Home Blog Page 6

Toll price hike: ವಾಹನ ಚಾಲಕರಿಗೆ ಶಾಕ್: ಏಪ್ರಿಲ್ʼನಿಂದ ಟೋಲ್ ದರ ಏರಿಕೆ!

0

ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳ ಜಾರಿಯಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, ಸುಮಾರು 4%ರಿಂದ 5%ವರೆಗೆ (ಸುಮಾರು ₹75) ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಏರಿಕೆಯ ಪರಿಣಾಮ ಕಾಣಿಸಿಕೊಳ್ಳಲಿದೆ. 2023ರ ಏಪ್ರಿಲ್ 1ರಿಂದ ಟೋಲ್ ಸಂಗ್ರಹ ಆರಂಭವಾದ ಬಳಿಕ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಲಾದ 22% ಏರಿಕೆಯನ್ನು ಸಾರ್ವಜನಿಕ ವಿರೋಧದ ಹಿನ್ನೆಲೆ ಹಿಂಪಡೆಯಲಾಗಿತ್ತು. ಆದರೆ ವಾರ್ಷಿಕವಾಗಿ ಸರಾಸರಿ 5% ಏರಿಕೆಯನ್ನು ಮುಂದುವರಿಸಲಾಗುತ್ತಿದೆ.

ಇದಲ್ಲದೆ, ಫಾಸ್ಟ್‌ಟ್ಯಾಗ್ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಫಾಸ್ಟ್‌ಟ್ಯಾಗ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಅಥವಾ ತಾಂತ್ರಿಕ ಸಮಸ್ಯೆಯಿಂದ ಪಾವತಿ ವಿಫಲವಾದರೆ ಡಬಲ್ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.

ಪ್ರತಿ ವರ್ಷ ಏಪ್ರಿಲ್ 1ರಿಂದ ಟೋಲ್ ದರ ಪರಿಷ್ಕರಣೆ ಮಾಡುವ ಪದ್ಧತಿಯಂತೆ ಈ ಬಾರಿಯೂ ಜಾರಿಗೊಳ್ಳಲಿದ್ದು, ದೈನಂದಿನ ಪ್ರಯಾಣಿಕರು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಪ್ರಸ್ತುತ ₹3,000 ಇರುವ ಟೋಲ್ ಪಾಸ್ ದರವು ಏಪ್ರಿಲ್ 1ರಿಂದ ₹3,075ಕ್ಕೆ ಏರಿಕೆಯಾಗಲಿದೆ. ಟೋಲ್ ಪಾಸ್ ಹೊಂದಿರುವವರು 200 ಟ್ರಿಪ್‌ಗಳವರೆಗೆ ಪ್ರಯಾಣಿಸಬಹುದು. ಈ ನಿರ್ಧಾರದಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಖರ್ಚು ಹೆಚ್ಚಾಗಲಿದೆ.

ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಅವರ ಕೊಡುಗೆಯಿಂದ ಸಮರ್ಥ್ ಅವರು ಗೆಲ್ಲಲಿದ್ದಾರೆ: ಡಿ.ಕೆ. ಶಿವಕುಮಾರ್

ದಾವಣಗೆರೆ: ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಅವರು ಈ ಭಾಗಕ್ಕೆ ನೀಡಿರುವ ಕೊಡುಗೆಯಿಂದ ಈ ಭಾಗದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ನಾಮಪತ್ರ ಸಲ್ಲಿಕೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಗಳು, ನಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಯುಬ್ ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥ್ ಅವರು ಇಂದು ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ.

ಕಾಂಗ್ರೆಸ್ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಮ್ಮತದಿಂದ ಸಮರ್ಥ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ತಮ್ಮದೇ ಆದ ಆಸೆ, ಆಕಾಂಕ್ಷೆಯೊಂದಿಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ” ಎಂದು ತಿಳಿಸಿದರು.

“ಸಮರ್ಥ್ ಅವರು ಮತ್ತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಶಾಮನೂರು ಶಿವಶಂಕರಪ್ಪನವರೇ ಇಲ್ಲೇ ಇದ್ದು ವೃತ್ತಿ ಮಾಡುವಂತೆ ಹೇಳಿದ್ದರು. ಕ್ಷೇತ್ರದ ಜನತೆ, ಎಲ್ಲಾ ವರ್ಗದ ಮುಖಂಡರು, ಪಕ್ಷದ ವರಿಷ್ಠರು ಎಲ್ಲರೂ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಈ ಮಧ್ಯೆ ಮುಸಲ್ಮಾನ ಸಮುದಾಯದ ಶಾಸಕರುಗಳು ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ.

ನೀವು ನಮಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ನಾವು ಲೆಕ್ಕಾಚಾರ ಹಾಕಿದೆವು. ಕಾಂಗ್ರೆಸ್ ಪಕ್ಷ ಈ ಹಿಂದೆ ಟಿಕೆಟ್ ನೀಡಲಾಗದ ಕಾರಣಕ್ಕೆ ಜಬ್ಬಾರ್ ಅವರನ್ನು ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಸಮಾಜಕ್ಕೆ ನ್ಯಾಯ ಒದಗಿಸಿಕೊಂಡು ಬಂದಿದ್ದೇವೆ. ಇದನ್ನು ಮುಂದುವರಿಸುತ್ತೇವೆ. ಇದು ನಮ್ಮ ಪಕ್ಷದ ಸಿದ್ಧಾಂತ” ಎಂದು ಹೇಳಿದರು.

ಬಿಜೆಪಿಯಿಂದ ಕಾಂಗ್ರೆಸ್ ಸೇರುತ್ತಿರುವ ಕಾರ್ಯಕರ್ತರನ್ನು ಸ್ವಾಗತಿಸುತ್ತೇನೆ

“ಭಾನುವಾರ ರಾತ್ರಿ ಬಿಜೆಪಿಯ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆಯಾಗಲು ಇನ್ನು ಹಲವರು ಮುಂದಾಗಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಗೊಂದಲದಿಂದ ಕಾಂಗ್ರೆಸ್ ಸೇರುತ್ತಿರುವವರನ್ನು ನಾವು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಇದರ ಜವಾಬ್ದಾರಿಯನ್ನು ಸ್ಥಳೀಯ ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಅವರಿಗೆ ವಹಿಸಿದ್ದೇನೆ. ಇಲ್ಲಿ ಯಾರೂ ಆಂತಕಕ್ಕೆ ಒಳಗಾಗುವುದು ಬೇಡ. ಪಕ್ಷ ಸಿದ್ಧಾಂತದ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವಂತಹ ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ” ಎಂದರು.

“ನಾವು ದಾವಣಗೆರೆ ಜಿಲ್ಲೆ ಬೆಂಗಳೂರಿಗಿಂತ ಬಹಳ ಉತ್ತಮವಾಗಿ ಯೋಜಿತವಾಗಿ ರೂಪುಗೊಂಡಿರುವ ನಗರವಾಗಿದೆ. ಇದರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತದ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆ ಆ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಎಲ್ಲಾ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನೀಡಿರುವ ಕೊಡುಗೆಯನ್ನು ಜನ ಸ್ಮರಿಸುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಅವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಸ್ಥಳೀಯ ಮಾಧ್ಯಮಗಳು ನಮಗೆ ತಮ್ಮ ಮನವಿ ಸಲ್ಲಿಸಿದ್ದು, ನಾವು ಬೆಂಗಳೂರಿಗೆ ಹೋದ ಬಳಿಕ ಕೂತು ಚರ್ಚೆ ಮಾಡಿ ಈ ವಿಚಾರವಾಗಿ ಯಾವ ರೀತಿ ನೀತಿ ರೂಪಿಸಬೇಕು ಎಂದು ಚರ್ಚೆ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ

ಪಕ್ಷದಲ್ಲಿ ಗೊಂದಲ ಹಾಗೂ ಬಂಡಾಯವನ್ನು ಯಾವ ರೀತಿ ಬಗೆಹರಿಸುತ್ತೀರಿ ಎಂದು ಕೇಳಿದಾಗ, “ರಾಜಕೀಯದಲ್ಲಿ ಎಲ್ಲರಿಗೂ ತಮ್ಮ ಬೇಡಿಕೆ ಕೇಳುವ ಅಧಿಕಾರವಿದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ದುಡಿದಿರುತ್ತಾರೆ, ಅವರಿಗೆ ಕೇಳುವ ಹಕ್ಕಿರುತ್ತದೆ.

ಇರುವುದು ಒಂದು ಸೀಟು. ನಾವು ಮೊದಲಿನಿಂದಲೂ ಎಲ್ಲರಿಗೂ ಅಧಿಕಾರ ನೀಡುತ್ತಾ ಬಂದಿದ್ದು, ಎಲ್ಲಾ ವಿಚಾರವನ್ನು ಬಗೆಹರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಬ್ಬರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಶಾಮನೂರು ಶಿವಶಂಕರಪ್ಪ ಅವರ ಆತ್ಮೀಯರು. ಅವರು ಹಾಗೂ ಇತರರ ಜತೆ ನಾವು ಚರ್ಚೆ ಮಾಡುತ್ತಿದ್ದು, ಎಲ್ಲವನ್ನು ಸರಿ ಮಾಡುತ್ತೇವೆ” ಎಂದು ತಿಳಿಸಿದರು.

ಯಾವ ವಿಚಾರದ ಮೇಲೆ ಚುನಾವಣೆ ಮಾಡುತ್ತೀರಿ ಎಂದು ಕೇಳಿದಾಗ, “ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸದ ಮೇಲೆ, ಸಾಮಾಜಿಕ ಚಿಂತನೆ, ಎಲ್ಲಾ ಸಮಾಜಕ್ಕೂ ನೀಡುತ್ತಿರುವ ನ್ಯಾಯದ ಮೇಲೆ ಚುನಾವಣೆ ಮಾಡುತ್ತೇವೆ. ಇದೇ ನಮ್ಮ ಪಕ್ಷದ ಮೂಲ ಸಿದ್ಧಾಂತ” ಎಂದು ತಿಳಿಸಿದರು.

ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ: ಪ್ರಧಾನಿ ಮೋದಿ

0

ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಲ್ಲಿ ದೇಶವು ಇಂಧನ ಆಮದು ಮೂಲಗಳನ್ನು ವೈವಿಧ್ಯಗೊಳಿಸಿರುವುದಾಗಿ ಹೇಳಿದರು. ಹಿಂದೆ ಭಾರತವು 27 ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದರೆ, ಈಗ ಅದು 41 ದೇಶಗಳಿಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ದೇಶದಲ್ಲಿ 53 ಲಕ್ಷ ಮೆಟ್ರಿಕ್ ಟನ್ ಇಂಧನ ನಿಕ್ಷೇಪಗಳಿದ್ದು, ತೈಲ, ಅನಿಲ ಹಾಗೂ ರಸಗೊಬ್ಬರ ಸಾಗಿಸುವ ಟ್ಯಾಂಕರ್‌ಗಳು ಸುರಕ್ಷಿತವಾಗಿ ಭಾರತ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿಗಳು ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸವಾಲುಗಳನ್ನು ಎದುರಿಸಲು ದೇಶ ಒಗ್ಗಟ್ಟಿನಿಂದ ಸಿದ್ಧರಾಗಬೇಕು ಎಂದು ಪ್ರಧಾನಿ ಕರೆ ನೀಡಿದರು. ಕೋವಿಡ್ ಸಮಯದಲ್ಲಿ ದೇಶವು ಒಗ್ಗಟ್ಟಿನಿಂದ ಸವಾಲುಗಳನ್ನು ಎದುರಿಸಿದ್ದನ್ನು ಅವರು ಉದಾಹರಿಸಿದರು.

ಯುದ್ಧ ಆರಂಭವಾದ ಬಳಿಕ 3.75 ಲಕ್ಷಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಇರಾನ್‌ನಿಂದ 700ಕ್ಕೂ ಹೆಚ್ಚು ಜನರು ಸೇರಿದಂತೆ ಸುಮಾರು 1,000 ಭಾರತೀಯರು ವಾಪಸ್ಸಾಗಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗಲ್ಫ್ ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರೀತಿಸಿ ಮದುವೆಯಾದ ಪತ್ನಿಯನ್ನು ನಡುರಸ್ತೆಯಲ್ಲಿ ಕಲ್ಲಿನಿಂದ ಕೊಂದ ಪತಿ

0

ಬೆಳಗಾವಿ: ಪತ್ನಿಯ ಮೇಲಿನ ಶೀಲ ಶಂಕೆ ಮತ್ತು ಕುಟುಂಬದ ಕಲಹದಿಂದ ಕೋಪಗೊಂಡ ಪತಿ, ಆಕೆಯನ್ನು ಮಲಗಿರುವಾಗಲೇ ಎಳೆದುಕೊಂಡು ಹೋಗಿ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಜೋಡಳ್ಳಿ ತನ್ನ ಪತ್ನಿ ಶಿವಕ್ಕ ಜೋಡಳ್ಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಶಿವಕ್ಕ ಜೋಡಳ್ಳಿ ಮೊದಲ ಗಂಡನ ಮರಣದ ಬಳಿಕ ಬಸವರಾಜ ಜೋಡಳ್ಳಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಉಂಟಾದ ಸಮಸ್ಯೆಗಳ ಕಾರಣ ಅವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಘಟನೆಯ ದಿನ ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಪತ್ನಿಯನ್ನು ಮೊದಲು ಹಲ್ಲೆ ಮಾಡಿ, ಬಳಿಕ ಚಾಕುವಿನಿಂದ ಇರಿದು, ಕೊನೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೊಬೈಲ್ ಪಾಸ್‌ ವರ್ಡ್ ಕೊಡೋ ಮುನ್ನ ಎಚ್ಚರ: ಸ್ನೇಹಿತನಿಂದಲೇ 4.5 ಲಕ್ಷ ದೋಖಾ!

0

ಬೆಂಗಳೂರು: ಸ್ನೇಹಿತನ ಮೇಲೆ ನಂಬಿಕೆ ಇಟ್ಟು ಮೊಬೈಲ್ ಪಾಸ್ವರ್ಡ್ ನೀಡಿದ ಪರಿಣಾಮ, ಆತನಿಂದಲೇ ಲಕ್ಷಾಂತರ ರೂಪಾಯಿ ಮೋಸವಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

ಚಿಂತನ್ ಆರೋರಾ ಮೊಬೈಲ್ ಬಳಸಿಕೊಂಡು ನವೀನ್ ವೆಮುಲ ಸುಮಾರು 4.45 ಲಕ್ಷ ರೂ. ಮೌಲ್ಯದ ಆನ್‌ಲೈನ್ ಶಾಪಿಂಗ್ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇಬ್ಬರು ಸ್ನೇಹಿತರು ಕೋರಮಂಗಲದ ಕೆಎಚ್‌ಬಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆತ್ಮೀಯ ಸ್ನೇಹಿತರಾಗಿದ್ದರಿಂದ ಪರಸ್ಪರ ಮೊಬೈಲ್ ಪಾಸ್ವರ್ಡ್‌ಗಳನ್ನು ಹಂಚಿಕೊಂಡಿದ್ದರು. ಮಾರ್ಚ್ 6ರಂದು ಇಬ್ಬರೂ ತಡರಾತ್ರಿ ತನಕ ಪಾರ್ಟಿ ಮಾಡಿದ್ದರು. ಈ ವೇಳೆ ಮಲಗುವ ಮುನ್ನ ಚಿಂತನ್ ತಮ್ಮ ಮೊಬೈಲ್ ಪಾಸ್ವರ್ಡ್ ಅನ್ನು ನವೀನ್‌ಗೆ ತಿಳಿಸಿದ್ದರು.

ಮರುದಿನ ಬೆಳಿಗ್ಗೆ ಎದ್ದು ನೋಡಿದಾಗ ನವೀನ್ ಕಾಣೆಯಾಗಿದ್ದನು. ಮೊಬೈಲ್ ಪರಿಶೀಲಿಸಿದಾಗ 4,45,870 ರೂ. ಮೌಲ್ಯದ ಐಷಾರಾಮಿ ವಸ್ತುಗಳನ್ನು ಆರ್ಡರ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಉಳಿದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ನೇಹಿತನ ದ್ರೋಹದಿಂದ ಬೆಚ್ಚಿಬಿದ್ದ ಚಿಂತನ್ ಆರೋರಾ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಬಾಗಲಕೋಟೆ ಉಪಚುನಾವಣೆ: ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ

0

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮಾರ್ಚ್ 23 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ, ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ ಮತ್ತು ಅತಿಥಿ ಮುಖಂಡರು ಉಮೇಶ್ ಮೇಟಿ ಜೊತೆಗೆ ನಾಮಪತ್ರ ಸಲ್ಲಿಕೆಗೆ ಹಾಜರಾದರು.

ಉಮೇಶ್ ಮೇಟಿ ಮೊದಲಿಗೆ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಂತರ ರಾಘವೇಂದ್ರ ರಾಯರ ಮಠದಲ್ಲಿ ದರ್ಶನ ಪಡೆದು ಬಳಿಕ ದಿವಂಗತ ತಂದೆ ಹೆಚ್.ವೈ ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು.

ಸಚಿವ ಆರ್.ಬಿ ತಿಮ್ಮಾಪುರ್, “ಬಾಗಲಕೋಟೆ ನಾಡಿನ ಪುರಾತನ ಧಾರ್ಮಿಕ ಪರಂಪರೆ ಹಾಗೂ ಹಿಂದುತ್ವ ನಮ್ಮ ಚುನಾವಣಾ ತತ್ವಗಳಲ್ಲಿದೆ. ಉಮೇಶ್ ಮೇಟಿ ಹಿಂದೂ ಹೀಗಾಗಿ ಮತದಾರರು ಅವರನ್ನು ಬೆಂಬಲಿಸುತ್ತಾರೆ. ಸರ್ಕಾರ ಎಲ್ಲಾ ವರ್ಗದವರಿಗೆ ಸಮಾನ ಸೌಲಭ್ಯ ನೀಡುತ್ತಿದೆ. ಸರಕಾರದ ಹಿತದृष्टಿಯಿಂದ ಬಾಗಲಕೋಟೆ ಶಾಂತಿಯ ತೋಟವಾಗಿದೆ” ಎಂದಿದ್ದಾರೆ.

ಹೆಚ್‌ವೈ ಮೇಟಿ ನಿಧನದ ಬಳಿಕ ಖಾಲಿಯಾದ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಚಿನ್ನ ಖರೀದಿದಾರರಿಗೆ ಗುಡ್‌ ನ್ಯೂಸ್: 10 ಗ್ರಾಂ ಬಂಗಾರದ ಬೆಲೆ 5,950 ಇಳಿಕೆ! ಬೆಳ್ಳಿ ಬೆಲೆ ಎಷ್ಟಿದೆ ತಿಳಿಯೋಣ?

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈ ಎರಡೂ ಅಮೂಲ್ಯ ಲೋಹಗಳ ಬೆಲೆ ಕುಸಿದಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಸುಮಾರು ₹1,37,790ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದ್ದು, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆ ₹1,26,215ಕ್ಕೆ ಇಳಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,37,820 ಆಗಿದ್ದರೆ, ಮುಂಬೈನಲ್ಲಿ ₹1,38,095 ದಾಖಲಾಗಿದೆ. ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈಯಲ್ಲಿ ಚಿನ್ನದ ಬೆಲೆ ಇತರ ನಗರಗಳಿಗಿಂತ ತುಸು ಹೆಚ್ಚಾಗಿ ₹1,39,038ರ ಮಟ್ಟದಲ್ಲಿದೆ.

ಇನ್ನೊಂದೆಡೆ, ಬೆಳ್ಳಿಯ ದರದಲ್ಲೂ ಗಮನಾರ್ಹ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ₹2,14,196ಕ್ಕೆ ತಲುಪಿದ್ದರೆ, ದೆಹಲಿ ಮತ್ತು ಮುಂಬೈಗಳಲ್ಲಿ ಕ್ರಮವಾಗಿ ₹2,13,911 ಹಾಗೂ ₹2,14,432 ದಾಖಲಾಗಿದೆ. ಚೆನ್ನೈನಲ್ಲಿ ಬೆಳ್ಳಿಯ ಬೆಲೆ ₹2,16,299ರ ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯದ ಏರಿಳಿತ ಹಾಗೂ ಕೇಂದ್ರ ಬ್ಯಾಂಕುಗಳ ಬಡ್ಡಿದರ ನೀತಿಗಳ ಪರಿಣಾಮದಿಂದ ಈ ಬೆಲೆ ಇಳಿಕೆ ಸಂಭವಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜೊತೆಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹೂಡಿಕೆದಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆ ಮೇಲೆ ನೇರ ಪ್ರಭಾವ ಉಂಟುಮಾಡಿದೆ.

ಕೂಲಿಗೆ ಹೋದ ವಿದ್ಯಾರ್ಥಿನಿಯನ್ನು ಕರೆತಂದು ಪರೀಕ್ಷೆ ಬರೆಸಿದ ಅಧಿಕಾರಿಗಳು!

0

ಗದಗ: ಕಡು ಬಡತನದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಹುಡುಕಿ ಕರೆತಂದು ಪರೀಕ್ಷೆ ಬರೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಪಲ್ಲವಿ ಹಳ್ಳಿಕೇರಿ, ಬರದೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದ ವೇಳೆ, ಮನೆಯ ಆರ್ಥಿಕ ಸಂಕಷ್ಟದಿಂದಾಗಿ ಆಕೆ ಪರೀಕ್ಷೆಗೆ ಹಾಜರಾಗದೆ ದ್ರಾಕ್ಷಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದಳು.

ವಿದ್ಯಾರ್ಥಿನಿ ಪರೀಕ್ಷೆಗೆ ಗೈರಾಗಿರುವ ಮಾಹಿತಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ತಕ್ಷಣ ಕ್ರಮ ಕೈಗೊಂಡರು. ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ದ್ರಾಕ್ಷಿ ತೋಟಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ಮನವೊಲಿಸಿ ಪರೀಕ್ಷೆಯ ಮಹತ್ವ ತಿಳಿಸಿದರು.

ನಂತರ ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ಇರುವ ಪರೀಕ್ಷಾ ಕೇಂದ್ರಕ್ಕೆ ಕರೆತಂದು, ಪಲ್ಲವಿಯಿಂದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯನ್ನು ಬರೆಯುವಂತೆ ಮಾಡಿದರು.

ಗ್ರಾಮೀಣ ಭಾಗಗಳಲ್ಲಿ ಬಡತನದ ಕಾರಣದಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುವ ಘಟನೆಗಳು ಸಾಮಾನ್ಯವಾಗಿವೆ. ಇಂತಹ ಸಂದರ್ಭಗಳಲ್ಲಿ ಶಿಕ್ಷಣ ಇಲಾಖೆ ತಕ್ಷಣ ಸ್ಪಂದಿಸಿ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯವಾಗಿದೆ.

ಅಧಿಕಾರಿಗಳ ಈ ಮಾನವೀಯ ಹಾಗೂ ಹೊಣೆಗಾರಿಕೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಈ ಘಟನೆ ಕೇವಲ ಒಂದು ಸುದ್ದಿಯಲ್ಲ, ಬಡತನದ ನಡುವೆಯೂ ಶಿಕ್ಷಣವನ್ನು ಉಳಿಸಿಕೊಳ್ಳಬಹುದೆಂಬ ನಂಬಿಕೆಗೆ ಜೀವ ತುಂಬಿದ ಉದಾಹರಣೆಯಾಗಿದೆ. ಶಿಕ್ಷಣದ ಮಹತ್ವವನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪಿಸಿದ ಘಟನೆಯಾಗಿದೆ.

ವಿದ್ಯಾರ್ಥಿನಿಯ ಭವಿಷ್ಯ ನಮ್ಮ ಮುಂದಿತ್ತು. ಬಡತನದಿಂದ ಅವಳು ಶಿಕ್ಷಣವನ್ನು ಕೈಬಿಡಬಾರದು ಎಂಬ ಉದ್ದೇಶದಿಂದ ತಕ್ಷಣ ಕ್ರಮ ಕೈಗೊಂಡೆವು. ಶಿಕ್ಷಣವೇ ಜೀವನ ಬದಲಾಯಿಸುತ್ತದೆ ಎಂದು ಗಂಗಾಧರ ಅಣ್ಣಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಬಡತನಕ್ಕೂ ಮೀರಿದ ಶಿಕ್ಷಣದ ಸಂಕಲ್ಪ ಬಡತನದ ಒತ್ತಡದಿಂದ ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಕರೆತಂದು, ಶಿಕ್ಷಣ ಇಲಾಖೆ ಅಧಿಕಾರಿಗಳು ಒಂದು ವಿದ್ಯಾರ್ಥಿನಿಯ ಭವಿಷ್ಯವನ್ನು ಉಳಿಸಿದ ಘಟನೆ ಇದಾಗಿದೆ.

ಮೂಡಬಿದಿರೆ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಂತ್ರಸ್ತೆಯನ್ನು ಭೇಟಿ ಮಾಡಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಆರೋಪ ಹೊರಬಿದ್ದ ತಕ್ಷಣವೇ ಅವರನ್ನು ಅಮಾನತು ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಮುಂದಿನ ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದರು.

ತನಿಖೆ ಮುಂದುವರಿದಂತೆ ಇನ್ನಷ್ಟು ಸಂತ್ರಸ್ತರು ಇರುವ ಸಾಧ್ಯತೆಯೂ ಹೊರಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಬಾಗಲಕೋಟೆ ಉಪಚುನಾವಣೆ: ‘ಕೈ’ ಅಭ್ಯರ್ಥಿಯಾಗಿ ಹೆಚ್.ವೈ ಮೇಟಿ ಪುತ್ರ ಉಮೇಶ್ ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು ನಾಮಪತ್ರ ಸಲ್ಲಿಸಿದರು.

ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸೇರಿದಂತೆ ಹಲವು ಮುಖಂಡರ ಸಾಥ್‌ನಲ್ಲಿ, ಬಾಗಲಕೋಟೆ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯಿತು.

ನಾಮಪತ್ರ ಸಲ್ಲಿಕೆಗೂ ಮುನ್ನ ಉಮೇಶ್ ಮೇಟಿ ಅವರು ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಾಘವೇಂದ್ರ ರಾಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಆನಂತರ ದಿವಂಗತ ತಂದೆ ಹೆಚ್.ವೈ. ಮೇಟಿ ಅವರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು.

ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

error: Content is protected !!