ವಾಶಿಂಗ್ಟನ್ : ಅಮೆರಿಕಾದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಟ್ರಂಪ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಸಾಂಪ್ರದಾಯಿಕವಾಗಿ ಕ್ಯಾಪಿಟಲ್‌ನ ರಮಣೀಯ ವೆಸ್ಟ್ ಲಾನ್‌ನಲ್ಲಿರುವ ಬೃಹತ್ ತಾತ್ಕಾಲಿಕ ವೇದಿಕೆಯಲ್ಲಿ ನಡೆಯುತ್ತಿದ್ದ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಶೀತ ಮುನ್ಸೂಚನೆಯಿಂದಾಗಿ ಒಳಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ನೂತನ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಉದ್ಯಮಿ ಮುಖೇಶ್ ಅಂಬಾನಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಟ್ರಂಪ್ ಅವರ ಕುಟುಂಬ ಮತ್ತು ಕ್ಯಾಬಿನೆಟ್ ಸದಸ್ಯರ ಜೊತೆಗೆ, ಎಲೋನ್ ಮಸ್ಕ್, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಟೆಕ್ ಉದ್ಯಮಿಗಳು, ಗಣ್ಯರು ಕ್ಯಾಪಿಟಲ್‌ನಲ್ಲಿ ಹಾಜರಿದ್ದರು. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ 100 ಆದೇಶಗಳಿಗೆ ಸಹಿ ಮಾಡುವ ನಿರೀಕ್ಷೆಯಿದೆ.