ಮಂಡ್ಯ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ ಒಳಹರಿವು 9,438 ಕ್ಯೂಸೆಕ್ಗೆ ಏರಿಕೆಯಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 108.63 ಅಡಿ ನೀರು ಸಂಗ್ರಹವಾಗಿದ್ದು, 30.367 ಟಿಎಂಸಿ ನೀರು ಲಭ್ಯವಿದೆ.
ಕೆಆರ್ಎಸ್ ಜಲಾಶಯದಿಂದ ಸದ್ಯ 4,478 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿದು ಒಳಹರಿವು ಹೆಚ್ಚಾದರೆ, ಶೀಘ್ರದಲ್ಲೇ ಕೆಆರ್ಎಸ್ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.
ಕೆಆರ್ಎಸ್ಗೆ ಒಳಹರಿವು ಮತ್ತಷ್ಟು ಹೆಚ್ಚಾದರೆ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿಯೂ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ.



