ಬೆಂಗಳೂರು: ಲೋನ್ ಕಟ್ಟದ ಕಾರುಗಳನ್ನೇ ಕಡಿಮೆ ಬೆಲೆಗೆ ಖರೀದಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸೋಮೇಶ್, ಸಂತೋಷ್ ಮತ್ತು ಪ್ರಭಾಕರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಲೋನ್ ಬಾಕಿ ಇರುವ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು. ಬಳಿಕ ಕಾರಿನ ಲೋನ್ ಸಂಪೂರ್ಣ ಪಾವತಿಸಲಾಗಿದೆ ಎಂದು ತೋರಿಸಲು ನಕಲಿ ಎನ್ಒಸಿ ಸೃಷ್ಟಿಸುತ್ತಿದ್ದರು.
ಇಷ್ಟಕ್ಕೇ ನಿಲ್ಲದ ಆರೋಪಿಗಳು, ನಕಲಿ ದಾಖಲೆಗಳ ಆಧಾರದಲ್ಲಿ ಆರ್ಸಿ ಕಾರ್ಡ್ಗಳನ್ನು ಕೂಡ ಸೃಷ್ಟಿಸಿ, ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಬಳಿಯಿಂದ 11 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿಸಿದಾಗ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ದೊಡ್ಡ ಜಾಲವೇ ಬೆಳಕಿಗೆ ಬಂದಿದೆ.
ಹಲವಾರು ವರ್ಷಗಳ ಹಳೆಯ ದಾಖಲೆಗಳ ಮಾದರಿಯಲ್ಲಿ ಆಸ್ತಿ ಪತ್ರ, ಹಕ್ಕುಪತ್ರ, ಜಮೀನು ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಆರೋಪಿಗಳು ಸಿದ್ಧಪಡಿಸುತ್ತಿದ್ದರು ಎನ್ನಲಾಗಿದೆ.
ಇದಲ್ಲದೆ ಮೈಸೂರು ಸರ್ಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆ ಮತ್ತು ಕಚೇರಿಗಳ ಹೆಸರಿನಲ್ಲಿ ನಕಲಿ ದಾಖಲೆಗಳು ಪತ್ತೆಯಾಗಿವೆ.
ಬೇಕಾದ ರೀತಿಯಲ್ಲಿ ನಕಲಿ ಸೀಲುಗಳನ್ನು ತಯಾರಿಸಲು ಆರೋಪಿಗಳು ಸೀಲು ತಯಾರಿಸುವ ಯಂತ್ರವನ್ನೇ ಹೊಂದಿದ್ದರು ಎನ್ನಲಾಗಿದೆ. ಆರೋಪಿಗಳ ಬಳಿಯಿಂದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಅಧಿಕಾರಿಗಳ ಹೆಸರಿನ 428 ಸೀಲುಗಳು ಪತ್ತೆಯಾಗಿವೆ.
ಇದರ ಜೊತೆಗೆ ನಕಲಿಯಾಗಿ ಸೃಷ್ಟಿಸಲಾಗಿದ್ದ ಛಾಪಾ ಕಾಗದಗಳೂ ಪೊಲೀಸರ ಕೈಗೆ ಸಿಕ್ಕಿವೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು, ನಕಲಿ ದಾಖಲೆಗಳ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



