HomeKarnataka Newsಕಾಂಗ್ರೆಸ್ ನಲ್ಲೇ ಹುಟ್ಟಿದ್ದೇನೆ, ಇದರಲ್ಲೇ ಸಾಯುತ್ತೇನೆ.. ಪಕ್ಷಾಂತರಿ ಆಗಲ್ಲ: ರಾಜೀನಾಮೆ ವಿವಾದಕ್ಕೆ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ

ಕಾಂಗ್ರೆಸ್ ನಲ್ಲೇ ಹುಟ್ಟಿದ್ದೇನೆ, ಇದರಲ್ಲೇ ಸಾಯುತ್ತೇನೆ.. ಪಕ್ಷಾಂತರಿ ಆಗಲ್ಲ: ರಾಜೀನಾಮೆ ವಿವಾದಕ್ಕೆ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ

For Dai;y Updates Join Our whatsapp Group

ವಿಜಯಪುರ: ಕ್ಷೇತ್ರದ ಜನರ ಹಿತಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ಹೊರತು, ಸಚಿವ ಸ್ಥಾನ ಅಥವಾ ಪಕ್ಷದ ಮೇಲಿನ ಅಸಮಾಧಾನದಿಂದಲ್ಲ. ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಇಂಡಿ ಮತ್ತು ಚಡಚಣವನ್ನು ಆರಂಭದಲ್ಲಿ ಪಟ್ಟಿಯಿಂದ ಕೈಬಿಡಲಾಗಿತ್ತು. ಇದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ತಿಳಿಸಿದರು. ಸೆ.23ರಂದು ಅವರು ರಾಜೀನಾಮೆ ಸಲ್ಲಿಸಿದ್ದು, ಅದು ಅಂಗೀಕಾರವಾಗಿರಲಿಲ್ಲ.

“ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇನೆ. 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾಂಗ್ರೆಸ್‌ನಲ್ಲೇ ಹುಟ್ಟಿದ್ದೇನೆ, ಇದರಲ್ಲೇ ಸಾಯುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ಆದರೆ ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ” ಎಂದು ಯಶವಂತರಾಯಗೌಡ ಪಾಟೀಲ್ ಹೇಳಿದರು.

ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು, ಇದೀಗ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳೂ ಬರಪಟ್ಟಿಗೆ ಬಂದಿವೆ ಎಂದು ಅವರು ಹೇಳಿದರು.

ತಮ್ಮ ರಾಜೀನಾಮೆ ನಿರ್ಧಾರವನ್ನು ವ್ಯಂಗ್ಯ ಮಾಡುವವರ ಮಾತಿಗೆ ಮಹತ್ವ ನೀಡುವುದಿಲ್ಲ ಎಂದ ಅವರು, “ಮತಕ್ಷೇತ್ರದ ಜನರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ನಿಲ್ಲುವುದು ನನ್ನ ಧರ್ಮ. ಸರ್ಕಾರಕ್ಕೆ ಮನವರಿಕೆ ಮಾಡುವುದು ಕೆಲವೊಮ್ಮೆ ತಡವಾಗಬಹುದು. ಪತ್ರದ ಮೂಲಕ ಅಥವಾ ಖುದ್ದಾಗಿ ಭೇಟಿಯಾಗಿ ಸಮಸ್ಯೆಯನ್ನು ತಿಳಿಸಬೇಕಾಗುತ್ತದೆ” ಎಂದರು.

“ವಿಜಯಪುರ ಜಿಲ್ಲೆಯ 13 ತಾಲೂಕುಗಳಲ್ಲಿ 11 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಇಂಡಿ ಮತ್ತು ಚಡಚಣವನ್ನು ಮಾತ್ರ ಕೈಬಿಡಲಾಗಿತ್ತು. ನನ್ನ ಸ್ಥಾನದಲ್ಲಿ ಯಾರೇ ಇದ್ದರೂ ಇದೇ ರೀತಿ ನಡೆದುಕೊಳ್ಳುತ್ತಿದ್ದರು. ತಾಳ್ಮೆಗೂ ಒಂದು ಮಿತಿ ಇರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂಡಿ ಮತ್ತು ಚಡಚಣವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದನ್ನು ವಿರೋಧಿಸಿ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಸ್ಥಳ ಪರಿಶೀಲನೆ ಮತ್ತು ವರದಿಗಳ ಆಧಾರದಲ್ಲಿ ಹೆಚ್ಚುವರಿ ತಾಲೂಕುಗಳ ಪಟ್ಟಿಗೆ ಇಂಡಿ ಹಾಗೂ ಚಡಚಣವನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ.

ಈ ಹಿಂದೆ ತಾವು ರಾಜೀನಾಮೆ ನೀಡಲು ಮುಂದಾಗಿದ್ದ ವಿಚಾರಕ್ಕೂ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದರು. “ನನಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಿರಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೆ. ಬಳಿಕ ಮನವರಿಕೆ ಮಾಡಿದಾಗ ಅದನ್ನು ವಾಪಸ್ ಪಡೆದಿದ್ದೆ” ಎಂದು ಹೇಳಿದರು.

ಈ ಬಾರಿ ತಮ್ಮ ಕ್ಷೇತ್ರದ ರೈತರ ಸಮಸ್ಯೆ ಹಾಗೂ ಬರ ಘೋಷಣೆಯೇ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದು ಪುನರುಚ್ಚರಿಸಿದ ಅವರು, ಕ್ಷೇತ್ರದ ಜನರ ಹಿತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img