ಜಮೀನಿನಲ್ಲಿದ್ದ ಹತ್ತಿ ಬೆಳೆ ಕೂಡ ಧ್ವಂಸಗೊಂಡಿದೆ.
ಒಟ್ಟು ಮೂರು ಎಕರೆ ಪ್ರದೇಶದ ಬೆಳೆ ನಾಶವಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ನಡುವೆ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಣೆದುರೇ ನಾಶವಾಗಿರುವುದನ್ನು ಕಂಡು ರೈತರು ಕಣ್ಣೀರು ಹಾಕಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ:
ಘಟನೆಯಿಂದ ಆಕ್ರೋಶಗೊಂಡ ತೇಕರಾಳ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಸ್ಥಳದಲ್ಲೇ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಕಾರ್ಯಾಚರಣೆ ನಡೆಸಿರುವುದೇ ಬೆಳೆ ನಾಶಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಹೈಕೋರ್ಟ್ ಆದೇಶ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ನಡೆದಿರುವ ಈ ಎಡವಟ್ಟು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳೆ ನಾಶದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.










