HomeKarnataka Newsನನ್ನ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇನೆ, ಏನು ಮಾಡ್ತಾರೆ ನೋಡೋಣ: ತಮ್ಮ ನಿಲುವು ಬಹಿರಂಗಪಡಿಸದ ರಾಮಲಿಂಗಾರೆಡ್ಡಿ

ನನ್ನ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇನೆ, ಏನು ಮಾಡ್ತಾರೆ ನೋಡೋಣ: ತಮ್ಮ ನಿಲುವು ಬಹಿರಂಗಪಡಿಸದ ರಾಮಲಿಂಗಾರೆಡ್ಡಿ

For Dai;y Updates Join Our whatsapp Group

Spread the love

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಚಿವ ಸಂಪುಟದೊಳಗಿನ ಅಸಮಾಧಾನ ಬಹಿರಂಗಗೊಂಡಿದ್ದು, ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಖಾತೆ ಹಂಚಿಕೆ ಕುರಿತ ಅಸಮಾಧಾನ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ರಾಮಲಿಂಗಾರೆಡ್ಡಿ, “ನನ್ನ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇನೆ. ಮುಂದೆ ಏನು ಮಾಡುತ್ತಾರೆ ಎಂಬುದನ್ನು ನೋಡೋಣ” ಎಂದು ಪ್ರತಿಕ್ರಿಯಿಸಿದ್ದಾರೆ.

ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿವರೆಗೂ ಮನವೊಲಿಕೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ನಾಯಕರು ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆಗಳ ಬಳಿಕ ಅಂತಿಮ ನಿರ್ಧಾರವನ್ನು ಇಂದು ತಿಳಿಸುವುದಾಗಿ ರಾಮಲಿಂಗಾರೆಡ್ಡಿ ಹೇಳಿದ್ದರು. ಇದರ ನಡುವೆಯೇ ಅವರು ತಮ್ಮ ನಿವಾಸಕ್ಕೆ ಬೆಂಬಲಿಗರನ್ನು ಆಹ್ವಾನಿಸಿ ಮಹತ್ವದ ಸಭೆ ನಡೆಸಿದ್ದಾರೆ.

ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಸೇರಿದಂತೆ ಹಲವು ಬೆಂಬಲಿಗರು ರಾಮಲಿಂಗಾರೆಡ್ಡಿ ಅವರ ಕೊರಮಂಗಲ ನಿವಾಸಕ್ಕೆ ಭೇಟಿ ನೀಡಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಬೆಂಬಲಿಗರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆ ಹಿಂಪಡೆಯುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ಬಹುತೇಕ ವಾಪಸ್ ಪಡೆಯಲು ಒಲವು ತೋರಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನವೊಲಿಕೆ ಪ್ರಯತ್ನದ ನಂತರ ರಾಮಲಿಂಗಾರೆಡ್ಡಿ ಅವರು ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯಲಿದ್ದಾರೆಯೇ ಅಥವಾ ಬೇರೆ ಯಾವುದೇ ತೀರ್ಮಾನ ಕೈಗೊಳ್ಳಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!