Home Blog Page 9

ಗುಡ್ ನ್ಯೂಸ್ ಕೊಟ್ಟ ಇರಾನ್: ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್!

0

ಟೆಹ್ರಾನ್‌: ವಿಶ್ವದ ಪ್ರಮುಖ ತೈಲ ಸಾಗಾಣಿಕೆಯ ಮಾರ್ಗವಾಗಿರುವ ಹಾರ್ಮುಜ್‌ ಜಲಸಂಧಿಯು ಮಿತ್ರ ರಾಷ್ಟ್ರಗಳ ಹಡಗುಗಳಿಗೆ ತೆರೆಯಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.

ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಹೀಗೆ ಮಿತ್ರರಾಷ್ಟ್ರಗಳಿಗೆ ಈಗ ಯಾವುದೇ ನಿರ್ಬಂಧವಿಲ್ಲದೆ ಸಾಗಲು ಅವಕಾಶ ಸಿಕ್ಕಿದೆ.

ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಸ್ಥಿತಿಗತಿಗಳನ್ನು ಅನುಸರಿಸಿ, ಈ ಮಾರ್ಗವನ್ನು ಮುಚ್ಚಿದ್ದ ಇರಾನ್, ಅಮೆರಿಕದ 1 ತಿಂಗಳ ಕದನ ವಿರಾಮ ಘೋಷಣೆಯ ಬಳಿಕ ಮಿತ್ರ ರಾಷ್ಟ್ರಗಳಿಗೆ ಜಲಮಾರ್ಗವನ್ನು ತೆರೆಯುತ್ತಿದೆ. ಆದರೆ ಶತ್ರು ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಕಾರಣಕ್ಕೂ ಹಾರ್ಮುಜ್‌ ಮೂಲಕ ಸಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಅರಘ್ಚಿ ಎಚ್ಚರಿಕೆ ನೀಡಿದ್ದಾರೆ.

ಈ ನಿರ್ಧಾರದಿಂದ ತೈಲ ಸಾಗಣೆ ಸುಗಮವಾಗಿ ಮುಂದುವರಿಯುವ ನಿರೀಕ್ಷೆ ಇದೆ, ಮತ್ತು ಜಾಗತಿಕ ತೈಲ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಆಂಧ್ರ: ಭೀಕರ ರಸ್ತೆ ಅಪಘಾತ! ಹೊತ್ತಿ ಉರಿದ ಬಸ್; 10 ಜನ ಸಜೀವದಹನ

0

ಮಾರ್ಕಪುರಂ: ಟಿಪ್ಪರ್ ಟ್ರಕ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿರುವ ಘಟನೆ ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಜರುಗಿದೆ.

ಘಟನೆಯಲ್ಲಿ, ಬಸ್ಸಿನೊಳಗಿದ್ದ 10 ಜನರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. 18 ಜನರು ತೀವ್ರ ಗಾಯಗಳೊಂದಿಗೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಉಳಿದವರು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ.

ಹೈದರಾಬಾದ್‌ನಿಂದ ಪಾಮೂರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಟ್ರಾವೆಲ್ ಬಸ್ ಮತ್ತು ಚಿಮಕುರ್ತಿಯಿಂದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.

ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕಣಿಗಿರಿ ಮತ್ತು ಪಾಮೂರ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.

ನದಿಗೆ ಬಸ್ ಉರುಳಿ 23 ಜನ ಸಾವು: ತನಿಖೆಗೆ ಆದೇಶಿಸಿದ ಬಾಂಗ್ಲಾ ಪ್ರಧಾನಿ!

0

ಢಾಕಾ: ನದಿಗೆ ಬಸ್ ಉರುಳಿ 23 ಜನ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಾಂಗ್ಲಾದೇಶದ ನೈಋತ್ಯ ಜಿಲ್ಲೆಯ ರಾಜ್ಬರಿಯಲ್ಲಿ ದೌಲಾಡಿಯಾ ಟರ್ಮಿನಲ್‌ನಲ್ಲಿ ಜರುಗಿದೆ.

ಸಾರಿಗೆ ದೋಣಿಯ ಮೇಲೆ ಹತ್ತಲು ಪ್ರಯತ್ನಿಸುತ್ತಿದ್ದ ಬಸ್ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದಿದ್ದು, ಇದರ ಪರಿಣಾಮ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ರಾಜ್ಬರಿಯಿಂದ ಢಾಕಾದಿಂದ 128 ಕಿಲೋಮೀಟರ್ ದೂರದಲ್ಲಿರುವ ಢಾಕಾಗೆ ಪ್ರಯಾಣಿಸುತ್ತಿತ್ತು. ಬಸ್ ಸಾರಿಗೆ ದೋಣಿಯ ಮೇಲೆ ಹತ್ತುವಾಗ ಈ ಅಪಘಾತ ಸಂಭವಿಸಿದೆ. ಇದರಿಂದ ಬಸ್​​ನಲ್ಲಿದ್ದ ಪ್ರಯಾಣಿಕರು ನೀರಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ಸೇವೆ ಮತ್ತು ಡೈವರ್‌ಗಳ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿವೆ.

ಬಸ್​​ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ 50 ಜನರನ್ನು ತುಂಬಿಸಿಕೊಂಡಿತ್ತು. ವಿಪರೀತ ಭಾರವಾಗಿ ಬಸ್​ ಆಯತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಕ್ಷಣಾ ಹಡಗು ಹಮ್ಜಾ ಈ ಘಟನೆ ನಡೆದ 6 ಗಂಟೆಗಳ ನಂತರ ನದಿಯಿಂದ ಬಸ್ ಅನ್ನು ಹೊರತೆಗೆದಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹಡಗಿನ ಕ್ರೇನ್ ಬಳಸಿ ಇಡೀ ಬಸ್ ಅನ್ನು ಮೇಲಕ್ಕೆತ್ತಲಾಯಿತು. ಈ ಘಟನೆಯ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ತನಿಖೆಗೆ ಆದೇಶಿಸಿದ್ದಾರೆ.

ನದಿಗೆ ಬಿದ್ದ ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೀರಿನ ದರ ನಿರಂತರ ಹೆಚ್ಚಳ: ಜನರ ಗಮನವಿಲ್ಲದೆ ಜೇಬಿಗೆ ಕತ್ತರಿ ಹಾಕುತ್ತಿದೆ ಜಲಮಂಡಳಿ?

ಬೆಂಗಳೂರು: ಜನ ಸಾಮಾನ್ಯರಿಗೆ ಅಗತ್ಯವಸ್ತುಗಳ ಬೆಲೆ ಏರಿಕೆ ತೀವ್ರ ಆಘಾತ ತಂದಿರುವ ಸಂದರ್ಭದಲ್ಲಿಯೇ, ಜಲಮಂಡಳಿ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಹೆಚ್ಚಳ ಮಾಡುವ ಮೂಲಕ, ಜನರಿಂದ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ, ಜನರ ಗಮನಕ್ಕೂ ತರದೆ ಬಡ್ಡಿ/ಸುಲಿಗೆ ವಿಧಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

ಇನ್ನು ಒಳಚರಂಡಿ ಉಪಕರಣದ ಶುಲ್ಕವೂ ಪ್ರತಿ ತಿಂಗಳು ಶೇಕಡಾ 31.25ರಷ್ಟು ಏರಿಕೆಗೊಂಡಿದ್ದು, BWSSB ಆಡಳಿತ ಮಂಡಳಿಯು ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಈ ಕ್ರಮವನ್ನು ಅನುಸರಿಸುತ್ತಿದೆ. ಜನರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ತಾಳುತ್ತಿರುವ ಸಂದರ್ಭದಲ್ಲಿ, ಮೂಲಸೌಕರ್ಯಗಳ ಮೇಲಿನ ಈ ನಿರಂತರ ಶುಲ್ಕ ಹೆಚ್ಚಳ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.

ಎ. 28ಕ್ಕೆ ಎಸ್.ಎಸ್.ಕೆ. ಸಮಾಜದಿಂದ ಸಾಮೂಹಿಕ ವಿವಾಹ, ಉಪನಯನ!

0

ಬೆಟಗೇರಿ: ಇಲ್ಲಿನ ಎಸ್.ಎಸ್.ಕೆ. ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಜಗದಂಬಾ ಮಹಿಳಾ ಮಂಡಳದ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವೈಶಾಖ ಶುದ್ಧ ದ್ವಾದಶಿ ಅಂಗವಾಗಿ ಅಂಬಾಭವಾನಿ ದೇವಿಯ 111ನೇ ಪ್ರಾಣ ಪ್ರತಿಷ್ಠಾಪನಾ ದಿನದ ನಿಮಿತ್ತ ಎಸ್.ಎಸ್.ಕೆ. ಸಮಾಜದ ವತಿಯಿಂದ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮವನ್ನು ಎಪ್ರಿಲ್ 28ರಂದು ಬೆಟಗೇರಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ಎಪ್ರಿಲ್ 26ರಿಂದ 28ರವರೆಗೆ ದೇವಿಯ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಎಪ್ರಿಲ್ 28ರಂದು ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮಗಳು ನೆರವೇರಲಿವೆ.

ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮಾರ್ಚ್ 26ರಿಂದ ಎಪ್ರಿಲ್ 25ರವರೆಗೆ ನೊಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9448309622, 9448629772, 9880338064, 9448211933 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

ಚಲಿಸುವ ಬಸ್ ಕಿಟಕಿಯಲ್ಲಿ ಬ್ಯಾಗ್ ಇಡಲು ಹೋಗಿ ದುರಂತ: ಚಕ್ರಕ್ಕೆ ಕಾಲು ಸಿಲುಕಿ ವಿದ್ಯಾರ್ಥಿನಿ ಗಂಭೀರ!

ತುಮಕೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭ ಆದ ಮೇಲೆ ಸರ್ಕಾರಿ ಬಸ್ಸುಗಳಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ.

ಆದರೆ ಯಾವ ಬಸ್ ನೋಡಿದರೂ ತುಂಬಿ ತುಳುಕುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಚಲಿಸುವ ಬಸ್ ಕಿಟಕಿಯಲ್ಲಿ ಬ್ಯಾಗ್ ಇಡಲು ಹೋಗಿ ವಿದ್ಯಾರ್ಥಿನಿ ಕಾಲು ಚಕ್ರಕ್ಕೆ ಸಿಲುಕಿರುವ ಘಟನೆ ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜರುಗಿದೆ. ಬಸ್ ಪ್ಲಾಟ್‌ಫಾರ್ಮ್‌ಗೆ ಬರುವ ಮೊದಲೇ ಕಿಟಕಿಯ ಮೂಲಕ ಸೀಟ್ ಹಿಡಿಯಲು ಹೋದ ವಿದ್ಯಾರ್ಥಿನಿ, ಬಸ್‌ನ ಹಿಂದಿನ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ.

ತುಮಕೂರು-ಪಾವಗಡ ಮಾರ್ಗದ ಬಸ್ ಹತ್ತಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಏಕಾಏಕಿ ಮುಗಿಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಬಸ್ ನಿಲ್ಲುವ ಮೊದಲೇ ಕಿಟಕಿಯ ಒಳಗೆ ಬ್ಯಾಗ್ ಇಟ್ಟು ಸೀಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಾಳೆ. ಚಲಿಸುತ್ತಿದ್ದ ಬಸ್‌ನ ವೇಗಕ್ಕೆ ವಿದ್ಯಾರ್ಥಿನಿಯ ನಿಯಂತ್ರಣ ತಪ್ಪಿ, ಆಕೆಯ ಕಾಲು ಬಸ್‌ನ ಹಿಂದಿನ ಚಕ್ರದಡಿಗೆ ಸಿಲುಕಿದೆ.

ಇದರಿಂದ ಆಕೆಯ ಕಾಲು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಆಘಾತಕಾರಿ ದೃಶ್ಯವು ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ತುಮಕೂರು ನಗರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್ ನಲ್ಲಿ 6 ಲಕ್ಷ ಹಣ ಪತ್ತೆ! ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಬೆಂಗಳೂರು: ವಿಧಾನಸೌಧದಲ್ಲಿ ಮತ್ತೊಂದು ‘ಮನಿ ಬ್ಯಾಗ್’ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಕ್ತಿಯೋರ್ವ 6 ಲಕ್ಷ ರೂ. ಹಣದೊಂದಿಗೆ ಒಳ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.

ಪೊಲೀಸರು ಬ್ಯಾಗ್ ತಪಾಸಣೆ ನಡೆಸಿದಾಗ 6 ಲಕ್ಷ ರೂ. ನಗದು ಪತ್ತೆಯಾಗಿದೆ. ವಿಧಾನಸೌಧದ ಒಳಗೆ ಇಷ್ಟು ಪ್ರಮಾಣದ ಹಣವನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲವೆಂದು ತಿಳಿಸಿ, ಯುವಕನನ್ನು ತಡೆದು ವಿಚಾರಣೆ ನಡೆಸಿದರು.

ಈ ವೇಳೆ ಯುವಕ, ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿದ್ದೇನೆ ಎಂದು ಹೇಳಿದ್ದಾನೆ. ತನ್ನ ದೊಡ್ಡಪ್ಪ ಆಸ್ಪತ್ರೆಗೆ ದಾಖಲಾಗಿರುವುದರಿಂದ ಚಿಕಿತ್ಸೆಗಾಗಿ ಹಣವನ್ನು ತಂದಿದ್ದೇನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ಕೆಲಕಾಲ ವಿಚಾರಣೆ ನಡೆಸಿದರು. ಪರಿಶೀಲನೆ ಪೂರ್ಣಗೊಂಡ ನಂತರ ಹಣದೊಂದಿಗೆ ಯುವಕನನ್ನು ಕಳುಹಿಸಿರುವುದಾಗಿ ತಿಳಿದುಬಂದಿದೆ.

ಘಟನೆ ವಿಧಾನಸೌಧದ ಭದ್ರತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಮಳೆ! ಗುಡುಗು-ಮಿಂಚು ಬರುವ ಸಾಧ್ಯತೆ

ಬೆಂಗಳೂರು: ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳ ಕಾಲ ಪೂರ್ವಮುಂಗಾರು ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಹಲವು ಭಾಗಗಳಲ್ಲಿ ಗುಡುಗು–ಮಿಂಚು ಸಹಿತ ಮಳೆಯಾಗಲಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಸಂಭವಿಸಬಹುದು ಎಂದು ತಿಳಿಸಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ಬೀಳುವ ಅಪಾಯವೂ ಇದೆ.

ಬೆಂಗಳೂರು, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ ಮತ್ತು ಕಲ್ಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದ್ದು, ರೈತರು ತಮ್ಮ ಬೆಳೆಗಳ ರಕ್ಷಣೆಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು. ತೆರೆದ ಜಾಗಗಳಲ್ಲಿ, ಮರಗಳ ಕೆಳಗೆ ಅಥವಾ ಜಲಮೂಲಗಳ ಸಮೀಪದಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಬೇಕು. ಭದ್ರ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು ಉತ್ತಮ ಎಂದು ಇಲಾಖೆ ಸಲಹೆ ನೀಡಿದೆ.

ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸದಂತೆ, ಮನೆಗಳ ಕಿಟಕಿ–ಬಾಗಿಲುಗಳನ್ನು ಭದ್ರಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸುವುದರಿಂದ ಹಾನಿಯನ್ನು ತಪ್ಪಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಳಿ ಕಟ್ಟೋ ಶುಭ ವೇಳೆಯೇ ಮೊದಲ ಹೆಂಡ್ತಿ ಎಂಟ್ರಿ; ಮಂಟಪದಲ್ಲೇ ಕಕ್ಕಾಬಿಕ್ಕಿಯಾದ ಗಂಡ – ಮುಂದೇನಾಯ್ತು?

ಬೆಂಗಳೂರು: ಮೊದಲ ಹೆಂಡ್ತಿಗೆ ವಿಚ್ಚೇದನ ಕೊಡದೇ ಎರಡನೇ ಮದುವೆಗೆ ಮುಂದಾಗಿದ್ದ ಪತಿಗೆ ಮಂಟಪದಲ್ಲೇ ಪತ್ನಿ ಶಾಕ್ ಕೊಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲ ಬಳಿ ಜರುಗಿದೆ.

ಎಸ್, ಸುರೇಶ್ ಎಂಬಾತನೇ ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ದವಾಗಿದ್ದ ವರ. ಈತ ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ. ಚಿಕ್ಕಬಳ್ಳಾಪುರ ಮಂಚೇನಹಳ್ಳಿ ಗ್ರಾಮದ ನಾಗಮಣಿ ಎಂಬಾಕೆಯನ್ನ 19 ವರ್ಷಗಳ ಹಿಂದೆಯೇ ಆಂಧ್ರ ಮೂಲದ ಕದರಿ ಎಂಬ ಗ್ರಾಮಕ್ಕೆ ಸೇರಿದ್ದ ಸುರೇಶ್ ಮದುವೆಯಾಗಿದ್ದ. ಈ ದಂಪತಿ ಇಬ್ಬರು ಮಕ್ಕಳು ಕೂಡ ಇದ್ದಾರಂತೆ.

ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದ ಸುರೇಶ್​ ಮೊದಲ ಪತ್ನಿಯನ್ನ ಬಿಟ್ಟು 2ನೇ ಮದುವೆಯಾಗಲು ಮುಂದಾಗಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇಗುಲದ ಬಳಿ ಸುರೇಶ್​ ಎಂಬಾತನ ಮದುವೆ ನಿಶ್ಚಯವಾಗಿತ್ತು. ಇನ್ನೇನು ತಾಳಿ ಕಟ್ಟೋ ಸಮಯಕ್ಕೆ ಸರಿಯಾಗಿ ಬಂದ ನಾಗಮಣಿ ಮದುವೆ ನಿಲ್ಲಿಸಿದ್ದಾರೆ. ಇನ್ನೂ ಪೊಲೀಸರ ಸಮೇತ ಮೊದಲ ಪತ್ನಿ ಎಂಟ್ರಿಕೊಡುತ್ತಿದ್ದಂತೆಯೇ ಗಂಡ ಕಕ್ಕಾಬಿಕ್ಕಿಯಾಗಿದ್ದಾರೆ.

ಮೊದಲನೆ ಪತ್ನಿಗೆ ವಿಚ್ಚೇಧನ ನೀಡದೆ ಎರಡನೆ ಮದುವೆಯಾಗುವುದು ತಪ್ಪು ಎಂದು ಪೊಲೀಸರು ಬುದ್ದಿವಾದ ಹೇಳಿದ್ದು ಮದುವೆಯನ್ನ ನಿಲ್ಲಿಸಿದ್ದಾರೆ. ಸಿಂಗಾರಗೊಂಡು ಮದುವೆಗೆ ಸಿದ್ದವಾಗಿ ಕುಳಿತಿದ್ದ ಸುರೇಶ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೆಲಮಂಗಲ: ಹೆದ್ದಾರಿಯಲ್ಲಿ ಪುಂಡಾಟ, ಹೆಲ್ಮೆಟ್ ಇಲ್ಲದೆ ಯುವಕರ ಸ್ಟಂಟ್!

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ರಸ್ತೆಯ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಸ್ಟಂಟ್ ನಡೆಸಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ.

ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಇತರ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮೂಡಿಸಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು, ವೀಲಿಂಗ್  ಮಾಡುವ ಮೂಲಕ ತಮ್ಮ ಜೀವಕ್ಕೂ, ಇತರರ ಜೀವಕ್ಕೂ ಅಪಾಯ ಉಂಟುಮಾಡಿದ್ದಾರೆ.

ರಸ್ತೆಗಳನ್ನು ಸ್ಟಂಟ್ ಮಾಡಲು ಬಳಸುವುದು ಅಪಾಯಕಾರಿ ಎಂಬ ಅರಿವು ಇಲ್ಲದಂತೆ ವರ್ತಿಸಿದ ಯುವಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ತಪ್ಪಿನಿಂದಲೇ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.

ಇಂತಹ ಪುಂಡಾಟಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

error: Content is protected !!