HomeBengaluru News'ಕುಟುಂಬದ ಆದಾಯ ₹40 ಸಾವಿರ ಹೇಗೆ?' KPSC ಮಾಜಿ ಅಧ್ಯಕ್ಷರ ಪುತ್ರಿ ಪ್ರಕರಣದಲ್ಲಿ ಹೈಕೋರ್ಟ್ ತೀಕ್ಷ್ಣ...

‘ಕುಟುಂಬದ ಆದಾಯ ₹40 ಸಾವಿರ ಹೇಗೆ?’ KPSC ಮಾಜಿ ಅಧ್ಯಕ್ಷರ ಪುತ್ರಿ ಪ್ರಕರಣದಲ್ಲಿ ಹೈಕೋರ್ಟ್ ತೀಕ್ಷ್ಣ ಪ್ರಶ್ನೆ!

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅವರ ಪುತ್ರಿ ಸುಮಾ ಸಾಹುಕರ್ ಸಲ್ಲಿಸಿದ್ದ ಆದಾಯ ಘೋಷಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಸುಮಾ ಸಾಹುಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಕುಟುಂಬದ ವಾರ್ಷಿಕ ಆದಾಯ ₹40 ಸಾವಿರ ಎಂದು ಘೋಷಿಸಿರುವುದು ದಾಖಲೆಗಳಲ್ಲಿ ಇದ್ದಾಗ, ಆ ಸಮಯದಲ್ಲಿ ಅವರ ತಂದೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಈ ಪರಿಸ್ಥಿತಿಯಲ್ಲಿ ಅಂತಹ ಆದಾಯ ಘೋಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.

3ಬಿ ಮೀಸಲಾತಿ ವರ್ಗದಡಿ ಪರೀಕ್ಷೆಗೆ ಹಾಜರಾಗಲು ಕುಟುಂಬದ ಆದಾಯ ₹40 ಸಾವಿರ ಎಂದು ಘೋಷಿಸಲಾಗಿತ್ತು. ಆದರೆ ಕುಟುಂಬದ ಆದಾಯ ₹25 ಲಕ್ಷವಾಗಿದ್ದರೆ ಅದು ಸ್ಪಷ್ಟ ವಂಚನೆಯಲ್ಲವೇ? ಗೊಂದಲವಿದ್ದಾಗ ಮಾತ್ರ ತನಿಖೆ ಅಗತ್ಯ. ಇಲ್ಲಿ ದಾಖಲೆಗಳು ಸ್ಪಷ್ಟವಾಗಿರುವಾಗ ಇನ್ನೇನು ತನಿಖೆ ಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಮೀಸಲಾತಿ ಸೌಲಭ್ಯ ಪಡೆಯಲು ಸುಳ್ಳು ಆದಾಯ ಘೋಷಣೆ ಸಲ್ಲಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್, ಘೋಷಣೆಯಲ್ಲಿ ನಮೂದಿಸಿರುವುದು ಸುಮಾ ಸಾಹುಕರ್ ಅವರ ವೈಯಕ್ತಿಕ ಆದಾಯವಾಗಿದ್ದು, ಕುಟುಂಬದ ಆದಾಯವಲ್ಲ ಎಂದು ವಾದ ಮಂಡಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, 3ಬಿ ಮೀಸಲಾತಿಗೆ ಕುಟುಂಬದ ಆದಾಯವೇ ಮಾನದಂಡವಾಗಿದ್ದು, ವೈಯಕ್ತಿಕ ಆದಾಯಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿಜವಾಗಿಯೂ ₹40 ಸಾವಿರ ವಾರ್ಷಿಕ ಆದಾಯ ಹೊಂದಿದ್ದ ಅರ್ಹ ಅಭ್ಯರ್ಥಿಯೊಬ್ಬರ ಅವಕಾಶವನ್ನು ಕಸಿದುಕೊಳ್ಳಲಾಗಿದೆ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

ಇದೇ ವೇಳೆ, ಅಂತಿಮ ಆಯ್ಕೆಪಟ್ಟಿ ಪ್ರಕಟವಾಗುವ ಮುನ್ನವೇ ಸುಮಾ ಸಾಹುಕರ್ ತಮ್ಮ ಅಭ್ಯರ್ಥಿತ್ವವನ್ನು ಹಿಂಪಡೆದಿದ್ದರು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅಭ್ಯರ್ಥಿತ್ವ ಹಿಂಪಡೆದಿರಬಹುದು. ಆದರೆ ಆರಂಭದಲ್ಲೇ ಅರ್ಜಿ ಸಲ್ಲಿಸಿ ಸ್ಪರ್ಧಿಸಿದ್ದೇಕೆ? ಇದರಿಂದ ಬಡ ಅಭ್ಯರ್ಥಿಯೊಬ್ಬರ ಅವಕಾಶ ಕಸಿದುಕೊಂಡಿಲ್ಲವೇ? ಎಂದು ಪ್ರಶ್ನಿಸಿತು.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ತಮ್ಮ ಪುತ್ರಿಯರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img