ಬೆಂಗಳೂರು: ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಪರಿಷ್ಕೃತ ದರ ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ.
ಹೊಸ ದರದ ಪ್ರಕಾರ, 500 ಗ್ರಾಂ ಮೊಸರಿನ ಪೊಟ್ಟಣದ ಬೆಲೆ 28 ರೂಪಾಯಿಯಿಂದ 34 ರೂಪಾಯಿಗೆ ಏರಿಕೆಯಾಗಿದ್ದರೆ, ಒಂದು ಕೆ.ಜಿ. ಮೊಸರಿನ ಬೆಲೆ 54 ರೂಪಾಯಿಯಿಂದ 68 ರೂಪಾಯಿಗೆ ಹೆಚ್ಚಳವಾಗಿದೆ.
ಇನ್ನು ವಿವಿಧ ಮಾದರಿಯ ನಂದಿನಿ ಹಾಲಿನ ದರವೂ ಏರಿಕೆಯಾಗಿದೆ. ಟೋನ್ಡ್ ಹಾಲಿನ ಬೆಲೆ 46 ರೂಪಾಯಿಯಿಂದ 54 ರೂಪಾಯಿಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಬೆಲೆ 47 ರೂಪಾಯಿಯಿಂದ 56 ರೂಪಾಯಿಗೆ ಹೆಚ್ಚಿಸಲಾಗಿದೆ.
ಹಾಗೆಯೇ ಹೋಮೋಜಿನೈಸ್ಡ್ ಹಸುವಿನ ಹಾಲು 50 ರೂಪಾಯಿಯಿಂದ 58 ರೂಪಾಯಿಗೆ, ಸ್ಪೆಷಲ್ ಟೋನ್ಡ್ ಹಾಲು 52 ರೂಪಾಯಿಯಿಂದ 64 ರೂಪಾಯಿಗೆ ಹಾಗೂ ಶುಭಂ ಹಾಲಿನ ದರ 52 ರೂಪಾಯಿಯಿಂದ 64 ರೂಪಾಯಿಗೆ ಏರಿಕೆಯಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂಪಾಯಿಯಿಂದ 65 ರೂಪಾಯಿಗೆ ಹೆಚ್ಚಳವಾಗಿದೆ.
ದರ ಏರಿಕೆಗೆ ಕೆಎಂಎಫ್ ನೀಡಿದ ಕಾರಣವೇನು?
ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಪ್ರತಿದಿನ ಸುಮಾರು 8.9 ಲಕ್ಷ ರೈತರು ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂಪಾಯಿ ಪಾವತಿಸಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.
ಈ ವರ್ಷ ಮಳೆ ಕೊರತೆಯಿಂದ ನೀರು ಮತ್ತು ಮೇವಿನ ಅಭಾವ ಎದುರಾಗಿದ್ದು, ಜಾನುವಾರುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಖರೀದಿಗೆ ರೈತರು ಹೆಚ್ಚಿನ ಹಣ ವ್ಯಯಿಸುವಂತಾಗಿದೆ. ಹೀಗಾಗಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್ಗೆ 10ರಿಂದ 12 ರೂಪಾಯಿ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಬೆಳೆಸುವ ಉದ್ದೇಶದಿಂದ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ. ಟೋನ್ಡ್ ಹಾಲಿನ ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಿ, ಅದರಲ್ಲಿ 7 ರೂಪಾಯಿಯನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲು ಸೂಚಿಸಲಾಗಿದೆ.
ಇದರೊಂದಿಗೆ ಜಿಡ್ಡಿನಾಂಶದ ಪ್ರಮಾಣದ ಆಧಾರದ ಮೇಲೆ ನಂದಿನಿಯ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಲಾಗಿದೆ.










