HomeIndia Newsವಿದ್ಯಾರ್ಥಿಗಳ ಪ್ರತಿಭಟನೆ ಪ್ರಕರಣ: ಪೊಲೀಸರ ಬಲವಂತದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್! ಅಪ್ರಾಪ್ತರ ಬಿಡುಗಡೆಗೆ ಆದೇಶ

ವಿದ್ಯಾರ್ಥಿಗಳ ಪ್ರತಿಭಟನೆ ಪ್ರಕರಣ: ಪೊಲೀಸರ ಬಲವಂತದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್! ಅಪ್ರಾಪ್ತರ ಬಿಡುಗಡೆಗೆ ಆದೇಶ

ನವದೆಹಲಿ: ಜಂತರ್ ಮಂತರ್ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.

ಅಪರಾಧ ಹಿನ್ನೆಲೆ ಇಲ್ಲದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಠಿಣ ಅಥವಾ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ಬಂಧನಕ್ಕೊಳಗಾಗಿರುವ 18 ವರ್ಷದೊಳಗಿನ ಅಪ್ರಾಪ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ನ್ಯಾಯಪೀಠ, ಕಾನೂನನ್ನು ಕೈಗೆತ್ತಿಕೊಂಡವರು ಕಾನೂನಿನ ಎದುರು ಉತ್ತರಿಸಬೇಕಾಗುತ್ತದೆ. ಅದೇ ವೇಳೆ, ಘಟನೆಯಲ್ಲಿ ಗಾಯಗೊಂಡಿರುವ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳ ಆತಂಕಗಳನ್ನೂ ನ್ಯಾಯಯುತ ತನಿಖೆ ಪರಿಹರಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಅಪರಾಧ ಹಿನ್ನೆಲೆ ಇಲ್ಲದ ಸಾಮಾನ್ಯ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನಾಕಾರರ ವೈಯಕ್ತಿಕ ಮಾಹಿತಿ ಹಾಗೂ ಡಿಜಿಟಲ್ ಡೇಟಾವನ್ನು ಪೊಲೀಸರು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಸೂಚಿಸಿದೆ.

ಇದೇ ವೇಳೆ, ಪ್ರತಿಭಟನೆ ನಡೆದ ಸ್ಥಳಗಳ ಸಿಸಿಟಿವಿ ದೃಶ್ಯಗಳು, ಡ್ರೋನ್ ಕ್ಯಾಮೆರಾ ವಿಡಿಯೊಗಳು, ಬಾಡಿ ಕ್ಯಾಮೆರಾ ದಾಖಲೆಗಳು ಹಾಗೂ ಪಿಸಿಆರ್ (PCR) ಸಂವಹನ ದಾಖಲಾತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಮಹಾರಾಷ್ಟ್ರ, ಬಿಹಾರ, ಕೇರಳ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ಅಥವಾ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸುವ ಸಾಧ್ಯತೆಯನ್ನೂ ನ್ಯಾಯಪೀಠ ಸೂಚಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿಭಟನೆ ನಿಯಂತ್ರಿಸುವ ನೆಪದಲ್ಲಿ ಪೊಲೀಸರು ಎಲೆಕ್ಟ್ರಿಕ್ ಬ್ಯಾಟನ್, ಪೆಲೆಟ್ ಗನ್‌ಗಳು ಹಾಗೂ ಮೊಳೆಗಳಿದ್ದ ಲಾಠಿಗಳನ್ನು ಬಳಸಿದ್ದಾರೆ. ಸಾಮಾನ್ಯ ಉಡುಪಿನಲ್ಲಿದ್ದ ಕೆಲ ಸಿಬ್ಬಂದಿಯೂ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠ, ಶಾಂತಿಯುತ ಹಾಗೂ ಕಾನೂನುಬದ್ಧ ಪ್ರತಿಭಟನೆ ನಡೆಸುವುದು ಸಂವಿಧಾನಬದ್ಧ ಹಕ್ಕು ಎಂದು ಸ್ಪಷ್ಟಪಡಿಸಿತು. ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಇಬ್ಬರಿಗೂ ಗಾಯಗಳಾಗಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಕೆಲ ಕಿಡಿಗೇಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರು ನುಸುಳಿ ಪೊಲೀಸರ ಮೇಲೂ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ನಡೆದಿದ್ದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರತಿಭಟನೆಗಳನ್ನು ನಿರ್ವಹಿಸುವ ಕುರಿತು ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img