Home Blog Page 10

ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಮಳೆ! ಗುಡುಗು-ಮಿಂಚು ಬರುವ ಸಾಧ್ಯತೆ

ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳ ಕಾಲ ಪೂರ್ವಮುಂಗಾರು ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಹಲವು ಭಾಗಗಳಲ್ಲಿ ಗುಡುಗು–ಮಿಂಚು ಸಹಿತ ಮಳೆಯಾಗಲಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ಬೀಳುವ ಅಪಾಯವೂ ಇದೆ.

ಬೆಂಗಳೂರು, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ ಮತ್ತು ಕಲ್ಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದ್ದು, ರೈತರು ತಮ್ಮ ಬೆಳೆಗಳ ರಕ್ಷಣೆಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. ತೆರೆದ ಜಾಗಗಳಲ್ಲಿ, ಮರಗಳ ಕೆಳಗೆ ಅಥವಾ ಜಲಮೂಲಗಳ ಸಮೀಪದಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಬೇಕು. ಭದ್ರ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು ಉತ್ತಮ ಎಂದು ಇಲಾಖೆ ಸಲಹೆ ನೀಡಿದೆ.

ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸದಂತೆ, ಮನೆಗಳ ಕಿಟಕಿ–ಬಾಗಿಲುಗಳನ್ನು ಭದ್ರಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸುವುದರಿಂದ ಹಾನಿಯನ್ನು ತಪ್ಪಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಳಿ ಕಟ್ಟೋ ಶುಭ ವೇಳೆಯೇ ಮೊದಲ ಹೆಂಡ್ತಿ ಎಂಟ್ರಿ; ಮಂಟಪದಲ್ಲೇ ಕಕ್ಕಾಬಿಕ್ಕಿಯಾದ ಗಂಡ – ಮುಂದೇನಾಯ್ತು?

ಬೆಂಗಳೂರು: ಮೊದಲ ಹೆಂಡ್ತಿಗೆ ವಿಚ್ಚೇದನ ಕೊಡದೇ ಎರಡನೇ ಮದುವೆಗೆ ಮುಂದಾಗಿದ್ದ ಪತಿಗೆ ಮಂಟಪದಲ್ಲೇ ಪತ್ನಿ ಶಾಕ್ ಕೊಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲ ಬಳಿ ಜರುಗಿದೆ.

ಎಸ್, ಸುರೇಶ್ ಎಂಬಾತನೇ ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ದವಾಗಿದ್ದ ವರ. ಈತ ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ. ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಗ್ರಾಮದ ನಾಗಮಣಿ ಎಂಬಾಕೆಯನ್ನ 19 ವರ್ಷಗಳ ಹಿಂದೆಯೇ ಆಂಧ್ರ ಮೂಲದ ಕದರಿ ಎಂಬ ಗ್ರಾಮಕ್ಕೆ ಸೇರಿದ್ದ ಸುರೇಶ್ ಮದುವೆಯಾಗಿದ್ದ. ಈ ದಂಪತಿ ಇಬ್ಬರು ಮಕ್ಕಳು ಕೂಡ ಇದ್ದಾರಂತೆ.

ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದ ಸುರೇಶ್​ ಮೊದಲ ಪತ್ನಿಯನ್ನ ಬಿಟ್ಟು 2ನೇ ಮದುವೆಯಾಗಲು ಮುಂದಾಗಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲದ ಬಳಿ ಸುರೇಶ್​ ಎಂಬಾತನ ಮದುವೆ ನಿಶ್ಚಯವಾಗಿತ್ತು. ಇನ್ನೇನು ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಬಂದ ನಾಗಮಣಿ ಮದುವೆ ನಿಲ್ಲಿಸಿದ್ದಾರೆ. ಇನ್ನೂ ಪೊಲೀಸರ ಸಮೇತ ಮೊದಲ ಪತ್ನಿ ಎಂಟ್ರಿಕೊಡುತ್ತಿದ್ದಂತೆಯೇ ಗಂಡ ಕಕ್ಕಾಬಿಕ್ಕಿಯಾಗಿದ್ದಾರೆ.

ಮೊದಲನೆ ಪತ್ನಿಗೆ ವಿಚ್ಚೇಧನ ನೀಡದೆ ಎರಡನೆ ಮದುವೆಯಾಗುವುದು ತಪ್ಪು ಎಂದು ಪೊಲೀಸರು ಬುದ್ದಿವಾದ ಹೇಳಿದ್ದು ಮದುವೆಯನ್ನ ನಿಲ್ಲಿಸಿದ್ದಾರೆ. ಸಿಂಗಾರಗೊಂಡು ಮದುವೆಗೆ ಸಿದ್ದವಾಗಿ ಕುಳಿತಿದ್ದ ಸುರೇಶ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ: ಹೆದ್ದಾರಿಯಲ್ಲಿ ಪುಂಡಾಟ, ಹೆಲ್ಮೆಟ್ ಇಲ್ಲದೆ ಯುವಕರ ಸ್ಟಂಟ್!

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ರಸ್ತೆಯ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಸ್ಟಂಟ್ ನಡೆಸಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ.

ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಇತರ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮೂಡಿಸಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು, ವೀಲಿಂಗ್  ಮಾಡುವ ಮೂಲಕ ತಮ್ಮ ಜೀವಕ್ಕೂ, ಇತರರ ಜೀವಕ್ಕೂ ಅಪಾಯ ಉಂಟುಮಾಡಿದ್ದಾರೆ.

ರಸ್ತೆಗಳನ್ನು ಸ್ಟಂಟ್ ಮಾಡಲು ಬಳಸುವುದು ಅಪಾಯಕಾರಿ ಎಂಬ ಅರಿವು ಇಲ್ಲದಂತೆ ವರ್ತಿಸಿದ ಯುವಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ತಪ್ಪಿನಿಂದಲೇ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಶಿವಮೊಗ್ಗದಲ್ಲಿ ವೈದ್ಯಕೀಯ ಲೋಪ ಆರೋಪ: ಹರ್ನಿಯಾ ಶಸ್ತ್ರಚಿಕಿತ್ಸೆ ಬಳಿಕ ಕೋಮಾಗೆ ಜಾರಿದ ಮಹಿಳೆ!

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದ ಸಮೀಪದ ಅಮೃತ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಪ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹರ್ನಿಯಾ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ 48 ವರ್ಷದ ದೇವಿ ಬಾಯಿ ಅವರು ಚಿಕಿತ್ಸೆ ಬಳಿಕ ಕೋಮಾಗೆ ಜಾರಿದ್ದು, ಇದಕ್ಕೆ ವೈದ್ಯರು ನೀಡಿದ ‘ಹೈಡೋಸ್’ ಔಷಧಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ದೇವಿ ಬಾಯಿ ಅವರನ್ನು ಮಾರ್ಚ್ 11ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರ್ಚ್ 12ರ ರಾತ್ರಿ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಕೋಮಾಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ಆಪರೇಷನ್‌ಗಿಂತ ಮೊದಲು ಆರೋಗ್ಯವಾಗಿದ್ದ ರೋಗಿ, ವೈದ್ಯರ ನಿರ್ಲಕ್ಷ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ರೋಗಿಯ ಅಳಿಯ ಕಾಂತರಾಜ್ ಹಾಗೂ ಸಂಬಂಧಿ ಉಷಾ ನಾಯ್ಕ್ ಆರೋಪಿಸಿದ್ದಾರೆ. ಘಟನೆ ನಡೆದು 12 ದಿನಗಳಾದರೂ ಆಸ್ಪತ್ರೆ ಆಡಳಿತ ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂಬುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆ, ಸಂಬಂಧಿಕರು ಆಸ್ಪತ್ರೆ ಎದುರು ಜಮಾಯಿಸಿ ವೈದ್ಯರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಸರ್ಜನ್ ಡಾ. ಧನಂಜಯ್ ಹಾಗೂ ಜನರಲ್ ಫಿಸಿಷಿಯನ್ ಡಾ. ಮಧುಸೂಧನ್, ರೋಗಿ ಕೋಮಾಗೆ ಜಾರಿರುವುದಕ್ಕೂ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ತಿಳಿದುಬಂದಿದೆ.

ಮಳೆಯಲ್ಲೂ ಕರ್ತವ್ಯಕ್ಕೆ ಆದ್ಯತೆ: KEB ಲೈನ್ ಮನ್ʼಗಳ ಸೇವಾಭಾವಕ್ಕೆ ಮೆಚ್ಚುಗೆ

0

ಗದಗ: ಜಿಲ್ಲೆಯಲ್ಲಿ ಗುಡುಗು-ಗಾಳಿ ಸಹಿತ ಭಾರಿ ಮಳೆಯ ನಡುವೆಯೂ ಕರ್ತವ್ಯಕ್ಕೆ ಆದ್ಯತೆ ನೀಡಿದ ಕೆಇಬಿ ಲೈನ್‌ ಮನ್‌ ಗಳ ಸೇವಾಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ರೋಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೈಕ್ ಸವಾರರು ಮಳೆಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ವೇಳೆ, ರೋಣ ಪಟ್ಟಣದ ಹೊಳೆಅಲೂರು ಕ್ರಾಸ್ ಬಳಿ ಪೊಲೀಸ್ ಇಲಾಖೆ ಅಳವಡಿಸಿದ್ದ ಸಿಸಿ ಟಿವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‌ಮನ್‌ಗಳು ಮಳೆಯನ್ನೇ ಲೆಕ್ಕಿಸದೆ ಕಾರ್ಯನಿರ್ವಹಿಸಿದರು.

ಸುರಕ್ಷತಾ ದೃಷ್ಟಿಯಿಂದ ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದ್ದರೂ, ಮಳೆಯಲ್ಲಿಯೇ ವಿದ್ಯುತ್ ಪರಿವರ್ತಕದ ಬಳಿ ಕೆಲಸವನ್ನು ಮುಂದುವರೆಸಿದರು.

ಮಳೆಯನ್ನೂ ಲೆಕ್ಕಿಸದೆ ಕರ್ತವ್ಯನಿಷ್ಠೆಯಿಂದ ಕೆಲಸ ನಿರ್ವಹಿಸಿದ ಲೈನ್‌ಮನ್‌ಗಳ ಸೇವಾ ಮನೋಭಾವಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿ ಕಾಲಿನ ಮೇಲೆ ಹರಿದ ಬಸ್ ಟೈರ್: ಗಂಭೀರ ಗಾಯ, ಕಾಲು ಮುರಿತ

0

ತುಮಕೂರು: ಬಸ್ ಹತ್ತಲು ಯತ್ನಿಸಿದ ವೇಳೆ ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ ಟೈರ್ ಹರಿದು ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ಹರ್ಷಿತ (17) ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಪ್ಯಾರಾಮೆಡಿಕಲ್ ಅಭ್ಯಾಸ ಮಾಡುತ್ತಿದ್ದಾಳೆ. ತುಮಕೂರಿನಿಂದ ಮಧುಗಿರಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೂಕಾಟ-ತಳ್ಳಾಟ ಉಂಟಾಗಿ ಈ ಅವಘಡ ಸಂಭವಿಸಿದೆ.

ಈ ವೇಳೆ ಬಸ್ ಟೈರ್ ಹರ್ಷಿತಾಳ ಕಾಲಿನ ಮೇಲೆ ಹರಿದ ಪರಿಣಾಮ ಕಾಲು ಮುರಿದಿದೆ. ತಕ್ಷಣವೇ ಅಂಬುಲೆನ್ಸ್ ಮೂಲಕ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹರ್ಷಿತ ತುಮಕೂರಿನ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್: ವಯಸ್ಸಿನ ಪರಿಶೀಲನೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಬೆಂಗಳೂರು: ಪಬ್ ಮತ್ತು ಬ್ರೀವರಿಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಬ್ರೀವರಿಗಳಿಗೆ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದೆ. ಜೊತೆಗೆ ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು ಎಂದು ಆದೇಶಿಸಿದೆ.

“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರೀವರಿಯಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಅಪ್ರಾಪ್ತರು ಕದ್ದುಮುಚ್ಚಿ ಮದ್ಯಪಾನ ಮಾಡಿದರೂ ಸಹ, ಅದರ ಹೊಣೆಗಾರಿಕೆ ಸಂಪೂರ್ಣವಾಗಿ ಬ್ರೀವರಿ ಆಡಳಿತ ಮಂಡಳಿಯ ಮೇಲಿದೆ ಎಂದು ನ್ಯಾಯಾಲಯ ಹೇಳಿದೆ. ಈ ಜವಾಬ್ದಾರಿಯಿಂದ ಮಾಲೀಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ರಾಜರಾಜೇಶ್ವರಿ ನಗರದ ಬ್ರೀವರಿ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಪ್ರಾಪ್ತರನ್ನು ಮದ್ಯಪಾನದ ದುಷ್ಪರಿಣಾಮಗಳಿಂದ ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೈಸೂರು ವಿವಿ ಕಾರ್ಯಕ್ರಮ ರದ್ದು: ರಾಜ್ಯ ಸರ್ಕಾರ ವಿರುದ್ಧ ವಿಜಯೇಂದ್ರ ಆಕ್ರೋಶ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಅಧಿವೇಶನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ರದ್ದುಪಡಿಸಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ಯಾಮ್ ಪ್ರಕಾಶ್ ಮುಖರ್ಜಿ ಫೌಂಡೇಶನ್ ವತಿಯಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಏಕಾಏಕಿ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಆದೇಶ ನೀಡಿದ್ದು, ಉಪಕುಲಪತಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಕ್ರಮವನ್ನು ಖಂಡಿಸಿದ ವಿಜಯೇಂದ್ರ, “ಇದು ದ್ವೇಷದ ರಾಜಕಾರಣ. ವಿಶ್ವವಿದ್ಯಾಲಯದಲ್ಲಿ ನಡೆಯುವ ಶೈಕ್ಷಣಿಕ ಕಾರ್ಯಕ್ರಮಕ್ಕೂ ತಡೆ ನೀಡುತ್ತಿರುವುದು ಸರಿಯಲ್ಲ” ಎಂದು ಹೇಳಿದ್ದಾರೆ.ಇದಲ್ಲದೆ, “ದ್ವೇಷ ಭಾಷಣದ ಬಗ್ಗೆ ಮಸೂದೆ ತರುವ ಸರ್ಕಾರವೇ ಇದೀಗ ಇಂತಹ ಕ್ರಮ ಕೈಗೊಳ್ಳುತ್ತಿದೆ. ಇದನ್ನೇ ದ್ವೇಷದ ರಾಜಕಾರಣವೆಂದು ಪರಿಗಣಿಸಬಹುದು” ಎಂದು ಟೀಕಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿಯೂ ರಾಜಕೀಯ ಹಸ್ತಕ್ಷೇಪ ಮಾಡುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರಲ್ಲ ಎಂದು ಅಭಿಪ್ರಾಯಪಟ್ಟ ಅವರು, ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಿ, ಕಾರ್ಯಕ್ರಮ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಹೈಕಮಾಂಡ್ ತೀರ್ಮಾನಿಸುವವರೆಗೂ ನಾನೇ ಸಿಎಂ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡುವವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪುನರುಚ್ಚರಿಸಿದರು.

ಬಜೆಟ್‌ಗೆ ಉತ್ತರಿಸುವ ವೇಳೆ ಸದನದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಹಾಗೂ ಸ್ಪೀಕರ್ ಯು.ಟಿ. ಖಾದರ್ ಸಂಬಂಧಿತ ವಿಚಾರಗಳನ್ನು ಪ್ರಸ್ತಾಪಿಸಿ ವಿಪಕ್ಷ ಸದಸ್ಯರು ಸಿಎಂಗೆ ಕಾಲೆಳೆಯಲು ಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಮ್ಮಲ್ಲಿ ಎಲ್ಲ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಯಾರಾದರೂ ಸಿಎಂ ಆದರೂ ನನಗೆ ಸಂತೋಷವೇ” ಎಂದು ಹೇಳಿದರು.

“ಹೈಕಮಾಂಡ್ ಎಲ್ಲಿಯವರೆಗೆ ಇರಬೇಕು ಎಂದು ತೀರ್ಮಾನಿಸುತ್ತದೆಯೋ, ಅಲ್ಲಿವರೆಗೆ ನಾನು ಸಿಎಂ ಆಗಿರುತ್ತೇನೆ. ಅದೇ ರೀತಿಯಾಗಿ ಖಾದರ್ ಸ್ಪೀಕರ್ ಆಗಿ ಮುಂದುವರಿಯುತ್ತಾರೆ. ವಿಪಕ್ಷಗಳು ಏನೇ ಮಾಡಿದರೂ ಅವರು ಮಣಿಯುವವರಲ್ಲ,” ಎಂದು ಹೇಳಿದರು.

ವಿಪಕ್ಷ ನಾಯಕರ ಮೇಲೆ ವ್ಯಂಗ್ಯವಾಡಿದ ಸಿಎಂ, “ಎಲ್ಲರಿಗೂ ಕನಸುಗಳಿರುತ್ತವೆ. ಆರ್. ಅಶೋಕ್‌ಗೂ ಸಿಎಂ ಆಗುವ ಕನಸು ಇದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ಕೊಡಲಾರರು. ಅಶೋಕ್ ಸಿಎಂ ಆದರೂ ಸಂತೋಷ, ಬೆಲ್ಲದ್ ಆದರೂ ಸಂತೋಷ,” ಎಂದು ಹೇಳಿದರು.

ಈ ವೇಳೆ ಸದಸ್ಯ ಸುನೀಲ್ ಕುಮಾರ್, “ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ ಅಂತ ಹೇಳಿ ಸರ್, ನೋಡೋಣ,” ಎಂದು ಸವಾಲು ಹಾಕಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, “ನೋಡಪ್ಪ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಂ. ನಮ್ಮಲ್ಲಿ ಯಾರೇ ಸಿಎಂ ಆದರೂ ಸಂತೋಷವೇ” ಎಂದು ಸ್ಪಷ್ಟಪಡಿಸಿದರು.

Ram Navami: ನಾನ್‌ ವೆಜ್ ಪ್ರಿಯರಿಗೆ ಕಹಿ ಸುದ್ದಿ: ಮಾರ್ಚ್ 27ರಂದು ಮಾಂಸ ಮಾರಾಟ ನಿಷೇಧ

ಬೆಂಗಳೂರು: ರಾಮನವಮಿ ಹಬ್ಬದ ಅಂಗವಾಗಿ ಮಾರ್ಚ್ 27ರಂದು ನಗರದಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಹೇರಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಸುತ್ತೋಲೆ ಹೊರಡಿಸಿದೆ.

ಹಿಂದೂ ಧಾರ್ಮಿಕ ಹಬ್ಬಗಳು ಮತ್ತು ಮಹಾತ್ಮರ ಜಯಂತಿಗಳ ಸಂದರ್ಭಗಳಲ್ಲಿ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಈ ರೀತಿಯ ನಿರ್ಬಂಧಗಳನ್ನು ಜಾರಿಗೊಳಿಸುವುದು ಪದ್ಧತಿಯಾಗಿದ್ದು, ಅದೇ ಹಿನ್ನೆಲೆಯಲ್ಲಿ ರಾಮನವಮಿಗೂ ಈ ಕ್ರಮ ಕೈಗೊಳ್ಳಲಾಗಿದೆ.

ಸುತ್ತೋಲೆಯಲ್ಲಿ ತಿಳಿಸಿದಂತೆ, ಜಿಬಿಎ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ, ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಾಗರಿಕರು ಮತ್ತು ವ್ಯಾಪಾರಿಗಳು ಆದೇಶವನ್ನು ಪಾಲಿಸುವಂತೆ ಹಾಗೂ ಸಹಕರಿಸುವಂತೆ ಅಪರ ನಿರ್ದೇಶಕರು (ಪಶುಪಾಲನೆ) ಮನವಿ ಮಾಡಿದ್ದಾರೆ.

ರಾಮನವಮಿ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳ ದಿನಗಳಲ್ಲಿ ಮಾಂಸ ಮಾರಾಟ ನಿಷೇಧಕ್ಕೆ ಧಾರ್ಮಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಕಾರಣಗಳಿದ್ದು, ಇಂತಹ ನಿರ್ಬಂಧಗಳು ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ಬದಲಾಗುತ್ತವೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಧಿಕಾರಿಗಳು ಆದೇಶಗಳನ್ನು ಜಾರಿಗೊಳಿಸುತ್ತಾರೆ.

ರಾಮನವಮಿಯಂದು ನಗರದಲ್ಲಿನ ಶ್ರೀರಾಮ ಮಂದಿರಗಳು, ಆಂಜನೇಯ ದೇವಾಲಯಗಳು ಹಾಗೂ ಮಠಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಬಡಾವಣೆಗಳಲ್ಲಿ ಸ್ಥಳೀಯ ಸಂಘಟನೆಗಳು ಕೋಸಂಬರಿ, ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡುವುದೂ ರೂಢಿಯಾಗಿದೆ.

error: Content is protected !!