ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ನಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಸುಮಾರು ₹80ರಿಂದ ₹85 ಲಕ್ಷ ಮೌಲ್ಯದ ಹತ್ತಿ ಬಣಗಳು ಸುಟ್ಟು ಕರಕಲಾಗಿವೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಅಗ್ನಿ ಅವಘಡದಿಂದ ಕಾಟನ್ ಇಂಡಸ್ಟ್ರೀಸ್ನಲ್ಲಿದ್ದ ಅಪಾರ ಪ್ರಮಾಣದ ಹತ್ತಿ ಬಣಗಳು ಬೆಂಕಿಗೆ ಆಹುತಿಯಾಗಿದ್ದು, ಉದ್ಯಮಕ್ಕೆ ಭಾರಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ನ ಮ್ಯಾನೇಜರ್ ನಿಂಗರಾಜ್ ಅವರು ಸುಮಾರು ₹80ರಿಂದ ₹85 ಲಕ್ಷ ಮೌಲ್ಯದ ಹತ್ತಿ ಸುಟ್ಟುಹೋಗಿರುವುದಾಗಿ ತಿಳಿಸಿದ್ದಾರೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಅಗ್ನಿ ಅವಘಡದ ನಿಖರ ಕಾರಣ ಹಾಗೂ ನಷ್ಟದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



