Home Blog Page 8

ಗೊಬ್ಬರ ಕೊರತೆ ಭೀತಿ ಇಲ್ಲ: ಮುಂಗಾರುಗಾಗಿಯೇ ಪೂರ್ವ ಸಿದ್ಧತೆ – ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಯುದ್ಧ ಪರಿಸ್ಥಿತಿಯಿಂದ ರಾಸಾಯನಿಕ ಗೊಬ್ಬರಗಳ ಕೊರತೆ ಉಂಟಾಗುವ ಭೀತಿ ಕುರಿತಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.  ವಿಧಾನಸೌಧದಲ್ಲಿ ಮಾತನಾಡಿದ ಅವರು,  ಡೀಸೆಲ್ ಮತ್ತು ಪೆಟ್ರೋಲ್ ಕೊರತೆ ಸಂಭವಿಸುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಧಾನಿಯವರ ಭಾಷಣವನ್ನು ಉಲ್ಲೇಖಿಸಿ ಹೇಳಿದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಜ್ಜಾಗಿದೆ. ರಾಸಾಯನಿಕ ಗೊಬ್ಬರಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ರೈತರು ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಮಣ್ಣಿನ ಫಲವತ್ತತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಮುಂಗಾರು ಮಳೆಯ ವೇಳೆಗೆ ಗೊಬ್ಬರಗಳ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಜವಾಬ್ದಾರಿಗಳ ಬಗ್ಗೆ ಸಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಕೇರಳ, ತಮಿಳುನಾಡು ಸೇರಿದಂತೆ ದಾವಣಗೆರೆ ಮತ್ತು ಬಾಗಲಕೋಟೆ ಭಾಗಗಳ ಚುನಾವಣಾ ಜವಾಬ್ದಾರಿಗಳ ಕುರಿತು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಇನ್ನೂ ರಾಜಕೀಯ ಬದಲಾವಣೆಗಳ ವಿಚಾರವನ್ನು ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ನಾಯಕರ ಮನವೊಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸುರ್ಜೇವಾಲ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಅಲ್ಪಸಂಖ್ಯಾತ ನಾಯಕರಿಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಜಮೀನು ಒತ್ತವರಿ ಆರೋಪ: ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಆರ್ಟ್ ಆಫ್ ಲಿವಿಂಗ್ದ ಶ್ರೀ ಶ್ರೀ ರವಿಶಂಕರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (BMTF) ದಾಖಲಿಸಿದ FIR ವಿರುದ್ಧ ರವಿಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ಬಳಿಕ ಈ ಆದೇಶ ನೀಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಲಿದೆ.

ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಒತ್ತುವರಿಗೆ ಸಂಬಂಧಿಸಿದ ವರದಿಯಲ್ಲಿ ರವಿಶಂಕರ್ ಯಾವುದೇ ಆಸ್ತಿ ಅಥವಾ ಭೂಮಿಯನ್ನು ಅತಿಕ್ರಮಿಸಿರುವುದು ತೋರಲಾಗದಿರುವುದನ್ನು ಹೈಕೋರ್ಟ್ ಗಮನಿಸಿದಂತೆ ತಿಳಿಸಿದ್ದಾರೆ. ಕೆಲ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳ ವಿರುದ್ಧ ಒತ್ತುವರಿ ಆರೋಪಗಳು ಇದ್ದರೂ, ಹೀಗೆ ಯಾವುದೇ ಪ್ರದೇಶವು ಅರ್ಜಿದಾರರ ಆಶ್ರಮದ ಕಾಂಪೌಂಡ್ ಒಳಗೆ ಬರುವುದಿಲ್ಲ ಎಂದು ತಿಳಿಸಲಾಗಿತ್ತು.

ಸರ್ಕಾರದ ಪರ ವಕೀಲರು ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಬೇಕೆಂದು ವಾದಿಸಿದ್ದರೂ, ನ್ಯಾಯಮೂರ್ತಿ ವಿಶೇಷ ಸರ್ಕಾರಿ ಅಭಿಯೋಜಕರು ನೇರವಾಗಿ ಭಾಗಿಯಾಗಿರುವುದಕ್ಕೆ ಪೂರಕ ದಾಖಲೆಗಳನ್ನು ನೀಡದೇ, ರವಿಶಂಕರ್ ಮೇಲೆ ಯಾವುದೇ ಆರೋಪ ದೃಢವಾಗಿಲ್ಲ ಎಂದು ಸೂಚಿಸಿ, ಅರ್ಜಿಯನ್ನು ಮಾನ್ಯವಲ್ಲವೆಂದು ತೀರ್ಮಾನಿಸಿದರು. ಈ ತೀರ್ಪಿನಿಂದ ರವಿಶಂಕರ್ ಮೇಲಿನ ಒತ್ತುವರಿ ಸಂಬಂಧ FIR ಪ್ರಕರಣಕ್ಕೆ ತಾತ್ಕಾಲಿಕ ಶಾಂತಿ ಸಿಗಲಿದೆ.

ಗದಗದಲ್ಲಿ ಸಿಲಿಂಡರ್ ಅಭಾವ: ಗ್ಯಾಸ್ ಏಜೆನ್ಸಿ ಬಳಿ ಕ್ಯೂ ನಿಂತ ಜನ, ಅಧಿಕಾರಿಗಳ ವಿರುದ್ದ ಆಕ್ರೋಶ!

0

ಗದಗ:– ಮಧ್ಯಪ್ರಾಚ್ಯ ದೇಶಗಳ ಯುದ್ಧದ ಭೀತಿಯಿಂದಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸಿಲಿಂಡರ್ ಅಭಾವ ತಲೆದೋರಿದೆ.

ಅದರಂತೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲೂ ಸಿಲಿಂಡರ್ ಗಾಗಿ ಹಾಹಾಕಾರ ಉಂಟಾಗಿದ್ದು, ಗ್ಯಾಸ್ ಖರೀದಿಗಾಗಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯ ನರಗುಂದ ಪಟ್ಟಣದಲ್ಲಿ ಕಂಡುಬಂದಿದೆ.

ಸಿದ್ದನಬಾವಿ ಓಣಿಯಲ್ಲಿರೋ ಇಂಡಿಯನ್ ಗ್ಯಾಸ್ ಬಳಿ ಊಟ, ನಿದ್ದೆ ಬಿಟ್ಟು ನಸುಕಿನಿಂದಲೇ ಖಾಲಿ ಸಿಲಿಂಡರ್ ಸಮೇತ ಬಿಸಿಲು ಎನ್ನದೇ ಕ್ಯೂ ನಿಂತಿದ್ದು, ಜನರ ಗೋಳಾಟ ಹೇಳತ್ತೀರದ್ದಾಗಿದೆ. ಗ್ರಾಮೀಣ ಭಾಗದ ಜನತೆ ಕೂಡ ಕಂಗಾಲಾಗಿದ್ದಾರೆ. ಸಿಲಿಂಡರ್ ಸಿಗದೇ ಬಂಡಾಯದ ನಾಡಿನ ಜನರ ಗೋಳು ಕೇಳುವವರೇ ಯಾರು ಇಲ್ಲದಂತಾಗಿದೆ.

ಬೆಳಗ್ಗೆ 8 ರಿಂದ 11 ಗಂಟೆವರೆಗೆ ಮಾತ್ರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ನರಗುಂದ ತಾಲೂಕಿನಲ್ಲಿ ಗೃಹಬಳಕೆ ಸಿಲಿಂಡರ್ ಸಮಸ್ಯೆ ತಲೆದೋರಿದೆ.

ಒಂದೆಡೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಗೃಹಬಳಕೆ ಸಿಲಿಂಡರ್ ಸಮಸ್ಯೆ ಇಲ್ಲ ಅಂತ ಪ್ರಕಟಣೆ ಹೊರಡಿಸಿದೆ. ಇನ್ನೊಂದೆಡೆ ನರಗುಂದ ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ತೀವ್ರ ಸಮಸ್ಯೆ ಉಂಟಾಗಿದ್ದು, ಅಧಿಕಾರಿಗಳ ಮೌನದ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಸಮಸ್ಯೆ ಆಗ್ತಾಯಿದ್ರು ಜಿಲ್ಲಾಡಳಿತ, ತಾಲೂಕಾಡಳಿತ ಮೌನವಹಿಸಿದ್ದು ಜನತೆ ಆಕ್ರೋಶ ಹೊರ ಹಾಕಿದ್ದಾರೆ.

ಕಪ್ಪು ಕಲೆ ಇರುವ ಈರುಳ್ಳಿ ತಿನ್ನಬಹುದಾ? ಆರೋಗ್ಯದ ಮೇಲೆ ಪರಿಣಾಮ ಏನು? ಇಲ್ಲಿದೆ ಮಾಹಿತಿ

0

ಅಡುಗೆಯಲ್ಲಿ ಅನಿವಾರ್ಯವಾಗಿರುವ ಈರುಳ್ಳಿಯಲ್ಲಿ ಕೆಲವೊಮ್ಮೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇಂತಹ ಈರುಳ್ಳಿಯನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎಂದು ತಜ್ಞರು ಸೂಚಿಸುತ್ತಿದ್ದಾರೆ.

ಈರುಳ್ಳಿಯ ಮೇಲಿನ ಕಪ್ಪು ಕಲೆಗಳು ಸಾಮಾನ್ಯವಾಗಿ ‘ಆಸ್ಪರ್ಗಿಲಸ್ ನೈಗರ್’ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಇದು ಮಣ್ಣಿನಲ್ಲಿ ಕಂಡುಬರುವ ಶಿಲೀಂಧ್ರವಾಗಿದ್ದು, ಈರುಳ್ಳಿಯ ಮೇಲ್ಮೈಯಲ್ಲಿ ಬೆಳೆಯುವ ಸಾಧ್ಯತೆ ಇದೆ. ಲಘುವಾಗಿ ಉಜ್ಜಿದರೆ ಕೆಲವು ಕಲೆಗಳು ಹೋಗಬಹುದು, ಆದರೆ ಪೂರ್ಣವಾಗಿ ನಿವಾರಣೆ ಆಗದೇ ಇರಬಹುದು.

ಹಸಿ ಈರುಳ್ಳಿ ಸೇವನೆ ಜೀರ್ಣಕ್ರಿಯೆ ಸುಧಾರಣೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಹಾಗೂ ವಿಟಮಿನ್ C ಅಂಶದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಜೊತೆಗೆ ಪೊಟ್ಯಾಸಿಯಮ್ ಅಂಶದಿಂದ ಹೃದಯ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.

ಆದರೆ ಕಪ್ಪು ಕಲೆಗಳಿರುವ ಈರುಳ್ಳಿಯನ್ನು ಸರಿಯಾಗಿ ಶುದ್ಧಗೊಳಿಸದೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಶಿಲೀಂಧ್ರವು ಕೆಲವರಲ್ಲಿ ಅಲರ್ಜಿ, ತಲೆನೋವು, ವಾಂತಿ, ಹೊಟ್ಟೆನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಅಸ್ತಮಾ ಅಥವಾ ಉಸಿರಾಟ ಸಮಸ್ಯೆಯಿಂದ ಬಳಲುವವರು ಇಂತಹ ಈರುಳ್ಳಿಯನ್ನು ಸೇವಿಸದಿರುವುದು ಒಳಿತು.

ಈರುಳ್ಳಿಯನ್ನು ಬಳಸುವ ಮೊದಲು ಮೇಲಿನ ಒಂದು ಅಥವಾ ಎರಡು ಪದರಗಳನ್ನು ತೆಗೆದು ಒಳಭಾಗವನ್ನು ಪರಿಶೀಲಿಸಿ ಬಳಸುವುದು ಉತ್ತಮ. ಹೆಚ್ಚಿನ ಪ್ರಮಾಣದಲ್ಲಿ ಕಪ್ಪು ಕಲೆಗಳು ಕಂಡುಬಂದರೆ ಅದನ್ನು ತ್ಯಜಿಸುವುದು ಸುರಕ್ಷಿತ.

ಇನ್ನೂ ಒಂದು ಮುಖ್ಯ ಸಂಗತಿ ಎಂದರೆ, ಈರುಳ್ಳಿಯನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವುದು ಶಿಲೀಂಧ್ರ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡುವುದು ಸೂಕ್ತ.

ಆರೋಗ್ಯದ ದೃಷ್ಟಿಯಿಂದ, ಈರುಳ್ಳಿಯ ಮೇಲಿನ ಕಪ್ಪು ಕಲೆಗಳನ್ನು ಲಘುವಾಗಿ ತೆಗೆದುಕೊಳ್ಳದೆ, ಸರಿಯಾದ ಕ್ರಮ ಅನುಸರಿಸಿ ಬಳಕೆ ಮಾಡುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ| ಇಂಧನ ಕೊರತೆ ವದಂತಿ ಬೆನ್ನಲ್ಲೇ ಪೆಟ್ರೋಲ್ ದರ 5 ರೂ., ಡೀಸೆಲ್ 3 ರೂ. ಏರಿಕೆ!

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ವದಂತಿ ಹರಿದಾಡಿದ ಹಿನ್ನೆಲೆ, ಚಿಕ್ಕಬಳ್ಳಾಪುರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಜನರು ಬಂಕ್‌ಗಳ ಮುಂದೆ ಸಾಲು ನಿಂತು ತಮ್ಮ ವಾಹನಗಳಿಗೆ ಇಂಧನ ತುಂಬಿಸುತ್ತಿದ್ದಾರೆ.

ನಯಾರ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 5 ರೂ. ಹೆಚ್ಚಳದೊಂದಿಗೆ 108.28 ರೂ. ಆಗಿದ್ದು, ಡೀಸೆಲ್‌ ಲೀಟರ್‌ಗೆ 3 ರೂ. ಏರಿಕೆಯೊಂದಿಗೆ 94.10 ರೂ. ತಲುಪಿದೆ. ಸ್ಟೇಷನ್ ರಸ್ತೆಯಲ್ಲಿನ ಹಾಗೂ ಬಸವೇಶ್ವರ ರಸ್ತೆಯ ಪೆಟ್ರೋಲ್ ಬಂಕ್‌ಗಳಲ್ಲಿ ಬೈಕ್ ಮತ್ತು ಕಾರುಗಳ ಸಾಲು ಕಂಡು ಬಂದಿದೆ.

ಇಂಧನ ಸರಬರಾಜು ಪ್ರಸ್ತುತ ಸುಗಮವಾಗಿದೆ. ಆದರೆ ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ವಾಹನಗಳಿಗೆ ಫುಲ್ ಸ್ಟಾಕ್ ಮಾಡಿಕೊಳ್ಳುತ್ತಿರುವುದರಿಂದ ಕೆಲ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಗ ಖಾಲಿಯಾಗುತ್ತಿರುವುದು ಕಂಡುಬಂದಿದೆ. ಹೊಸ ಸರಬರಾಜು ಬರಲು ವಿಳಂಬವಾಗುತ್ತಿದ್ದು, ಇದರಿಂದ ಪ್ಯಾನಿಕ್ ಖರೀದಿ ತೀವ್ರಗೊಂಡಿದೆ.

ಅದು ಯಾವಾಗಲೂ ನನ್ನ DNA ಭಾಗ: ​​RCB ಮಾರಾಟದ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್!

ಬೆಂಗಳೂರು: ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಕಂಪನಿಯು ಆರ್‌ಸಿಬಿ ತಂಡದ ತನ್ನ ಒಡೆತನವನ್ನು ಸಂಪೂರ್ಣವಾಗಿ ಮಾರಾಟ ಮಾಡಿದ್ದು, ಆದಿತ್ಯ ಬಿರ್ಲಾ ಸಮೂಹ 16,706 ಕೋಟಿ ರೂಪಾಯಿಗೆ ಫ್ರಾಂಚೈಸಿಯನ್ನು ಖರೀದಿಸಿದೆ.

ಈ ಮೂಲಕ ಆದಿತ್ಯ ಬಿರ್ಲಾ ಹೊಸ ಕ್ಷೇತ್ರದಲ್ಲಿ ಕಾಲಿಟ್ಟಿದ್ದಾರೆ. ಖರೀದಿಯಲ್ಲಿ ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್, ಬೋಲ್ಟ್ ವೆಂಚರ್ಸ್‌, ಬ್ಲ್ಯಾಕ್‌ಸ್ಟೋನ್ ಇಕ್ವಿಟಿ ಫರ್ಮ್‌, ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಸೇರಿದಂತೆ ಹಲವಾರು ಪಾಲುದಾರರು ಭಾಗಿಯಾಗಿದ್ದಾರೆ.

ಈ ಹಿನ್ನಲೆಯಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.  “2008ರಲ್ಲಿ ನಾನು RCB ಫ್ರಾಂಚೈಸಿಯನ್ನು 450 ಕೋಟಿ ರೂಪಾಯಿಗೆ ಖರೀದಿಸಿದ್ದೆ. ಬಹುತೇಕರು ನನ್ನ ಹೂಡಿಕೆಯನ್ನು ವ್ಯರ್ಥ ಎಂದು ಟೀಕಿಸಿದರು. ಆದರೆ ಈಗ ಅದೇ ಹೂಡಿಕೆ 16,500 ಕೋಟಿ ರೂಪಾಯಿಗಳಿಗೆ ಬೆಳೆದಿದೆ. RCB ಯಾವಾಗಲೂ ನನ್ನ DNA ಭಾಗವಾಗಿ ಉಳಿಯಲಿದೆ. ಹೊಸ ಮಾಲೀಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲಾ RCB ಅಭಿಮಾನಿಗಳು, ದಯವಿಟ್ಟು ನಮ್ಮ ಬೆಂಗಳೂರಿನ ಸಿಂಹವನ್ನು ಬೆಂಬಲಿಸಿ. ನಮಸ್ಕಾರ’ ಎಂದು ಅವರು ಕೋರಿದ್ದಾರೆ.

ಬಿಸಿಸಿಐ ಐಪಿಎಲ್ ಆರಂಭಿಸೋ ಸಂಧರ್ಭದಲ್ಲಿ ಫ್ರಾಂಚೈಸಿಗಳನ್ನು ಮಾಡಿ, ಮಾರಲು ಮುಂದಾಯಿತು. ಆಗ ಮಲ್ಯ ಎರಡು ಫ್ರಾಂಚೈಸಿ ನೀಡುವಂತೆ ಬೇಡಿಕೆ ಇಟ್ಟರು. ಆದರೆ, ಒಬ್ಬರಿಗೆ ಒಂದು ತಂಡ ಮಾತ್ರ ಖರೀದಿಸುವ ಅವಕಾಶ ನೀಡಲಾಯಿತು. ಅದರಂತೆ ಮಲ್ಯ 450 ಕೋಟಿ ರೂಪಾಯಿ ನೀಡಿ ಒಂದು ತಂಡ ಖರೀದಿ ಮಾಡಿದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರ ಮಾಡೋದು ಇವರ ಉದ್ದೇಶ ಆಗಿತ್ತು.

ಈ ಕಾರಣದಿಂದ ರಾಯಲ್ ಚಾಲೆಂಜರ್ಸ್ ಅಂತ ಇಟ್ಟರು. ಮಲ್ಯಗೆ ಬೆಂಗಳೂರು ಹಿನ್ನೆಲೆ ಇರುವುದರಿಂದ ಬೆಂಗಳೂರು ಎಂಬುದನ್ನು ಸೇರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ತಂಡಕ್ಕೆ ಹೆಸರು ಇಟ್ಟರು. ವಿರಾಟ್ ಕೊಹ್ಲಿ ಖರೀದಿಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದರು.

 

ಗುಡ್ ನ್ಯೂಸ್ ಕೊಟ್ಟ ಇರಾನ್: ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್!

0

ಟೆಹ್ರಾನ್‌: ವಿಶ್ವದ ಪ್ರಮುಖ ತೈಲ ಸಾಗಾಣಿಕೆಯ ಮಾರ್ಗವಾಗಿರುವ ಹಾರ್ಮುಜ್‌ ಜಲಸಂಧಿಯು ಮಿತ್ರ ರಾಷ್ಟ್ರಗಳ ಹಡಗುಗಳಿಗೆ ತೆರೆಯಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.

ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಹೀಗೆ ಮಿತ್ರರಾಷ್ಟ್ರಗಳಿಗೆ ಈಗ ಯಾವುದೇ ನಿರ್ಬಂಧವಿಲ್ಲದೆ ಸಾಗಲು ಅವಕಾಶ ಸಿಕ್ಕಿದೆ.

ಇಸ್ರೇಲ್ ಮತ್ತು ಅಮೆರಿಕ ವಿರುದ್ಧದ ಸ್ಥಿತಿಗತಿಗಳನ್ನು ಅನುಸರಿಸಿ, ಈ ಮಾರ್ಗವನ್ನು ಮುಚ್ಚಿದ್ದ ಇರಾನ್, ಅಮೆರಿಕದ 1 ತಿಂಗಳ ಕದನ ವಿರಾಮ ಘೋಷಣೆಯ ಬಳಿಕ ಮಿತ್ರ ರಾಷ್ಟ್ರಗಳಿಗೆ ಜಲಮಾರ್ಗವನ್ನು ತೆರೆಯುತ್ತಿದೆ. ಆದರೆ ಶತ್ರು ರಾಷ್ಟ್ರಗಳ ಹಡಗುಗಳಿಗೆ ಯಾವುದೇ ಕಾರಣಕ್ಕೂ ಹಾರ್ಮುಜ್‌ ಮೂಲಕ ಸಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಅರಘ್ಚಿ ಎಚ್ಚರಿಕೆ ನೀಡಿದ್ದಾರೆ.

ಈ ನಿರ್ಧಾರದಿಂದ ತೈಲ ಸಾಗಣೆ ಸುಗಮವಾಗಿ ಮುಂದುವರಿಯುವ ನಿರೀಕ್ಷೆ ಇದೆ, ಮತ್ತು ಜಾಗತಿಕ ತೈಲ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಆಂಧ್ರ: ಭೀಕರ ರಸ್ತೆ ಅಪಘಾತ! ಹೊತ್ತಿ ಉರಿದ ಬಸ್; 10 ಜನ ಸಜೀವದಹನ

0

ಮಾರ್ಕಪುರಂ: ಟಿಪ್ಪರ್ ಟ್ರಕ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿರುವ ಘಟನೆ ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಜರುಗಿದೆ.

ಘಟನೆಯಲ್ಲಿ, ಬಸ್ಸಿನೊಳಗಿದ್ದ 10 ಜನರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. 18 ಜನರು ತೀವ್ರ ಗಾಯಗಳೊಂದಿಗೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಉಳಿದವರು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ.

ಹೈದರಾಬಾದ್‌ನಿಂದ ಪಾಮೂರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಟ್ರಾವೆಲ್ ಬಸ್ ಮತ್ತು ಚಿಮಕುರ್ತಿಯಿಂದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.

ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕಣಿಗಿರಿ ಮತ್ತು ಪಾಮೂರ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.

ನದಿಗೆ ಬಸ್ ಉರುಳಿ 23 ಜನ ಸಾವು: ತನಿಖೆಗೆ ಆದೇಶಿಸಿದ ಬಾಂಗ್ಲಾ ಪ್ರಧಾನಿ!

0

ಢಾಕಾ: ನದಿಗೆ ಬಸ್ ಉರುಳಿ 23 ಜನ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಾಂಗ್ಲಾದೇಶದ ನೈಋತ್ಯ ಜಿಲ್ಲೆಯ ರಾಜ್ಬರಿಯಲ್ಲಿ ದೌಲಾಡಿಯಾ ಟರ್ಮಿನಲ್‌ನಲ್ಲಿ ಜರುಗಿದೆ.

ಸಾರಿಗೆ ದೋಣಿಯ ಮೇಲೆ ಹತ್ತಲು ಪ್ರಯತ್ನಿಸುತ್ತಿದ್ದ ಬಸ್ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದಿದ್ದು, ಇದರ ಪರಿಣಾಮ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ರಾಜ್ಬರಿಯಿಂದ ಢಾಕಾದಿಂದ 128 ಕಿಲೋಮೀಟರ್ ದೂರದಲ್ಲಿರುವ ಢಾಕಾಗೆ ಪ್ರಯಾಣಿಸುತ್ತಿತ್ತು. ಬಸ್ ಸಾರಿಗೆ ದೋಣಿಯ ಮೇಲೆ ಹತ್ತುವಾಗ ಈ ಅಪಘಾತ ಸಂಭವಿಸಿದೆ. ಇದರಿಂದ ಬಸ್​​ನಲ್ಲಿದ್ದ ಪ್ರಯಾಣಿಕರು ನೀರಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ಸೇವೆ ಮತ್ತು ಡೈವರ್‌ಗಳ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿವೆ.

ಬಸ್​​ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ 50 ಜನರನ್ನು ತುಂಬಿಸಿಕೊಂಡಿತ್ತು. ವಿಪರೀತ ಭಾರವಾಗಿ ಬಸ್​ ಆಯತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಕ್ಷಣಾ ಹಡಗು ಹಮ್ಜಾ ಈ ಘಟನೆ ನಡೆದ 6 ಗಂಟೆಗಳ ನಂತರ ನದಿಯಿಂದ ಬಸ್ ಅನ್ನು ಹೊರತೆಗೆದಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹಡಗಿನ ಕ್ರೇನ್ ಬಳಸಿ ಇಡೀ ಬಸ್ ಅನ್ನು ಮೇಲಕ್ಕೆತ್ತಲಾಯಿತು. ಈ ಘಟನೆಯ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ತನಿಖೆಗೆ ಆದೇಶಿಸಿದ್ದಾರೆ.

ನದಿಗೆ ಬಿದ್ದ ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೀರಿನ ದರ ನಿರಂತರ ಹೆಚ್ಚಳ: ಜನರ ಗಮನವಿಲ್ಲದೆ ಜೇಬಿಗೆ ಕತ್ತರಿ ಹಾಕುತ್ತಿದೆ ಜಲಮಂಡಳಿ?

ಬೆಂಗಳೂರು: ಜನ ಸಾಮಾನ್ಯರಿಗೆ ಅಗತ್ಯವಸ್ತುಗಳ ಬೆಲೆ ಏರಿಕೆ ತೀವ್ರ ಆಘಾತ ತಂದಿರುವ ಸಂದರ್ಭದಲ್ಲಿಯೇ, ಜಲಮಂಡಳಿ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಹೆಚ್ಚಳ ಮಾಡುವ ಮೂಲಕ, ಜನರಿಂದ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಸಾರ್ವಜನಿಕ ಪ್ರಕಟಣೆ ನೀಡದೆ, ಜನರ ಗಮನಕ್ಕೂ ತರದೆ ಬಡ್ಡಿ/ಸುಲಿಗೆ ವಿಧಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

ಇನ್ನು ಒಳಚರಂಡಿ ಉಪಕರಣದ ಶುಲ್ಕವೂ ಪ್ರತಿ ತಿಂಗಳು ಶೇಕಡಾ 31.25ರಷ್ಟು ಏರಿಕೆಗೊಂಡಿದ್ದು, BWSSB ಆಡಳಿತ ಮಂಡಳಿಯು ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಈ ಕ್ರಮವನ್ನು ಅನುಸರಿಸುತ್ತಿದೆ. ಜನರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆ ತಾಳುತ್ತಿರುವ ಸಂದರ್ಭದಲ್ಲಿ, ಮೂಲಸೌಕರ್ಯಗಳ ಮೇಲಿನ ಈ ನಿರಂತರ ಶುಲ್ಕ ಹೆಚ್ಚಳ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.

error: Content is protected !!