ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ ಒಳಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ರಾಜ್ ಕುಂದ್ರಾ ಮೇಲೆ ದಾಳಿ ಆಗಿರುವ ಸಾಧ್ಯತೆ ಇದೆ. 2017 ರಲ್ಲಿ ರಾಜ್ ಕುಂದ್ರಾ ಮತ್ತು ಅವರ ಕೆಲವು ಆಪ್ತರು ಭಾರಿ ಮೊತ್ತದ ಹಣವನ್ನು ಬಿಟ್ಕಾಯ್ನ್ ಮೇಲೆ ಹೂಡಿಕೆ ಮಾಡಿ 6600 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು. ಜೊತೆಗೆ ಜನರಿಗೆ ಶೇ 10 ಹಣ ಪಾವತಿಸುವುದಾಗಿ ಹೇಳಿ ಬಂಡವಾಳವನ್ನು ಸಹ ಆಕರ್ಷಿಸಿದ್ದರು. 2018 ರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಈ ಬಗ್ಗೆ ಸಮನ್ಸ್ ನೀಡಿ ವಿಚಾರಣೆ ಸಹ ಮಾಡಲಾಗಿತ್ತು.