ಕ್ಯಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ದೇಶವನ್ನೇ ತಲ್ಲಣಗೊಳಿಸಿದ್ದು, ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದು ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಅವಶೇಷಗಳಡಿ ಸಾವಿರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ.
ಬುಧವಾರ ಸಂಜೆ ಅಲ್ಪಾವಧಿಯ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿವೆ. 7.2 ಹಾಗೂ 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ ಪರಿಣಾಮ ರಾಜಧಾನಿಯ ಅನೇಕ ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಭೂಕಂಪದ ಹೊಡೆತಕ್ಕೆ ಭಯಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.
ಅವಘಡದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ಹಲವು ಹೃದಯವಿದ್ರಾವಕ ದೃಶ್ಯಗಳು ಬೆಳಕಿಗೆ ಬಂದಿವೆ. ಕ್ಯಾರಕಾಸ್‌ನ 22 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಸ್ಥಳದಲ್ಲಿ, ಅವಶೇಷಗಳಡಿ ಸಿಲುಕಿರುವ ಮಗನಿಗಾಗಿ ತಾಯಿ ನಡೆಸಿದ ಕೂಗು ಎಲ್ಲರ ಮನಕಲಕುವಂತಿತ್ತು.
“ಅಂತೋನಿಯೋ… ನಾನು ನಿನ್ನ ಅಮ್ಮ… ಇಲ್ಲಿ ಇದ್ದೇನೆ…” ಎಂದು ತಾಯಿ ಕೂಗುತ್ತಿರುವ ದೃಶ್ಯ ಸ್ಥಳದಲ್ಲಿದ್ದವರ ಕಣ್ಣೀರಿಗೂ ಕಾರಣವಾಗಿದೆ. ಆದರೆ ಅವಶೇಷಗಳಡಿಯಿಂದ ಯಾವುದೇ ಪ್ರತಿಕ್ರಿಯೆ ಕೇಳಿಬರದ ಕಾರಣ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಇನ್ನೊಂದು ಪ್ರದೇಶವಾದ ಲಾಸ್ ಪಾಲೋಸ್ ಗ್ರಾಂಡಿಸ್‌ನ ಪೆಟುನಿಯಾ ವಸತಿ ಸಮುಚ್ಚಯದಲ್ಲೂ ಭಾರೀ ಹಾನಿ ಸಂಭವಿಸಿದೆ. ಸಾಮಾನ್ಯವಾಗಿ ಜನಜಂಗುಳಿಯಿಂದ ಕೂಡಿರುವ ಈ ಪ್ರದೇಶ ಭೂಕಂಪದ ಬಳಿಕ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ. ಅಲ್ಲಿಯೂ “ತಾನಿಯಾ… ತಾನಿಯಾ…” ಎಂದು ತಮ್ಮವರಿಗಾಗಿ ಹುಡುಕುತ್ತಿರುವವರ ನೋವಿನ ಕೂಗು ಕೇಳಿಬಂದಿದೆ.
ಸ್ಥಳೀಯರು ಹಾಗೂ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಹಲವರು ಟಾರ್ಚ್‌ಗಳ ನೆರವಿನಿಂದ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಕೆಲವೆಡೆ ರಕ್ಷಣಾ ಸಿಬ್ಬಂದಿ ತಲುಪುವ ಮುನ್ನವೇ ಸ್ಥಳೀಯರು ಸ್ವಯಂಪ್ರೇರಿತವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಭೂಕಂಪದ ಬಳಿಕ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಮತ್ತು ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ನಿಖರ ಹಾನಿಯ ಪ್ರಮಾಣ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ರಕ್ಷಿಸಲು ಹರಸಾಹಸ ಪಡುತ್ತಿವೆ.



