ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪರಿಸರದ ಮೇಲೆ ಮಾನವನು ಮಾಡುತ್ತಿರುವ ಅತಿಕ್ರಮಣದಿಂದ ಪ್ರಕೃತಿ ಹಾನಿಗೊಳಗಾಗಿ ಮಾನವ ಬದುಕಿನ ಮೇಲೆಯೇ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಡಾ. ಎಸ್.ಸಿ. ಚವಡಿ ಹೇಳಿದರು.
ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಕೈಗಾರಿಕರಣ, ಯಾಂತ್ರೀಕರಣ, ಪ್ಲಾಸ್ಟಿಕ್ ಬಳಕೆ ಹಾಗೂ ಪರಿಸರ ಮಾಲಿನ್ಯದಿಂದ ಪ್ರಕೃತಿಗೆ ಹಾನಿಯಾಗುತ್ತಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಪರಿಸರ ಕಾಳಜಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪುನಿತ ಓಲೇಕಾರ ಮಾತನಾಡಿ, ಪರಿಸರ ಸಂರಕ್ಷಣೆ ಸಂಸ್ಥೆಯ ಪ್ರಮುಖ ಉದ್ದೇಶವಾಗಿದ್ದು, ಪರಿಸರ ಉಳಿವಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಂತಾ ಬೆನಕನಹಳ್ಳಿ, ಪ್ರಕಾಶ ಮದ್ದಿನ, ಎ.ಎಂ. ಅಂಗಡಿ, ಇ.ಎಂ. ಗುಳೆದಗುಡ್ಡ, ವೀರುಪಾಕ್ಷಪ್ಪ ಕಣವಿ, ಶೈಲಾ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



