ಮುಂಬೈ: ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹಾಗೂ ಭಾರತದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಜೋರಾಗಿವೆ. ಆದರೆ ಈ ಸಂಬಂಧ ಮೃಣಾಲ್ ಅಥವಾ ಯಶಸ್ವಿ ಯಾರೂ ಕೂಡ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಮುಂಬೈನ ಬಾಂದ್ರಾ ವೆಸ್ಟ್‌ನ ಬುಜೀ ಕ್ಯಾಫೆಯಲ್ಲಿ ಇಬ್ಬರೂ ಕಾಣಿಸಿಕೊಂಡಿರುವ ದೃಶ್ಯಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಯಶಸ್ವಿ ಮೊದಲು ಕ್ಯಾಫೆಯಿಂದ ಹೊರಬಂದರೆ, ಮೃಣಾಲ್ ನಂತರ ಹೊರಬಂದಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಈ ಒಂದು ವಿಡಿಯೋ ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಡೇಟಿಂಗ್ ವದಂತಿಗಳು ಹರಿದಾಡುತ್ತಿವೆ. ಕೆಲವರು ಇದು ಹೊಸ ಪ್ರೇಮಕಥೆಯ ಆರಂಭ ಎಂದು ಊಹಿಸುತ್ತಿದ್ದರೆ, ಇನ್ನು ಕೆಲವರು ಜಾಹೀರಾತು ಅಥವಾ ವೃತ್ತಿಪರ ಭೇಟಿಯನ್ನು ಅನಗತ್ಯವಾಗಿ ವೈಯಕ್ತಿಕ ಸಂಬಂಧದೊಂದಿಗೆ ಜೋಡಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಬ್ಬರ ನಡುವಿನ 11 ವರ್ಷಗಳ ವಯಸ್ಸಿನ ಅಂತರವೂ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಗಮನಾರ್ಹ ಸಂಗತಿಯೆಂದರೆ, ಈ ಹಿಂದೆ ಮೃಣಾಲ್ ಠಾಕೂರ್ ಹೆಸರು ನಟ ಧನುಷ್ ಜೊತೆಗೂ ಕೇಳಿಬಂದಿತ್ತು. ಆದರೆ ಆ ಸುದ್ದಿಗಳಿಗೆ ಯಾವುದೇ ಅಧಿಕೃತ ದೃಢೀಕರಣ ಇರಲಿಲ್ಲ.
ಸದ್ಯ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾದ ಪ್ರಮುಖ ಯುವ ಬ್ಯಾಟರ್ ಆಗಿ ಭರವಸೆ ಮೂಡಿಸುತ್ತಿದ್ದು, ಮೃಣಾಲ್ ಠಾಕೂರ್ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ವೈರಲ್ ವಿಡಿಯೋ ಹೊರತುಪಡಿಸಿ ಇವರಿಬ್ಬರ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

