ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವ ಕ್ರಿಕೆಟ್ನ ಅತ್ಯಂತ ಪ್ರತಿಷ್ಠಿತ ಹಾಗೂ ಶ್ರೀಮಂತ ಟೂರ್ನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಪ್ರತಿ ವರ್ಷ ಆದಾಯ, ವ್ಯವಹಾರ ಹಾಗೂ ಬ್ರ್ಯಾಂಡ್ ಮೌಲ್ಯದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಐಪಿಎಲ್,
ಇದೀಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದೆ. 2026ರ ಬ್ರ್ಯಾಂಡ್ ಮೌಲ್ಯಮಾಪನ ವರದಿ ಪ್ರಕಾರ, ಐಪಿಎಲ್ನ ಒಟ್ಟು ವ್ಯವಹಾರ ಮೌಲ್ಯ 20.6 ಬಿಲಿಯನ್ ಅಮೆರಿಕನ್ ಡಾಲರ್ಗೆ ಏರಿಕೆಯಾಗಿದ್ದು, ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು ₹2 ಲಕ್ಷ ಕೋಟಿಗೂ ಅಧಿಕವಾಗಿದೆ.
ಈ ಬಾರಿ ಬ್ರ್ಯಾಂಡ್ ಮೌಲ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಗ್ರಸ್ಥಾನಕ್ಕೇರಿದೆ. 2025 ಹಾಗೂ 2026ರಲ್ಲಿ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಆರ್ಸಿಬಿಯ ಬ್ರ್ಯಾಂಡ್ ಮೌಲ್ಯ ಗಣನೀಯವಾಗಿ ಏರಿಕೆಯಾಗಿ 312 ಮಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದೆ. ಇದರಿಂದ ಬ್ರ್ಯಾಂಡ್ ವ್ಯಾಲ್ಯೂ ಪಟ್ಟಿಯಲ್ಲಿ ಆರ್ಸಿಬಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
2026ರ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಫ್ರಾಂಚೈಸಿಯನ್ನು ಬಿರ್ಲಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಜಂಟಿಯಾಗಿ ಸುಮಾರು ₹16,600 ಕೋಟಿಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಮಾರಾಟವಾದ ಫ್ರಾಂಚೈಸಿ ಎಂಬ ದಾಖಲೆಯನ್ನೂ ನಿರ್ಮಿಸಿತ್ತು.
ಇನ್ನು ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಮೌಲ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ತಂಡದ ಮೌಲ್ಯ 264 ಮಿಲಿಯನ್ ಅಮೆರಿಕನ್ ಡಾಲರ್ಗೆ ಏರಿಕೆಯಾಗಿದೆ.
ಒಂದು ಕಾಲದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಬ್ರ್ಯಾಂಡ್ ಮೌಲ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಇದೀಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚಿನ ಋತುಗಳಲ್ಲಿ ತಂಡದ ಸಾಧನೆ ನಿರೀಕ್ಷಿತ ಮಟ್ಟದಲ್ಲಿರದ ಕಾರಣ ಬ್ರ್ಯಾಂಡ್ ಮೌಲ್ಯದಲ್ಲೂ ಕುಸಿತ ಕಂಡಿದೆ. ಈ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಿಎಸ್ಕೆಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.
ಒಟ್ಟಾರೆ ಐಪಿಎಲ್ ಲೀಗ್ನ ಬ್ರ್ಯಾಂಡ್ ಮೌಲ್ಯವೂ ಶೇಕಡಾ 10.3ರಷ್ಟು ಏರಿಕೆಯಾಗಿದ್ದು, 4.3 ಬಿಲಿಯನ್ ಅಮೆರಿಕನ್ ಡಾಲರ್ಗೆ (ಸುಮಾರು ₹36,000 ಕೋಟಿ) ತಲುಪಿದೆ. ಪ್ರತಿ ಪಂದ್ಯದ ಆದಾಯದ ಆಧಾರದ ಮೇಲೆ ಅಮೆರಿಕದ ಎನ್ಎಫ್ಎಲ್ (NFL) ನಂತರ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಎಂಬ ಹೆಗ್ಗಳಿಕೆಯನ್ನು ಐಪಿಎಲ್ ಮುಂದುವರಿಸಿಕೊಂಡಿದೆ.
ಐಪಿಎಲ್ ಫ್ರಾಂಚೈಸಿಗಳಲ್ಲಿ ಜಾಗತಿಕ ಹೂಡಿಕೆದಾರರ ಆಸಕ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬ್ಲ್ಯಾಕ್ಸ್ಟೋನ್ ಹಾಗೂ ಪೂನಾವಾಲಾ ಗ್ರೂಪ್ ಸೇರಿದಂತೆ ಹಲವು ಪ್ರಮುಖ ಹೂಡಿಕೆ ಸಂಸ್ಥೆಗಳು ಐಪಿಎಲ್ ಫ್ರಾಂಚೈಸಿಗಳಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿರುವುದು ಈ ಮೌಲ್ಯವರ್ಧನೆಗೆ ಪ್ರಮುಖ ಕಾರಣವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐಪಿಎಲ್ ಈಗ ಕೇವಲ ಕ್ರಿಕೆಟ್ ಟೂರ್ನಿಯಾಗಿರದೆ, ವಿಶ್ವದ ಅತ್ಯಂತ ಯಶಸ್ವಿ ಕ್ರೀಡಾ ವ್ಯವಹಾರ ಮಾದರಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.



