Home Blog Page 7

ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್: ಉಪಚುನಾವಣೆಗೆ ಮೂವರು ನಾಯಕರಿಗೆ ಜವಾಬ್ದಾರಿ

0

ಬೆಳಗಾವಿ: ರಾಜ್ಯದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಗಡಿಜಿಲ್ಲೆಯ ಮೂವರು ಪ್ರಮುಖ ನಾಯಕರಿಗೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಗೆಲುವಿನ ಟಾಸ್ಕ್ ನೀಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಬಲಪಡಿಸಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಲಾಗಿದೆ.

ಈ ಮೂವರು ನಾಯಕರಿಗೆ ಸಂಘಟನಾ ಸಾಮರ್ಥ್ಯ ಹಾಗೂ ಕಠಿಣ ಚುನಾವಣಾ ಅನುಭವ ಇರುವುದರಿಂದ ಹೈಕಮಾಂಡ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.

ಲಿಂಗಾಯತ ಹಾಗೂ ಅಹಿಂದ ಮತಬ್ಯಾಂಕ್‌ಗಳನ್ನು ಸಮರ್ಪಕವಾಗಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಲೆ ಸೃಷ್ಟಿಸುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಈ ನಿಯೋಜನೆ ಕಾಂಗ್ರೆಸ್ ಪಕ್ಷದ ಉಪಚುನಾವಣಾ ಕಾರ್ಯತಂತ್ರದಲ್ಲಿ ಮಹತ್ವದ ತಿರುವಾಗಿದ್ದು, ಫಲಿತಾಂಶದ ಮೇಲೆ ಈ ನಾಯಕರ ಪಾತ್ರ ನಿರ್ಣಾಯಕವಾಗಲಿದೆ.

ಬೈಲಾ ಉಲ್ಲಂಘನೆ ಆರೋಪ: ಮಂಡ್ಯ ಕುರುಬರ ಸಂಘದಲ್ಲಿ ಗಲಾಟೆ, ಅಧ್ಯಕ್ಷನಿಗೆ ಘೇರಾವ್

0

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಆಡಳಿತಾತ್ಮಕ ವಿವಾದ ತೀವ್ರಗೊಂಡಿದ್ದು, ಅಧ್ಯಕ್ಷ ಸುರೇಶ್ ವಿರುದ್ಧ ಸಂಘದ ಸದಸ್ಯರು ಮತ್ತು ನಿರ್ದೇಶಕರು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಅಧ್ಯಕ್ಷರ ಅವಧಿ ಮುಗಿದರೂ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಅಧ್ಯಕ್ಷರು ಕಚೇರಿಗೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾಕಾರರು ಘೇರಾವ್ ಹಾಕಿ ಘೋಷಣೆ ಕೂಗಿದರು. ನಂತರ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಬೈಲಾ ಪ್ರಕಾರ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಹೊಸ ಚುನಾವಣೆ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕಾನೂನುಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಿತಿ ತೀವ್ರಗೊಂಡ ಹಿನ್ನೆಲೆ ಅಧ್ಯಕ್ಷ ಸುರೇಶ್ ಗಲಿಬಿಲಿಗೊಂಡು, ಪೊಲೀಸ್ ರಕ್ಷಣೆಯಲ್ಲಿ ಸ್ಥಳದಿಂದ ನಿರ್ಗಮಿಸಿದರು.

ಈ ಘಟನೆ ಸಂಘದ ಒಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿರುವುದನ್ನು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳಿಗೆ ವೇದಿಕೆ ಸೃಷ್ಟಿಸಿದೆ.

ಟೋಯಿಂಗ್ ಮಾಫೀಯಾ ಕೈಗೆ ಬೆಂಗಳೂರು ಜನರನ್ನ ಕೊಡೊದಕ್ಕೆ‌ ಸರ್ಕಾರ ಹೊರಟಿದೆ: ಅರಗ ಜ್ಞಾನೇಂದ್ರ ಟೀಕೆ

ಬೆಂಗಳೂರು: ನಗರದಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿರುವ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 2022ರಲ್ಲಿ ಟೋಯಿಂಗ್ ವ್ಯವಸ್ಥೆ ವೇಳೆ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದರು ಎಂದು ಅವರು ಹೇಳಿದರು. ಟೋಯಿಂಗ್ ಮಾಫಿಯಾ ಅಮಾನುಷವಾಗಿ ವರ್ತಿಸುತ್ತಿತ್ತು ಎಂದು ಆರೋಪಿಸಿದರು.

ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾಕಷ್ಟು ಒತ್ತಡವಿತ್ತು. ಕೆಲವು ಪೊಲೀಸ್ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಟೋಯಿಂಗ್ ಟೆಂಡರ್ ಪಡೆದಿದ್ದರು ಎಂಬ ಆರೋಪಗಳಿದ್ದವು. ಸಿಬ್ಬಂದಿಯ ವರ್ತನೆ ಸೇರಿದಂತೆ ಅನೇಕ ಅಂಶಗಳನ್ನು ಪರಿಗಣಿಸಿ ಆ ವ್ಯವಸ್ಥೆಯನ್ನು ರದ್ದು ಮಾಡಲಾಗಿತ್ತು ಎಂದು ತಿಳಿಸಿದರು.

ಇದೀಗ ಮತ್ತೆ ಟೋಯಿಂಗ್ ವ್ಯವಸ್ಥೆ ತರಲು ಸರ್ಕಾರ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. ಹಿಂದಿನಂತೆ ಕಂಟ್ರಾಕ್ಟರ್‌ಗಳು ಪೊಲೀಸ್ ಠಾಣೆಗಳಿಗೆ ಹಣ ನೀಡಬೇಕಾಗಿತ್ತು ಎಂಬ ವರದಿಗಳು ಇದ್ದವು. ಲಕ್ಷಾಂತರ ರೂಪಾಯಿ ವಹಿವಾಟು ನಡೆದಿತ್ತು ಎಂದು ಹೇಳಿದರು. ಈಗ ಮತ್ತೆ ಆ ರೀತಿಯ ಮಾಫಿಯಾ ಕೈಗೆ ಬೆಂಗಳೂರು ಜನರನ್ನು ಒಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.

ದಂಡ ವಸೂಲಿ ಹೆಸರಿನಲ್ಲಿ 112 ವಾಹನಗಳು ರಸ್ತೆಯಲ್ಲಿ ದರೋಡೆ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಟೀಕಿಸಿದ ಅವರು, ಸರ್ಕಾರ ತನ್ನ ಆರ್ಥಿಕ ದುಸ್ಥಿತಿಯನ್ನು ಸರಿಪಡಿಸಲು ದಂಡವನ್ನು ಆದಾಯ ಮೂಲವಾಗಿ ಬಳಸುತ್ತಿದೆ ಎಂದು ಹೇಳಿದರು.

ಇದು ನಾಗರಿಕರಿಗೆ ಅನಗತ್ಯ ಕಿರಿಕಿರಿ ಉಂಟುಮಾಡುತ್ತಿದೆ. ಸರ್ಕಾರವು ತನ್ನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ಬೇರೆ ಮಾರ್ಗಗಳನ್ನು ಹುಡುಕಬೇಕು. ಜನರಿಗೆ ಹಿಂಸೆ ಮತ್ತು ಅವಮಾನ ಉಂಟುಮಾಡುವ ನೀತಿಗಳನ್ನು ಅನುಸರಿಸಬಾರದು ಎಂದು ಅವರು ಒತ್ತಾಯಿಸಿದರು. ಈ ರೀತಿಯ ಕ್ರಮವನ್ನು ತಾವು ಖಂಡಿಸುತ್ತೇನೆ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕೊಪ್ಪಳ ನಗರಸಭೆಯಲ್ಲಿ 10 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ: ಜೆಇ ಸೋಮಲಿಂಗಪ್ಪ ಸಸ್ಪೆಂಡ್!

ಕೊಪ್ಪಳ: ಲೋಕಾಯುಕ್ತ ದಾಳಿಯಲ್ಲಿ ಬಹಿರಂಗವಾದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕೊಪ್ಪಳ ನಗರಸಭೆಯ ಜೂನಿಯರ್ ಎಂಜಿನಿಯರ್ (ಜೆಇ) ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ.

2023-24 ಹಾಗೂ 2024-25ನೇ ಸಾಲಿನ ವಿವಿಧ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿ ಅಕ್ರಮ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಒಟ್ಟು 366 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಪತ್ತೆಯಾಗಿದೆ.

ಈ ಹಿಂದೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ಈ ಅಕ್ರಮಗಳ ಕುರಿತು ಮಾಹಿತಿ ಬಹಿರಂಗವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೌರಾಡಳಿತ ಇಲಾಖೆ, ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಮಳೆ ಏಪ್ರಿಲ್ 1ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ಅರ್ಧ ಗಂಟೆಯಿಂತ ಹೆಚ್ಚುಕಾಲ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ಗುಡುಗಿನ ಅಬ್ಬರದ ಜೊತೆಗೆ ಆಲಿಕಲ್ಲುಗಳೂ ಬಿದ್ದಿವೆ. ಖಾನಾಪುರ, ಬೆಳಗಾವಿ, ಹುಕ್ಕೇರಿ, ಸವದತ್ತಿ, ರಾಮದುರ್ಗ, ಯರಗಟ್ಟಿ, ಬೈಲಹೊಂಗಲ, ಮೂಡಲಗಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ದಾಖಲಾಗಿತ್ತು.

ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ಅಂಡಾರು, ಕಾಡುಹೊಳೆ, ಮುನಿಯಾಲು, ಮುಟ್ಲುಪಾಡಿ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿಮಳೆಯಿಂದ ಹಾನಿ ಸಂಭವಿಸಿದ್ದು, ಅಜೆಕಾರು ಹಾಗೂ ಅಂಡಾರು ಪ್ರದೇಶದಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಆರೆಂಜ್ ಅಲರ್ಟ್: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮಾರ್ಚ್ 26ರಿಂದ ಏಪ್ರಿಲ್ 1ರವರೆಗೆ ಆಲಿಕಲ್ಲು ಮಳೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ವಿಜಯನಗರದಲ್ಲಿ ಮಾರ್ಚ್ 26ರಂದು ಬಿರುಗಾಳಿ, ಗುಡುಗು ಮತ್ತು ಮಿಂಚಿನ ತೀವ್ರತೆಯು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ರೈತರು, ಕುರಿಗಾಹಿಗಳು ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.

ಇದೊಂದಿಗೆ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾರ್ಚ್ 26ರಂದು ಸಾಧಾರಣ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗೇಟ್ ದುರಂತದ ನಂತರ ಎಚ್ಚರ: ತುಂಗಭದ್ರಾ ಡ್ಯಾಂಗೆ ಹೊಸ ಚೈನ್-ರೈತರು ಫುಲ್ ಖುಷ್

0

ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತುಹೋದ ಘಟನೆ ನಂತರ ಉಂಟಾದ ಗಂಭೀರ ಪರಿಸ್ಥಿತಿಗೆ ಸರ್ಕಾರ ಇದೀಗ ಸಮಗ್ರ ಪರಿಹಾರ ಕ್ರಮ ಕೈಗೊಂಡಿದೆ. ಗೇಟ್‌ಗಳ ಬದಲಾವಣೆಯ ಜೊತೆಗೆ ಇದೀಗ ಅವುಗಳನ್ನು ಕಾರ್ಯನಿರ್ವಹಿಸಲು ಅಗತ್ಯವಾದ ಚೈನ್‌ಗಳನ್ನೂ ಬದಲಾಯಿಸಲು ತೀರ್ಮಾನಿಸಲಾಗಿದೆ.

2024ರ ಆಗಸ್ಟ್ 10ರಂದು ಸಂಭವಿಸಿದ ಈ ಘಟನೆಗೆ ಗೇಟ್‌ಗಳ ಅವಧಿ ಮೀರಿರುವುದು ಮತ್ತು ಚೈನ್ ಡಿಲಿಂಕ್ ಆಗಿರುವುದು ಕಾರಣವೆಂದು ತಜ್ಞರು ಹೇಳಿದ್ದು, ಈ ಹಿನ್ನೆಲೆ ಸರ್ಕಾರ ₹42 ಕೋಟಿ ವೆಚ್ಚದಲ್ಲಿ 33 ಗೇಟ್‌ಗಳ ಬದಲಾವಣೆ ಕಾಮಗಾರಿ ಆರಂಭಿಸಿತ್ತು.

ಆದರೆ ಆರಂಭಿಕ ಹಂತದಲ್ಲಿ ಚೈನ್‌ಗಳನ್ನು ಬದಲಾಯಿಸದೇ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಲು ತೆಗೆದುಕೊಂಡ ನಿರ್ಧಾರ ರೈತರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಸರ್ಕಾರ ತನ್ನ ನಿಲುವು ಬದಲಿಸಿ ₹5.5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಹೊಸ ಚೈನ್ ಅಳವಡಿಕೆಗೆ ಮುಂದಾಗಿದೆ.

ಈಗಾಗಲೇ 18 ಗೇಟ್‌ಗಳ ಡಿಮೆಟಲಿಂಗ್ ಪೂರ್ಣಗೊಂಡಿದ್ದು, ಐದು ಗೇಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದ್ದರೂ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಗೇಟ್ ಬದಲಾವಣೆ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ ಮುಂದಿನ ಬೇಸಿಗೆ ಬೆಳೆಗೂ ನೀರಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ.

ಸರ್ಕಾರ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನೀಡಿದ್ದರೂ, ಅಧಿಕಾರಿಗಳು, ಗುತ್ತಿಗೆದಾರರು ಸಮನ್ವಯದಿಂದ ವೇಗ ಹೆಚ್ಚಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ಟಾರೆ, ತುಂಗಭದ್ರಾ ಡ್ಯಾಂ ಕಾಮಗಾರಿ ಈಗ ನಿರ್ಣಾಯಕ ಹಂತ ತಲುಪಿದ್ದು, ಸಮಯಕ್ಕೆ ಸರಿಯಾಗಿ ಪೂರ್ಣಗೊಂಡರೆ ಸಾವಿರಾರು ರೈತರಿಗೆ ದೊಡ್ಡ ನೆರವಾಗಲಿದೆ.

ಸೋಶಿಯಲ್ ಮೀಡಿಯಾ ಮೂಲಕ ಉಗ್ರ ಪ್ರಚಾರ: ವಿಜಯವಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ, 12 ಮಂದಿ ಬಂಧನ

0

ಬಳ್ಳಾರಿ: ಮೂಲಭೂತವಾದಿ ಚಿಂತನೆಗಳ ಪ್ರಚಾರ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಯೋಜಿತ ಪೊಲೀಸ್ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಬಳ್ಳಾರಿ ಮೂಲದ ಅಬ್ದುಲ್ ಸಲಾಮ್ (36) ಸೇರಿದ್ದು, ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ಸಹಯೋಗದಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರವಾದಿ ವಿಚಾರಧಾರೆಗಳನ್ನು ಹಬ್ಬಿಸುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಮಾರ್ಚ್ 23ರಂದು ವಿಜಯವಾಡ ಟೌನ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ಆರಂಭಿಸಿದ್ದರು.

ವಿಂಚ್‌ಪೇಟ್ನಲ್ಲಿ ಪ್ರಮುಖ ಆರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ ಬಂಧನದ ವೇಳೆ ದೊರೆತ ಮಾಹಿತಿ ಆಧರಿಸಿ ದೇಶವ್ಯಾಪಿ ಕಾರ್ಯಾಚರಣೆ ವಿಸ್ತರಿಸಲಾಯಿತು.

ಬಳ್ಳಾರಿಯಲ್ಲಿ ಆರೋಪಿ ಸಲಾಮ್ ಬಂಧನಕ್ಕೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಸಹಕಾರ ಪಡೆದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಹೆಚ್ಚಿನ ವಿಚಾರಣೆಗಾಗಿ ಆಂಧ್ರ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.

ತನಿಖೆಯಲ್ಲಿ ‘ಅಲ್ ಮಾಲಿಕ್ ಇಸ್ಲಾಮಿಕ್ ಯೂತ್’ ಎಂಬ ಗುಂಪಿನ ಮೂಲಕ ಯುವಕರನ್ನು ಅತಿರೇಕದ ಮಾರ್ಗಕ್ಕೆ ಸೆಳೆಯುವ ಪ್ರಯತ್ನ ನಡೆದಿರುವುದು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟನೆ ತನ್ನ ಪ್ರಭಾವ ವಿಸ್ತರಿಸಿಕೊಂಡಿದ್ದು, ಹಲವು ರಾಜ್ಯಗಳಲ್ಲಿ ಸಂಪರ್ಕ ಜಾಲ ನಿರ್ಮಿಸಿಕೊಂಡಿತ್ತು.

ಈ ಬೆಳವಣಿಗೆ ದೇಶದ ಭದ್ರತಾ ವ್ಯವಸ್ಥೆಗೆ ಸವಾಲು ಎತ್ತುವಂತಿದ್ದು, ಪೊಲೀಸರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸುತ್ತೂರು ಮಠಕ್ಕೆ ಭೇಟಿ: ಮಠದ ಶೈಕ್ಷಣಿಕ ಕೊಡುಗೆಗಳಿಗೆ ಒತ್ತು

ಮೈಸೂರು: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಮೈಸೂರಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರಧಾನ್ ಅವರು ಬೆಳಗಿನ ಉಪಹಾರ ಸೇವಿಸಿದರು. ಇನ್ನೂ ಈ ಭೇಟಿ ಕೆಎಸ್‌ಒಯುನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಸುತ್ತೂರು ಮಠ ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಮಠದ ಶೈಕ್ಷಣಿಕ ಸಂಸ್ಥೆಗಳು ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಮಠವು ಒಂದು ವೈದ್ಯಕೀಯ ಕಾಲೇಜು, ಒಂದು ದಂತ ವೈದ್ಯಕೀಯ ಕಾಲೇಜು ಮತ್ತು ಎರಡು ಔಷಧ ವಿಜ್ಞಾನ ಕಾಲೇಜುಗಳನ್ನು ನಡೆಸುತ್ತಿದೆ. ಇನ್ನು ನೋಯ್ಡಾ ಮತ್ತು ಜಮ್ಮುವಿನಲ್ಲಿಯೂ ಮಠವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ.

ಜಮ್ಮುವಿನಲ್ಲಿ ಆರಂಭವಾದ ಔಷಧ ವಿಜ್ಞಾನ ಕಾಲೇಜು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದ ಔಷಧ ವಿಜ್ಞಾನ ಕಾರ್ಯಕ್ರಮಗಳು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) ನಿರಂತರವಾಗಿ ಉನ್ನತ ಸ್ಥಾನಗಳನ್ನು ಪಡೆದಿವೆ.

ಮಠವು ಸ್ಥಳೀಯ ತಾಯ್ನುಡಿಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದು, ದೇಶದಾದ್ಯಂತ 200ಕ್ಕೂ ಹೆಚ್ಚು ಸ್ಥಳೀಯ ತಾಯ್ನುಡಿಗಳ ಅಭಿವೃದ್ದಿ ಮತ್ತು ಪ್ರಚಾರದಲ್ಲಿ ಕಾರ್ಯೋನ್ಮುಖವಾಗಿದೆ. ತಾಯ್ನುಡಿಗಳ ಅಭಿವೃದ್ಧಿ, ಉನ್ನತ ಶಿಕ್ಷಣ, ಯೋಗ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮಠದ ಕೊಡುಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಗೊಬ್ಬರ ಕೊರತೆ ಭೀತಿ ಇಲ್ಲ: ಮುಂಗಾರುಗಾಗಿಯೇ ಪೂರ್ವ ಸಿದ್ಧತೆ – ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಯುದ್ಧ ಪರಿಸ್ಥಿತಿಯಿಂದ ರಾಸಾಯನಿಕ ಗೊಬ್ಬರಗಳ ಕೊರತೆ ಉಂಟಾಗುವ ಭೀತಿ ಕುರಿತಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.  ವಿಧಾನಸೌಧದಲ್ಲಿ ಮಾತನಾಡಿದ ಅವರು,  ಡೀಸೆಲ್ ಮತ್ತು ಪೆಟ್ರೋಲ್ ಕೊರತೆ ಸಂಭವಿಸುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಧಾನಿಯವರ ಭಾಷಣವನ್ನು ಉಲ್ಲೇಖಿಸಿ ಹೇಳಿದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಜ್ಜಾಗಿದೆ. ರಾಸಾಯನಿಕ ಗೊಬ್ಬರಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ರೈತರು ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಮಣ್ಣಿನ ಫಲವತ್ತತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಮುಂಗಾರು ಮಳೆಯ ವೇಳೆಗೆ ಗೊಬ್ಬರಗಳ ಸರಬರಾಜಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಜವಾಬ್ದಾರಿಗಳ ಬಗ್ಗೆ ಸಿಎಲ್‌ಪಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಕೇರಳ, ತಮಿಳುನಾಡು ಸೇರಿದಂತೆ ದಾವಣಗೆರೆ ಮತ್ತು ಬಾಗಲಕೋಟೆ ಭಾಗಗಳ ಚುನಾವಣಾ ಜವಾಬ್ದಾರಿಗಳ ಕುರಿತು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಇನ್ನೂ ರಾಜಕೀಯ ಬದಲಾವಣೆಗಳ ವಿಚಾರವನ್ನು ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ನಾಯಕರ ಮನವೊಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸುರ್ಜೇವಾಲ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಅಲ್ಪಸಂಖ್ಯಾತ ನಾಯಕರಿಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಜಮೀನು ಒತ್ತವರಿ ಆರೋಪ: ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಆರ್ಟ್ ಆಫ್ ಲಿವಿಂಗ್ದ ಶ್ರೀ ಶ್ರೀ ರವಿಶಂಕರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (BMTF) ದಾಖಲಿಸಿದ FIR ವಿರುದ್ಧ ರವಿಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ಬಳಿಕ ಈ ಆದೇಶ ನೀಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಲಿದೆ.

ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಒತ್ತುವರಿಗೆ ಸಂಬಂಧಿಸಿದ ವರದಿಯಲ್ಲಿ ರವಿಶಂಕರ್ ಯಾವುದೇ ಆಸ್ತಿ ಅಥವಾ ಭೂಮಿಯನ್ನು ಅತಿಕ್ರಮಿಸಿರುವುದು ತೋರಲಾಗದಿರುವುದನ್ನು ಹೈಕೋರ್ಟ್ ಗಮನಿಸಿದಂತೆ ತಿಳಿಸಿದ್ದಾರೆ. ಕೆಲ ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳ ವಿರುದ್ಧ ಒತ್ತುವರಿ ಆರೋಪಗಳು ಇದ್ದರೂ, ಹೀಗೆ ಯಾವುದೇ ಪ್ರದೇಶವು ಅರ್ಜಿದಾರರ ಆಶ್ರಮದ ಕಾಂಪೌಂಡ್ ಒಳಗೆ ಬರುವುದಿಲ್ಲ ಎಂದು ತಿಳಿಸಲಾಗಿತ್ತು.

ಸರ್ಕಾರದ ಪರ ವಕೀಲರು ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಬೇಕೆಂದು ವಾದಿಸಿದ್ದರೂ, ನ್ಯಾಯಮೂರ್ತಿ ವಿಶೇಷ ಸರ್ಕಾರಿ ಅಭಿಯೋಜಕರು ನೇರವಾಗಿ ಭಾಗಿಯಾಗಿರುವುದಕ್ಕೆ ಪೂರಕ ದಾಖಲೆಗಳನ್ನು ನೀಡದೇ, ರವಿಶಂಕರ್ ಮೇಲೆ ಯಾವುದೇ ಆರೋಪ ದೃಢವಾಗಿಲ್ಲ ಎಂದು ಸೂಚಿಸಿ, ಅರ್ಜಿಯನ್ನು ಮಾನ್ಯವಲ್ಲವೆಂದು ತೀರ್ಮಾನಿಸಿದರು. ಈ ತೀರ್ಪಿನಿಂದ ರವಿಶಂಕರ್ ಮೇಲಿನ ಒತ್ತುವರಿ ಸಂಬಂಧ FIR ಪ್ರಕರಣಕ್ಕೆ ತಾತ್ಕಾಲಿಕ ಶಾಂತಿ ಸಿಗಲಿದೆ.

error: Content is protected !!