ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಜೈಲಿನೊಳಗಿನ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಕಾರಾಗೃಹ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. “ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್ ಸಿಸ್ಟಂ” ಹೆಸರಿನ ಈ ಯೋಜನೆಯಡಿ ಇನ್ಮುಂದೆ ಪ್ರತಿ ಬ್ಯಾರಕ್ ಪ್ರವೇಶಿಸುವಾಗ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ಜೈಲಿನಲ್ಲಿ ಎಐ ಆಧಾರಿತ ಕ್ಯಾಮೆರಾಗಳ ಮೂಲಕ ಕೈದಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿಗಾ ವಹಿಸಲಾಗುತ್ತಿತ್ತು. ಇದೀಗ ಅದರ ಜೊತೆಗೆ ಕೈದಿಗಳ ಫೋನ್ ಕರೆಗಳ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರ ಭೇಟಿಗೆ ಡಿಜಿಟಲ್ ಟೋಕನ್ ವ್ಯವಸ್ಥೆ ಸೇರಿದಂತೆ ಕೈದಿಗಳ ಪ್ರತಿಯೊಂದು ಚಲನವಲನದ ಮೇಲೂ ಸಂಪೂರ್ಣ ನಿಗಾ ಇಡುವ ವ್ಯವಸ್ಥೆ ಜಾರಿಯಾಗಿದೆ. ಈ ಯೋಜನೆಗೆ ಸುಮಾರು 2.25 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿಕ್ಷಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇದ್ದರೂ, ಊಟ ಮತ್ತು ಚಿಕಿತ್ಸೆ ನೆಪದಲ್ಲಿ ಒಂದೇ ಕಡೆ ಸೇರಿ ಪರಸ್ಪರ ಸಂಪರ್ಕ ಸಾಧಿಸುತ್ತಿದ್ದರು. ಇದರಿಂದ ಜೈಲಿನ ಒಳಗೆ ಹಾಗೂ ಹೊರಗೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇನ್ನು ಮುಂದೆ ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷಾಬಂಧಿಗಳಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುತ್ತಿದ್ದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಜೈಲಿನೊಳಗೇ ಹೊರರೋಗಿಗಳ ವಿಭಾಗ (ಒಪಿಡಿ) ತೆರೆಯಲಾಗುತ್ತಿದೆ. ಗಂಭೀರ ಅನಾರೋಗ್ಯದ ಸಂದರ್ಭಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಜಾರಿಯಾಗಲಿದೆ.
ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಘಟಕಗಳು ಹಾಗೂ ಬೇಕರಿ ಸೇರಿದಂತೆ ಎಲ್ಲ ಪ್ರಮುಖ ಸ್ಥಳಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಸಂದರ್ಶಕರನ್ನು ಭೇಟಿ ಮಾಡಲು ಹೋಗುವ ಕೈದಿಗಳು ಟೋಕನ್ ಪಡೆಯುವುದು ಕಡ್ಡಾಯವಾಗಿದ್ದು, ಆ ಟೋಕನ್‌ನಲ್ಲಿ ಕೈದಿಯ ಹೆಸರು, ಸಂಖ್ಯೆ, ಸಮಯ ಸೇರಿದಂತೆ ಎಲ್ಲ ಮಾಹಿತಿಯೂ ಸಾಫ್ಟ್‌ವೇರ್‌ನಲ್ಲಿ ದಾಖಲಾಗಲಿದೆ.
ಇದರ ಮೂಲಕ ಯಾವ ಕೈದಿ ಎಲ್ಲಿ ಹೋಗಿದ್ದಾನೆ, ಎಷ್ಟು ಸಮಯ ಕಳೆದಿದ್ದಾನೆ, ಯಾರನ್ನು ಭೇಟಿಯಾಗಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಟ್ರ್ಯಾಕ್ ಮಾಡಬಹುದಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಕೈದಿಗಳನ್ನು ಸುಲಭವಾಗಿ ಗುರುತಿಸಿ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಜೈಲಿನ ಕ್ಯಾಂಟೀನ್‌ಗಳಲ್ಲೂ “ಕ್ಯಾಂಟೀನ್ ಯೂಸೇಜ್ ಸಿಸ್ಟಂ” ಜಾರಿಗೆ ತರಲಾಗಿದೆ. ಕೈದಿಗಳು ನೇರ ಹಣ ಪಾವತಿ ಮಾಡದೆ ವಾಲೆಟ್ ಅಥವಾ ಕೂಪನ್ ಮೂಲಕ ಬನ್, ಬಿಸ್ಕತ್ ಸೇರಿದಂತೆ ಬೇಕರಿ ಪದಾರ್ಥಗಳನ್ನು ಖರೀದಿಸಬಹುದು. ಇದರಿಂದ ಯಾವ ಕೈದಿ ಯಾವ ವಸ್ತು ಖರೀದಿಸಿದ್ದಾನೆ, ಎಷ್ಟು ಹಣ ಖರ್ಚು ಮಾಡಿದ್ದಾನೆ, ಯಾವ ಸಮಯದಲ್ಲಿ ಖರೀದಿ ನಡೆದಿದೆ ಎಂಬ ಎಲ್ಲಾ ಮಾಹಿತಿ ಡಿಜಿಟಲ್ ರೂಪದಲ್ಲಿ ದಾಖಲಾಗಲಿದೆ.
ಜೈಲಿನ ಪ್ರತಿಯೊಂದು ಬ್ಯಾರಕ್ ಪ್ರವೇಶದ್ವಾರದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜೊತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮೂಲಕ ಕೈದಿಗಳ ಮೇಲೆ ನಿರಂತರ ನಿಗಾ ಇಟ್ಟು, ಜೈಲಿನೊಳಗಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.



