ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಹತಾಶ ರಾಜಕಾರಣದ ಭಾಗ ಎಂದು ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ಅಧ್ಯಕ್ಷ ಸಂತೋಷ ಅಕ್ಕಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಪ್ರದೇಶ ವಿದ್ಯುತ್ ನಿಗಮದ ಭವಿಷ್ಯ ನಿಧಿ ಹೂಡಿಕೆ ಪ್ರಕರಣವನ್ನು ಕೇಂದ್ರ ಸರ್ಕಾರದ ನಿರ್ಧಾರವೆಂದು ಬಿಂಬಿಸುವುದು ತಪ್ಪು. ಸ್ಥಳೀಯ ಮಟ್ಟದಲ್ಲಿ ನಡೆದ ನಿಯಮ ಉಲ್ಲಂಘನೆಯಿಂದ ಆ ಪ್ರಕರಣ ಸಂಭವಿಸಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ದಿವಾಳಿತನ ಪ್ರಕ್ರಿಯೆಯ ಮೂಲಕ ಆಸ್ತಿಗಳನ್ನು ಮರುಪಡೆಯುವ ಕಾರ್ಯ ನಡೆದಿದ್ದು, ನೌಕರರ ವೈಯಕ್ತಿಕ ಭವಿಷ್ಯ ನಿಧಿ ಖಾತೆಗಳಿಗೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ. 8.25ಕ್ಕೆ ಕಾಯ್ದುಕೊಂಡಿರುವುದು ಮೋದಿ ಸರ್ಕಾರದ ಕಾರ್ಮಿಕ ಪರ ನಿಲುವಿಗೆ ಸಾಕ್ಷಿಯಾಗಿದೆ. 34 ಕೋಟಿಗೂ ಅಧಿಕ ಸದಸ್ಯರ ಖಾತೆಗಳಿಗೆ ಕೇಂದ್ರೀಕೃತ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಬಡ್ಡಿ ಜಮೆ ಮಾಡುವ ವ್ಯವಸ್ಥೆ ಜಾರಿಗೊಂಡಿದ್ದು, ಹಣ ವಾಪಸ್ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ ಎಂದು ಹೇಳಿದರು.
ಭವಿಷ್ಯ ನಿಧಿ ಹಣವನ್ನು ಸುರಕ್ಷಿತ ಸರ್ಕಾರಿ ಬಾಂಡ್ಗಳು ಹಾಗೂ ಉನ್ನತ ದರ್ಜೆಯ ಸಂಸ್ಥೆಗಳಲ್ಲಷ್ಟೇ ಹೂಡಿಕೆ ಮಾಡುವ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ವೈದ್ಯಕೀಯ, ಶಿಕ್ಷಣ ಹಾಗೂ ಮದುವೆ ಸೇರಿದಂತೆ ತುರ್ತು ಅಗತ್ಯಗಳಿಗೆ ಸ್ವಯಂಚಾಲಿತ ಹಣ ಬಿಡುಗಡೆ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ ಅವರು, ಗದಗ ಜಿಲ್ಲೆಯ ಕಾರ್ಮಿಕರು ಹಾಗೂ ಯುವಜನರು ಇಂತಹ ಪ್ರಚಾರವನ್ನು ನಂಬುವುದಿಲ್ಲ ಎಂದು ಹೇಳಿದರು.
“ಇಪಿಎಫ್ ಹಣ ಸುರಕ್ಷಿತವಾಗಿದೆ. ಕಾರ್ಮಿಕರ ಹಣಕ್ಕೆ ಮೋದಿ ಸರ್ಕಾರವೇ ಭದ್ರತಾ ಕವಚವಾಗಿದೆ. ಕಾಂಗ್ರೆಸ್ ಸತ್ಯ ಮರೆಮಾಚಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ.”
– ಸಂತೋಷ ಅಕ್ಕಿ, ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ



