ಬೆಳಗಾವಿ: ನಗರದ ಮಂಡೋಳಿ ರಸ್ತೆಯಲ್ಲಿ ವಾಸವಿರುವ ವಕೀಲೆ ಪೂಜಾ ಕಾಕತಕರ್ ಅವರ ಮನೆ ಮೇಲೆ ಮಧ್ಯರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 25ರ ರಾತ್ರಿ 1ರಿಂದ 2 ಗಂಟೆಯ ನಡುವೆ ನಡೆದ ಈ ದಾಳಿಯಲ್ಲಿ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ಫೈರಿಂಗ್ ಮಾಡಲಾಗಿದೆ.
ದಾಳಿ ನಡೆಯುವ ವೇಳೆಯಲ್ಲಿ ಮೊದಲ ಮಹಡಿಯಲ್ಲಿ ವಕೀಲೆಯ ಪುತ್ರಿ ಓದುತ್ತಿದ್ದಳು ಎನ್ನುವುದು ಘಟನೆಗೆ ಗಂಭೀರ ತಿರುವು ನೀಡಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಗುಂಡಿನ ದಾಳಿಯಿಂದ ಮನೆಯ ಗಾಜುಗಳಿಗೆ ಹಾನಿಯಾಗಿದ್ದು, ಸ್ಪಷ್ಟ ಫೈರಿಂಗ್ ಗುರುತುಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಹಾಗೂ ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಾಕ್ಷ್ಯ ಸಂಗ್ರಹ ಕಾರ್ಯ ಮುಂದುವರಿದಿದೆ. 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿರುವ ಪೂಜಾ ಕಾಕತಕರ್ ಅವರು ಹಲವಾರು ಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದ ಮಂಡಿಸುತ್ತಿರುವ ಹಿನ್ನೆಲೆ, ಈ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಫೊರೆನ್ಸಿಕ್ ವರದಿ (FSL)ಗಾಗಿ ಪೊಲೀಸರು ಕಾಯುತ್ತಿದ್ದು, ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.



