ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಗೆದ್ದರೆ ಪ್ಲೇ ಆಫ್ ಟಿಕೆಟ್ ಖಚಿತವಾಗಲಿದೆ. ಇನ್ನೂ ಕೋಲ್ಕತ್ತಾ ಪ್ಲೇ ಆಫ್ ರೇಸ್ ನಲ್ಲಿ ಉಳಿಯಲು ಇಂದಿನ ಪಂದ್ಯ ಗೆಲ್ಲಲೇಬೇಕಿದೆ. ಹೀಗಾಗಿ ಇಂದಿನ ಪಂದ್ಯ ವೀಕ್ಷಿಸಲು ಉಭಯ ತಂಡದ ಅಭಿಮಾನಿಗಳು ಕಾತುರರಾಗಿದ್ದಾರೆ.
ಇಂದು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಎಲ್ಲರ ಆಕರ್ಷಣೆಯಾಗಲಿದ್ದಾರೆ. ಸದ್ಯ ಆಡಿರುವ 11 ಪಂದ್ಯಗಳಿಂದ 8 ಜಯ, 3 ಸೋಲು ಕಂಡಿರುವ ರಜತ್ ಪಾಟಿದಾರ್ ಸಾರಥ್ಯದ ಆರ್‌ಸಿಬಿ, +0.482 ನೆಟ್ ರನ್‌ರೇಟ್‌ನೊಂದಿಗೆ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 16 ಅಂಕ ಪಡೆದಿರುವ ಗುಜರಾತ್ ಟೈಟನ್ಸ್ +0.793 ನೆಟ್ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯು ಇಂದಿನ ಪಂದ್ಯವನ್ನು ಗೆದ್ದರೆ 18 ಅಂಕಗಳೊಂದಿಗೆ 18ನೇ ಆವೃತ್ತಿಯ ಐಪಿಎಲ್ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ. ಜೊತೆಗೆ 18 ಆವೃತ್ತಿಗಳಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ಇತಿಹಾಸವನ್ನು ಆರ್‌ಸಿಬಿ ನಿರ್ಮಿಸಲಿದೆ.
ಅತ್ತ 12 ಪಂದ್ಯಗಳನ್ನಾಡಿರುವ ಅಜಿಂಕ್ಯಾ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್, 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್ ಸ್ಪರ್ಧೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ 3 ಬಾರಿಯ ಚಾಂಪಿಯನ್ ಕೆಕೆಆರ್‌ಗೆ ಉತ್ತಮ ರನ್‌ರೇಟ್‌ನೊಂದಿಗೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಸೋತರೆ ಪ್ಲೇಆಫ್ ಸ್ಪರ್ಧೆಯಿಂದ ಹೊರಗುಳಿದ 4ನೇ ತಂಡವಾಗಲಿದೆ. ಹೀಗಾಗಿ ರಹಾನೆ ಬಳಗಕ್ಕೆ ಶನಿವಾರದ ಪಂದ್ಯ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಇನ್ನೂ ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿಗೆ ಇಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಗೌರವ ಕೊಡಲು ರೆಡಿಯಾಗಿದ್ದಾರೆ.
ರನ್ ಮಿಷನ್ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ರನ್ ಹಸಿವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದಾಗಲೇ ವೈಟ್ ಜೆರ್ಸಿ ಕ್ರಿಕೆಟ್‌ಗೆ ವಿದಾಯ ಹೇಳಿಬಿಟ್ಟಿದ್ದ ಕೊಹ್ಲಿಗೆ ಕೊನೆ ಪಕ್ಷ ಬಿಸಿಸಿಐ ವಿದಾಯದ ಪಂದ್ಯವಾಡಿಸಿ ಬೀಳ್ಕೊಡುಗೆ ನೀಡಬಹುದಿತ್ತು. ಆದ್ರೆ ಅದೂ ಆಗಲಿಲ್ಲ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್ ಇಂದು ನಡೆಯುವ ಮ್ಯಾಚ್‌ಗೆ ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿಗೆ ಗೌರವ ನೀಡಲು ಸಿದ್ಧರಾಗಿದ್ದಾರೆ.