HomeBengaluru Newsಮದುವೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ; ಖತರ್ನಾಕ್ ತಾಯಿ-ಮಗ ಅರೆಸ್ಟ್!

ಮದುವೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ; ಖತರ್ನಾಕ್ ತಾಯಿ-ಮಗ ಅರೆಸ್ಟ್!

For Dai;y Updates Join Our whatsapp Group

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮದುವೆಗೆ ವರನ ಹುಡುಕಾಟದಲ್ಲಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಗುರುತಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಇವರನ್ನು ಕೇರಳದ ವಯನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಮೂಲತಃ ಮೈಸೂರಿನವರಾದ ತಾಯಿ-ಮಗ, ಶಾದಿ ಡಾಟ್ ಕಾಮ್ ಸೇರಿದಂತೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಶ್ರೀಮಂತ ಕುಟುಂಬದವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಪ್ರದೀಪ್ ಜೋಸೆಫ್ ತಾನು ಪಿಎಚ್‌ಡಿ ಮಾಡಿರುವ ಡಾಕ್ಟರೇಟ್ ಪದವೀಧರ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಮೈಸೂರಿನ ಬಾಡಿಗೆ ಬಂಗಲೆಯೊಂದನ್ನು ತನ್ನದೇ ಆಸ್ತಿ ಎಂದು ಹೇಳಿಕೊಂಡು ವಧುವಿನ ಕುಟುಂಬವನ್ನು ನಂಬಿಸುತ್ತಿದ್ದ ಎನ್ನಲಾಗಿದೆ.

ಮದುವೆ ಮಾತುಕತೆ ನಡೆದು ಸಂಬಂಧ ಕುದುರಿದ ಬಳಿಕ, ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿ ವಧುವಿನ ಕುಟುಂಬದಿಂದ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಪರಾರಿಯಾಗುವುದು ಇವರ ವಂಚನೆಯ ವಿಧಾನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಮೂಲದ ಕುಟುಂಬವೊಂದು ಕೂಡ ಆರೋಪಿಯ ಮಾತುಗಳನ್ನು ನಂಬಿ ತಮ್ಮ ಮಗಳ ಮದುವೆಗೆ ಸಿದ್ಧತೆ ಮಾಡಿಕೊಂಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು.

ಈ ವೇಳೆ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾಕ್ಷ್ಯಾಧಾರಗಳೊಂದಿಗೆ ಆರೋಪಿಯ ಅಸಲಿ ಮುಖವನ್ನು ವಧುವಿನ ಕುಟುಂಬಕ್ಕೆ ತಿಳಿಸಿದ್ದು, ಕುಟುಂಬಕ್ಕೆ ಆಘಾತ ಎದುರಾಗಿದೆ.

ತನಿಖೆ ವೇಳೆ ಇದೇ ರೀತಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಯನಾಡಿನಲ್ಲಿ ತಾಯಿ-ಮಗನ ಬಂಧನ:

ವಧುವಿನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ಆರೋಪಿಗಳಿಗಾಗಿ ಮೈಸೂರಿಗೆ ತೆರಳಿದ್ದರು. ಆದರೆ ಪೊಲೀಸರ ದಾಳಿ ವೇಳೆ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇರಳದ ವಯನಾಡಿನಲ್ಲಿ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ವಧು-ವರರ ಹುಡುಕಾಟ ನಡೆಸುವವರು ಅಪರಿಚಿತರ ಮಾತುಗಳನ್ನು ನಂಬುವ ಮುನ್ನ ಅವರ ಹಿನ್ನೆಲೆ, ಉದ್ಯೋಗ, ಆಸ್ತಿ ಹಾಗೂ ಇತರ ವಿವರಗಳನ್ನು ಪರಿಶೀಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img