ಮೈಸೂರು: ಇದೀಗ ಸಂಸ್ಕೃತಿ ಮತ್ತು ಕೃತಕ ಬುದ್ಧಿಮತ್ತೆಯ ಹೊಸ ಯುಗಕ್ಕೆ ವೇದಿಕೆಯಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಿ ಕನ್ನಡಕ್ಕೆ ಅನುವಾದಗೊಂಡಿರುವ ಐತಿಹಾಸಿಕ ಕೃತಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದಿರುವ ‘My Name Is Gauhar Jaan: The Life and Times of a Musician’ ಪುಸ್ತಕವನ್ನು ‘TransLit’ ಎಂಬ ಎಐ ತಂತ್ರಜ್ಞಾನ ಬಳಸಿ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಕೃತಿಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ ಕೇವಲ ಕೆಲವೇ ವಾರಗಳಲ್ಲಿ ಅನುವಾದ ಕಾರ್ಯ ಪೂರ್ಣಗೊಳಿಸಿದೆ. ಶೇಕಡಾ 80ರಷ್ಟು ನಿಖರತೆಯೊಂದಿಗೆ ಎಐ ಅನುವಾದ ಮಾಡಿದ್ದು, ಬಳಿಕ ಮಾನವ ಸಂಪಾದಕರು ಅಂತಿಮ ತಿದ್ದುಪಡಿ ನಡೆಸಿದ್ದಾರೆ.
ಗೌಹರ್ ಜಾನ್ ಭಾರತೀಯ ಸಂಗೀತ ಇತಿಹಾಸದ ಅಪರೂಪದ ಹೆಸರು. 1902ರಲ್ಲಿ ಗ್ರಾಮೊಫೋನ್‌ನಲ್ಲಿ ಧ್ವನಿ ಮುದ್ರಿಸಿದ ಭಾರತದ ಮೊದಲ ಮಹಿಳಾ ಕಲಾವಿದೆ ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವನದ ಕೊನೆಯ ಹಂತದಲ್ಲಿ ಮೈಸೂರು ಮಹಾರಾಜರ ಆಶ್ರಯ ಪಡೆದಿದ್ದ ಅವರು, 1930ರಲ್ಲಿ ಮೈಸೂರಿನಲ್ಲೇ ಕೊನೆಯುಸಿರೆಳೆದಿದ್ದರು.
ಇದೀಗ ಅವರ ಜೀವನ ಚರಿತ್ರೆ ಆಧುನಿಕ ಎಐ ತಂತ್ರಜ್ಞಾನದ ನೆರವಿನಿಂದ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಭಾರತೀಯ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ.



