ನವದೆಹಲಿ: ಡೆಂಗ್ಯೂ ನಿಯಂತ್ರಣದತ್ತ ಭಾರತ ಮಹತ್ವದ ಹೆಜ್ಜೆ ಇಟ್ಟಿದ್ದು, ದೇಶದಲ್ಲೇ ಮೊದಲ ಬಾರಿಗೆ QDENGA ಡೆಂಗ್ಯೂ ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (DCGI) ಅನುಮೋದನೆ ನೀಡಿದ್ದಾರೆ. ಈ ಮೂಲಕ ಭಾರತದಲ್ಲಿ ಡೆಂಗ್ಯೂ ತಡೆಗಟ್ಟಲು ಮೊದಲ ಅಧಿಕೃತ ಲಸಿಕೆ ಲಭ್ಯವಾಗಿದೆ.
ಜಪಾನ್ ಮೂಲದ ಬಯೋಫಾರ್ಮಾ ಕಂಪನಿ ಟಕೇಡಾ ಅಭಿವೃದ್ಧಿಪಡಿಸಿರುವ QDENGA ಲಸಿಕೆಯನ್ನು 4 ರಿಂದ 60 ವರ್ಷದೊಳಗಿನವರಿಗೆ ನೀಡಲು ಅನುಮತಿ ನೀಡಲಾಗಿದೆ. ಡೆಂಗ್ಯೂ ಸೋಂಕು ಹಿಂದೆ ಬಂದಿದ್ದರೂ ಅಥವಾ ಬರದಿದ್ದರೂ ಈ ಲಸಿಕೆಯನ್ನು ಪಡೆಯಬಹುದಾಗಿದೆ.
ಈ ಲಸಿಕೆಯ ಮತ್ತೊಂದು ವಿಶೇಷತೆ ಎಂದರೆ, ಲಸಿಕೆ ಪಡೆಯುವ ಮೊದಲು ಡೆಂಗ್ಯೂ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ. ಇದರಿಂದ ಸಾಮಾನ್ಯ ಜನರಿಗೆ ಲಸಿಕೆ ಪಡೆಯುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ.
QDENGA ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ನೀಡಿದ ಮೂರು ತಿಂಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತದೆ. ಈ ಲಸಿಕೆಯನ್ನು ಡೆಂಗ್ಯೂ ವೈರಸ್‌ನ ನಾಲ್ಕೂ ಸೆರೋಟೈಪ್‌ಗಳ ವಿರುದ್ಧ ರಕ್ಷಣೆ ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ.
ಲಸಿಕೆಗೆ ಅನುಮೋದನೆ ನೀಡುವ ಮೊದಲು 19 ಹಂತಗಳ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ. ವಿಶ್ವದ ವಿವಿಧ ದೇಶಗಳ 28 ಸಾವಿರಕ್ಕೂ ಹೆಚ್ಚು ಮಂದಿ ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಭಾರತದಲ್ಲೂ 4 ರಿಂದ 60 ವರ್ಷದವರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಸಿ, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಶೀಲಿಸಲಾಗಿದೆ.
2022ರಿಂದ ಇಲ್ಲಿಯವರೆಗೆ 43 ದೇಶಗಳು QDENGA ಲಸಿಕೆಗೆ ಅನುಮೋದನೆ ನೀಡಿದ್ದು, ವಿಶ್ವದಾದ್ಯಂತ 3.2 ಕೋಟಿಗೂ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ.
ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಡೆಂಗ್ಯೂ ಸೋಂಕಿಗೆ ಒಳಗಾಗುತ್ತಿದ್ದಾರೆ. ನಗರೀಕರಣ, ಹವಾಮಾನ ಬದಲಾವಣೆ ಹಾಗೂ ಸೊಳ್ಳೆಗಳ ಸಂಖ್ಯೆಯ ಹೆಚ್ಚಳದಿಂದ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಲಸಿಕೆಗೆ ದೊರೆತಿರುವ ಅನುಮೋದನೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಡೆಂಗ್ಯೂ ಹೆಚ್ಚಿರುವ ಪ್ರದೇಶಗಳಲ್ಲಿ QDENGA ಲಸಿಕೆ ಬಳಕೆಯನ್ನು ಶಿಫಾರಸು ಮಾಡಿದೆ. ಈ ಲಸಿಕೆಗೆ WHO ಪ್ರೀಕ್ವಾಲಿಫಿಕೇಶನ್ ಕೂಡ ಲಭ್ಯವಾಗಿದ್ದು, ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿದೆ.



