ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯಬೇಕೆಂದು ಸಮೀಪದ ಜಕ್ಕಲಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಶಿವರಾಜ ಮುಗಳಿ ವಿಶೇಷ ಹರಕೆ ಹೊತ್ತಿದ್ದಾರೆ.
ಜಿ.ಎಸ್. ಪಾಟೀಲರು ಸಚಿವರಾಗುವವರೆಗೆ ಗಡ್ಡ, ಮೀಸೆ ಹಾಗೂ ತಲೆಯ ಕೂದಲನ್ನು ಕತ್ತರಿಸಿಕೊಳ್ಳುವುದಿಲ್ಲ ಎಂದು ಸಂಕಲ್ಪ ಮಾಡಿರುವ ಶಿವರಾಜ ಮುಗಳಿ, ಬಳಿಕ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹರಕೆ ತೀರಿಸುವುದಾಗಿ ತಿಳಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿ.ಎಸ್. ಪಾಟೀಲರು ಕ್ಷೇತ್ರದ ಅಭಿವೃದ್ಧಿ, ರೈತರ ಸಮಸ್ಯೆಗಳ ಪರಿಹಾರ ಹಾಗೂ ಜನಸಂಪರ್ಕದ ಮೂಲಕ ಜನರ ವಿಶ್ವಾಸ ಗಳಿಸಿದ್ದು, ಸಚಿವ ಸ್ಥಾನಕ್ಕೆ ಅರ್ಹರು ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ರೋಣ ಕ್ಷೇತ್ರದಲ್ಲಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ವಿವಿಧ ರೀತಿಯಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.



