ಗದಗ: ಜಿಲ್ಲಾ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಮರಾಠೆ ಹಾಗೂ ಗೌರವ ಅಧ್ಯಕ್ಷರಾಗಿ ಕುಮಾರ ಕಟ್ಟಿಮನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪದಾಧಿಕಾರಿಗಳಿಂದ ಗುಪ್ತವಾಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ರಾಜ್ಯ ಘಟಕದ ಸದಸ್ಯ ಕಳಕೇಶ್ ಉಳಕ್ಕಿ ಅವರು ನೂತನ ಪದಾಧಿಕಾರಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.
ಸಂಘದ ಉಪಾಧ್ಯಕ್ಷರಾಗಿ ಚಂದ್ರು ಪಾಟೀಲ್, ಜಿಲ್ಲಾ ಉಪಾಧ್ಯಕ್ಷೆಯಾಗಿ ಶಿಲ್ಪಾ ಬಂಡಿಹಾಳ್, ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಾಂತ್ (ಶ್ರೂಕಾಂತ್) ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ್ ಈರಣ್ಣವರ, ಖಜಾಂಚಿಯಾಗಿ ಪ್ರದೀಪ್ ಹಿರೇಮಠ್ ಆಯ್ಕೆಯಾದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಧರ್ಮೇಂದ್ರ ಇಟಗಿ, ಶೇಖಸಾಬ್ ಕಾತರಕಿ, ಪ್ರವೀಣ್‌ಕುಮಾರ್ ಕನ್ಯಾಳ್, ಜಗದೀಶ್ ಬಳಿಗೇರ್, ಗಾಳೆಪ್ಪ ಹರಿಜನ್, ಶಿವಯೋಗಿ ಭಾವಿ ಹಾಗೂ ಪ್ರದೀಪ್ ಕನ್ಯಾಳ್ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ರಾಜ್ಯ ಘಟಕದ ಸದಸ್ಯ ಕಳಕೇಶ್ ಉಳಕ್ಕಿ, ಪತ್ರಕರ್ತರು ಹಲವು ಸಂಕಷ್ಟಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸಂಘದ ಪದಾಧಿಕಾರಿಗಳು ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಪ್ರತಿಯೊಬ್ಬ ಪತ್ರಕರ್ತರಿಗೂ ತಲುಪುವಂತೆ ಸಂಘ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ನೂತನ ಪದಾಧಿಕಾರಿಗಳು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಪತ್ರಕರ್ತರ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.



