ಬೆಂಗಳೂರು: ಬೆಂಗಳೂರಿನಲ್ಲಿ ಎಐ ಕ್ಯಾಮೆರಾದ ವಿಚಿತ್ರ ಎಡವಟ್ಟು ಬೆಳಕಿಗೆ ಬಂದಿದೆ.
ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡು ಸ್ಕೂಟರ್ ಚಲಾಯಿಸುತ್ತಿದ್ದ ಸವಾರನಿಗೆ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರೂಪಾಯಿ ದಂಡ ವಿಧಿಸಲಾಗಿದೆ.
ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸೌವಿಕ್ ದತ್ತಾ ಎಂಬುವವರು ತಮ್ಮ ಪತ್ನಿಯ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಬೆನ್ನಿಗೆ ಗಿಟಾರ್ ಚೀಲವನ್ನು ಹಾಕಿಕೊಂಡಿದ್ದರು.
ಔಟರ್ ರಿಂಗ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಎಐ ಆಧಾರಿತ ಟ್ರಾಫಿಕ್ ಕ್ಯಾಮೆರಾ, ಸೌವಿಕ್ ಅವರ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿದೆ ಎನ್ನಲಾಗಿದೆ.
ಇದಾದ ಬಳಿಕ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ನಿಯಮ ಉಲ್ಲಂಘನೆಯಡಿ 500 ರೂಪಾಯಿ ದಂಡದ ಚಲನ್ ಜಾರಿಯಾಗಿದೆ.
ಮರುದಿನ ಸೌವಿಕ್ ಅವರ ಪತ್ನಿಯ ಮೊಬೈಲ್‌ಗೆ ದಂಡದ ಮೆಸೇಜ್ ಬಂದಿದೆ. ಜೊತೆಗೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಫೋಟೋ ಕೂಡ ಬಂದಿದ್ದು, ಅದನ್ನು ನೋಡಿದ ದಂಪತಿಗೆ ಎಐ ಕ್ಯಾಮೆರಾದ ಎಡವಟ್ಟು ತಿಳಿದುಬಂದಿದೆ.
ಈ ಬಗ್ಗೆ ಸೌವಿಕ್ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಚಲನ್‌ನ ಫೋಟೋ ಹಂಚಿಕೊಂಡು ಬೆಂಗಳೂರು ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ.



