ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಕಾನೂನು ಪ್ರಕ್ರಿಯೆ ನಾಳೆ ನಡೆಯಲಿದೆ.
ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿರುವ ಪ್ರದೂಷ್ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಷ್ ಅವರನ್ನು ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಕೋರ್ಟ್ ಪರಿಗಣಿಸಿದೆ. ಹೀಗಾಗಿ ಇನ್ಮುಂದೆ ಪ್ರಕರಣದಲ್ಲಿ ಒಟ್ಟು 16 ಆರೋಪಿಗಳು ಮಾತ್ರ ಉಳಿಯಲಿದ್ದಾರೆ.
ನಾಳೆ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರದೂಷ್ ಅವರ ಮುಖ್ಯ ವಿಚಾರಣೆ ನಡೆಯಲಿದೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಪ್ರದೂಷ್ ಅವರನ್ನು ಚೀಫ್ ಎಕ್ಸಾಮಿನೇಷನ್ ಮಾಡಲಿದ್ದಾರೆ. ಈಗಾಗಲೇ ಪ್ರದೂಷ್ ಲಿಖಿತ ರೂಪದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದು, ನಾಳೆ ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ.
ಪ್ರಾಸಿಕ್ಯೂಷನ್ ಪರ ಚೀಫ್ ಎಕ್ಸಾಮಿನೇಷನ್ ಪೂರ್ಣಗೊಂಡ ಬಳಿಕ ಆರೋಪಿಗಳ ಪರ ವಕೀಲರು ಪ್ರದೂಷ್ ಅವರನ್ನು ಕ್ರಾಸ್ ಎಕ್ಸಾಮಿನೇಷನ್ಗೆ ಒಳಪಡಿಸಲಿದ್ದಾರೆ. ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 16 ಆರೋಪಿಗಳ ಪರ ವಕೀಲರು ಪ್ರತ್ಯೇಕವಾಗಿ ಪ್ರಶ್ನೆಗಳನ್ನು ಕೇಳಲಿದ್ದಾರೆ.
ಮಾಫಿ ಸಾಕ್ಷಿಯ ಹೇಳಿಕೆಯನ್ನು ಕ್ರಾಸ್ ಎಕ್ಸಾಮಿನೇಷನ್ ಮೂಲಕ ಪರಿಶೀಲಿಸುವುದು ಪ್ರಕರಣದ ಪ್ರಮುಖ ಹಂತವಾಗಿದೆ. ಶಿಕ್ಷೆಯಿಂದ ವಿನಾಯಿತಿ ಪಡೆಯುವ ಉದ್ದೇಶದಿಂದ ಸಾಕ್ಷಿ ಸುಳ್ಳು ಹೇಳುತ್ತಿದ್ದಾನೆಯೇ ಎಂಬುದನ್ನು ಆರೋಪಿಗಳ ಪರ ವಕೀಲರು ಪ್ರಶ್ನೆಗಳ ಮೂಲಕ ಪರಿಶೀಲಿಸಲಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಪ್ರದೂಷ್ ನೀಡುವ ಸಾಕ್ಷಿ ವಿಚಾರಣೆ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮಹತ್ವ ಪಡೆಯಲಿದೆ. ಚೀಫ್ ಎಕ್ಸಾಮಿನೇಷನ್ ಹಾಗೂ ಕ್ರಾಸ್ ಎಕ್ಸಾಮಿನೇಷನ್ನಲ್ಲಿ ಹೊರಬರುವ ಮಾಹಿತಿಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ದರ್ಶನ್ ಅರ್ಜಿ ವಜಾ:
ಮಾಫಿ ಸಾಕ್ಷಿ ಪ್ರದೂಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಮಯ ಬೇಕಿದೆ ಎಂಬ ಕಾರಣ ನೀಡಿ ಹೇಳಿಕೆ ಮುಂದೂಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ ಈ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ನಾಳೆ ಪ್ರದೂಷ್ ಅವರ ಸಾಕ್ಷಿ ವಿಚಾರಣೆ ನಡೆಯಲಿದೆ.



