Home Blog Page 5

ಚರಂಡಿ ನೀರಿಗೆ 160 ಎಕರೆ ಜಮೀನು ಬಲಿ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಚರಂಡಿ ನೀರು ಅಡರಕಟ್ಟಿ ಹಾಗೂ ಮಂಜಲಾಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಸುಮಾರು 160 ಎಕರೆ ಫಲವತ್ತಾದ ಕೃಷಿ ಭೂಮಿ ಹಲವು ವರ್ಷಗಳಿಂದ ಪಾಳು ಬೀಳುತ್ತಿದ್ದು, ಸಮಸ್ಯೆ ಪರಿಹರಿಸದಿದ್ದರೆ ಒಂದು ವಾರದ ಬಳಿಕ ಪಾಳಾ–ಬದಾಮಿ ರಾಜ್ಯ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪುರಸಭೆಗೆ ಮನವಿ ಸಲ್ಲಿಸಿದ ರೈತರು, ಕಳೆದ ಹಲವು ವರ್ಷಗಳಿಂದ ಪಟ್ಟಣದ ಚರಂಡಿ ನೀರು ಲಂಡಿಹಳ್ಳದ ಮೂಲಕ ಹರಿದು ಹೊಲಗಳಿಗೆ ಸೇರುತ್ತಿದ್ದು, ಜಮೀನಿನಲ್ಲಿ ಆಳೆತ್ತರದ ಜವುಳು ಮತ್ತು ಕಸ ಬೆಳೆದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ರೈತ ಮುಖಂಡ ಮಂಜುನಾಥ ಮಾಗಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಹಾಗೂ ಮುತ್ತಣ್ಣ ಗಡೆಪ್ಪನವರ ಮಾತನಾಡಿ, ಕಳೆದ ತಿಂಗಳು ಮನವಿ ಸಲ್ಲಿಸಿದಾಗ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿತ್ತು. ಆದರೆ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದು, ಒಂದು ವಾರದೊಳಗೆ ರೈತರು ಹಾಗೂ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಸಮಗ್ರ ರೈತರು ಸೇರಿ ಲಕ್ಷ್ಮೇಶ್ವರ ಮೂಲಕ ಹಾದು ಹೋಗುವ ಪಾಳಾ–ಬದಾಮಿ ರಾಜ್ಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದಣ್ಣ ಹವಳದ, ಯಲ್ಲಪ್ಪ ಗಡೆಪ್ಪನವರ, ಸಿದ್ದು ಚಿಕ್ಕಣ್ಣವರ, ಲೋಹಿತ ಹಳೆಮನಿ, ಮಾಂತೇಶ ಲಿಂಗಶೆಟ್ಟಿ, ಮೌನೇಶ ಗಡೆಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಹಲವು ವರ್ಷಗಳಿಂದ ಫಲವತ್ತಾದ ಭೂಮಿ ಚರಂಡಿ ನೀರಿನಿಂದ ಹಾಳಾಗುತ್ತಿದೆ. ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ರೈತರು ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ.”

– ಮಂಜುನಾಥ ಮಾಗಡಿ, ರೈತ ಮುಖಂಡ

ಅಧಿಕಾರಿಗಳ ದರ್ಪಕ್ಕೆ ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತದ ಅಧಿಕಾರಶಾಹಿ ಧೋರಣೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಸವಳಿ ಹೇಳಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟುಮಚಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ವೀಕ್ಷಣೆಗೆ ಬಂದ ಅಧಿಕಾರಿಗಳು ರೈತರೊಂದಿಗೆ ನಿರ್ಲಕ್ಷ್ಯವಾಗಿ ವರ್ತಿಸಿದ್ದು, ಕಾಟಾಚಾರಕ್ಕೆ ಬೆಳೆ ವೀಕ್ಷಣೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಜುಲೈ 21ರಂದು ಬೆಳೆ ವಿಮೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದ ವೇಳೆ ರೈತರೊಂದಿಗೆ ಅವಮಾನಕರವಾಗಿ ವರ್ತಿಸಿ ಪೊಲೀಸರನ್ನು ಕರೆಸುವ ಮೂಲಕ ಅಧಿಕಾರದ ದರ್ಪ ಪ್ರದರ್ಶಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

2025-26ನೇ ಸಾಲಿನ ಬೆಳೆ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು, ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರೈತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನರಗುಂದ ಬಂಡಾಯದ ಮಾದರಿಯಲ್ಲೇ ಗದಗ ಜಿಲ್ಲೆಯಲ್ಲೂ ರೈತರ ಬೃಹತ್ ಹೋರಾಟಕ್ಕೆ ನಾಂದಿ ಹಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಗಮೇಶ ಪವಾಡಶೆಟ್ಟಿ, ವಿಜಯಕುಮಾರ ಸುಂಕದ, ಮುತ್ತನಗೌಡ ಚೌಡರಡ್ಡಿ, ವೀರಪ್ಪ ಕಾಳಗಿ, ಮುತ್ತಪ್ಪ ಜಗಲ್, ಯಲ್ಲಪ್ಪ ಗುರಿಕಾರ, ಗುರುಲಿಂಗಪ್ಪ ತಿಪ್ಪಶೆಟ್ಟಿ ಹಾಗೂ ಶರಣಪ್ಪ ಫಕ್ಕೀರಪ್ಪ ಉಪಸ್ಥಿತರಿದ್ದರು.


ಠಾಣೆಯಲ್ಲೇ ಯುವಕ ಸಾವು!? ಖಾಕಿಗೆ ಕಂಟಕ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಶದಲ್ಲಿದ್ದ ಯುವಕ ಮೃತಪಟ್ಟಿರುವ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ಪಟ್ಟಣದ ಮೆಹಬೂಬನಗರ ನಿವಾಸಿ ಖಲೀಲುಲ್ಲಾ (38) ಎಂಬಾತ ಶನಿವಾರ ರಾತ್ರಿ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತ್ನಿ 112 (ERSS)ಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ಪೊಲೀಸರು ದೈಹಿಕ ಹಲ್ಲೆ ನಡೆಸಿದ ಪರಿಣಾಮ ಖಲೀಲುಲ್ಲಾ ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ಆರೋಪಿಸಿದ್ದಾರೆ.

ಠಾಣೆಯಲ್ಲಿ ಅಸ್ವಸ್ಥಗೊಂಡ ಖಲೀಲುಲ್ಲಾ ಅವರನ್ನು ಪೊಲೀಸರು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾನ್ಹವಿ ಅವರು ಠಾಣೆಯ ಮುಖ್ಯ ಪೇದೆ ರಾಘವೇಂದ್ರ ಹಾಗೂ ಪೇದೆ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಡಿಎಸ್ಪಿಗೆ ವಹಿಸಲಾಗಿದ್ದು, ಠಾಣೆಯ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ತಜ್ಞರ ತಂಡದಿಂದ ಪರಿಶೀಲಿಸಲಾಗುತ್ತಿದೆ.

ಘಟನೆ ತಿಳಿಯುತ್ತಿದ್ದಂತೆ ಶಾಸಕ ಕೆ. ನೇಮಿರಾಜ ನಾಯ್ಕ ಆಸ್ಪತ್ರೆಗೆ ಹಾಗೂ ಠಾಣೆಗೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹರಪನಹಳ್ಳಿ ಅಂಜುಮನ್ ಸಮಿತಿಯ ನೂರ್ ಮಹಮ್ಮದ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೂಡ ಕುಟುಂಬಕ್ಕೆ ಧೈರ್ಯ ತುಂಬಿದರು.

ಇನ್ನೊಂದೆಡೆ, ಬಳ್ಳಾರಿ ವಲಯ ಐಜಿಪಿ ಡಾ. ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆಎಸ್‌ಆರ್‌ಪಿ, ಡಿಎಆರ್ ಸೇರಿದಂತೆ ವಿವಿಧ ಠಾಣೆಗಳ ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾನ್ಹವಿ ಅವರು ಭಾನುವಾರ ಹಾಗೂ ಸೋಮವಾರವೂ ಠಾಣೆಯಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದರು.

“ಘಟನೆಗೆ ಸಂಬಂಧಿಸಿದಂತೆ ಮುಖ್ಯ ಪೇದೆ ರಾಘವೇಂದ್ರ ಹಾಗೂ ಪೇದೆ ವೆಂಕಟೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ಅಮಾನತುಗೊಳಿಸಲಾಗಿದೆ. ಡಿಎಸ್ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.”

– ಎಸ್. ಜಾನ್ಹವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯನಗರ

ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ; ವಿಶ್ವನಾಥ ಖಾನಾಪೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಕ್ಷಾಮದ ಆತಂಕ ಎದುರಾಗಿದ್ದು, ಗದಗ ನಗರದ ಭೀಷ್ಮ ಕೆರೆ ಸೇರಿದಂತೆ ಜಿಲ್ಲೆಯ ಎಲ್ಲ ಕೆರೆಗಳನ್ನು ಮಲಪ್ರಭಾ ಹಾಗೂ ತುಂಗಭದ್ರಾ ನದಿಯ ನೀರಿನಿಂದ ಭರ್ತಿ ಮಾಡಲು ಜಿಲ್ಲಾಡಳಿತ, ನಗರಸಭೆ ಹಾಗೂ ನೀರಾವರಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹಿಸಿದ್ದಾರೆ.

ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, ಜಿಲ್ಲೆಯಲ್ಲಿರುವ 32 ಕೆರೆಗಳಿಗೆ ನೀರು ತುಂಬಿಸಿದರೆ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಬಹುತೇಕ ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.

ಗದಗ ನಗರದ ಮಧ್ಯಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಅದನ್ನು ಕೂಡಲೇ ತುಂಬಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ನೀರಿನ ಸಂಗ್ರಹ ವೃದ್ಧಿಯಾಗಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಆರು ತಿಂಗಳವರೆಗೆ ನೀರಿನ ಸಮಸ್ಯೆ ತಪ್ಪಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯದ ಎಲ್ಲಾ ಕೆರೆಗಳನ್ನು ತುಂಬಿಸುವ ಕುರಿತು ಈಗಾಗಲೇ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.

“ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದರೆ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ.”

– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ವಿದ್ಯಾರ್ಥಿನಿ ವೀಣಾ ಹಾನಾಪೂರ ಪ್ರಕರಣಕ್ಕೆ ಹೊಸ ತಿರುವು?

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಡಾ. ವೀಣಾ ಹಾನಾಪೂರ ಅವರ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಹೊಸ ಅನುಮಾನಗಳು ಮೂಡಿದ್ದು, ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಕಳೆದ ಒಂದು ತಿಂಗಳಿಂದ ಕಾರ್ಯನಿರ್ವಹಿಸದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಮೃತ ವಿದ್ಯಾರ್ಥಿನಿಯ ಪಾಲಕರೊಂದಿಗೆ ಭೇಟಿ ಮಾಡಿದ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲ ರವಿಕಾಂತ ಅಂಗಡಿ, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಸುರಕ್ಷತೆಯ ಹೊಣೆ ಹೊತ್ತಿರುವ ವಿಶ್ವವಿದ್ಯಾಲಯದಲ್ಲಿ ಒಂದು ತಿಂಗಳಿಂದ ಸಿಸಿಟಿವಿ ವ್ಯವಸ್ಥೆ ಸ್ಥಗಿತಗೊಂಡಿರುವುದು ಗಂಭೀರ ಆಡಳಿತಾತ್ಮಕ ವೈಫಲ್ಯವಾಗಿದೆ. ಇಂತಹ ಪ್ರಕರಣದಲ್ಲಿ ಸತ್ಯವನ್ನು ಮುಚ್ಚಿಹಾಕುವ ಯಾವುದೇ ಪ್ರಯತ್ನವನ್ನು ಉತ್ತರ ಕರ್ನಾಟಕ ಮಹಾಸಭಾ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ವಿದ್ಯಾರ್ಥಿನಿಯ ಸಾವಿನಂತಹ ಗಂಭೀರ ಘಟನೆ ನಡೆದಿದ್ದರೂ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಸ್ಪಂದನೆ ತೃಪ್ತಿಕರವಾಗಿಲ್ಲ. ಪ್ರಕರಣದಲ್ಲಿ ಯಾರನ್ನಾದರೂ ರಕ್ಷಿಸುವ ಅಥವಾ ಸಾಕ್ಷ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಿ, ಡಿಜಿಟಲ್ ಸಾಕ್ಷ್ಯಗಳು, ಮೊಬೈಲ್ ಕರೆ ವಿವರಗಳು, ಸಿಸಿಟಿವಿ ತಾಂತ್ರಿಕ ದಾಖಲೆಗಳು, ವಸತಿ ನಿಲಯದ ಹಾಜರಾತಿ ದಾಖಲೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮಿ ಚೌಧರಿ, ಸಿಸಿಟಿವಿ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮೇಲ್ನೋಟಕ್ಕೆ ಗಂಭೀರ ಆಡಳಿತಾತ್ಮಕ ಲೋಪವಾಗಿದ್ದು, ಈ ಕುರಿತು ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಗೃಹ ಸಚಿವರನ್ನು ಭೇಟಿ ಮಾಡಿ ಯಾವುದೇ ಪ್ರಭಾವಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಕುಲಪತಿ, ರಿಜಿಸ್ಟ್ರಾರ್, ವಸತಿ ನಿಲಯದ ವಾರ್ಡನ್ ಸೇರಿದಂತೆ ಕರ್ತವ್ಯಲೋಪ ಎಸಗಿರುವುದು ಸಾಬೀತಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಡಾ. ವೀಣಾ ಹಾನಾಪೂರ ಅವರ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ರವಿಕಾಂತ ಅಂಗಡಿ ಸ್ಪಷ್ಟಪಡಿಸಿದರು.

“ಒಂದು ತಿಂಗಳಿಂದ ಸಿಸಿಟಿವಿ ಕಾರ್ಯನಿರ್ವಹಿಸದಿರುವುದು ಸಾಮಾನ್ಯ ಲೋಪವಲ್ಲ. ವೀಣಾ ಹಾನಾಪೂರ ಪ್ರಕರಣದ ಸತ್ಯ ಹೊರಬರಲು ನಿಷ್ಪಕ್ಷಪಾತ ತನಿಖೆಯೇ ಏಕೈಕ ಮಾರ್ಗ.”

– ರವಿಕಾಂತ ಅಂಗಡಿ, ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ

ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ನಾಗರಾಜ ಮಡಿವಾಳ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ಲೋಪವಿಲ್ಲದೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಸಾರ್ವಜನಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಬಾಕಿ ಅರ್ಜಿಗಳ ವಿಲೇವಾರಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ವೇಳೆ ಲಕ್ಷ್ಮವ್ವ ಬಾಲೇಹೊಸೂರ ಎಂಬ ಮಹಿಳೆ ತನ್ನ ಮಕ್ಕಳೊಂದಿಗೆ ಆಗಮಿಸಿ, ಕಳೆದ ಮೂರು ವರ್ಷಗಳಿಂದ ಪಡಿತರ ಚೀಟಿಗಾಗಿ ಅಲೆದಾಡುತ್ತಿದ್ದರೂ ಇನ್ನೂ ಸೌಲಭ್ಯ ದೊರೆತಿಲ್ಲ ಎಂದು ಅಳಲು ತೋಡಿಕೊಂಡರು. ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಹೆಸ್ಕಾಂ ಎಇಇ ಆಂಜನಪ್ಪ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೃತ್ಯುಂಜಯ ಗುಡ್ಡದನ್ವೇರಿ, ಕೆಎಸ್‌ಆರ್‌ಟಿಸಿ ಅಧಿಕಾರಿ ಪವಿತ್ರಾ ಪಿ., ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ತಾಪಂ ಇಒ ಮಂಜುಳಾ ಹಕಾರಿ ಉಪಸ್ಥಿತರಿದ್ದರು.

ಜನ್ಮದಿನವನ್ನು ಸಮಾಜಸೇವೆಗೆ ಮೀಸಲಿಟ್ಟ ಕಪ್ಪತ್ತಗಿರಿ ಫೌಂಡೇಶನ್

0

ವಿಜಯಸಾಕ್ಷಿ ಸುದ್ದಿ, ಗದಗ: ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಸಮಾಜಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸಂದೇಶದೊಂದಿಗೆ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಇಟಗಿಮಠ ಅವರು ತಮ್ಮ ಹಾಗೂ ಪುತ್ರನ ಜನ್ಮದಿನದ ಅಂಗವಾಗಿ ಎರಡು ದಿನಗಳ ಕಾಲ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದರು.

ಜುಲೈ 31ರಂದು ಬೆಳದಡಿ ತಾಂಡಾದ ಬ್ರಹ್ಮಾನಂದಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 160 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ, ಸ್ವಚ್ಛತೆ, ಪೌಷ್ಟಿಕ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಲಸಮುದ್ರದ ಆನಂದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವೃದ್ಧರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು.

ಆಗಸ್ಟ್ 1ರಂದು ಬೆಟಿಗೇರಿಯ ಮಂಜು ಶಿಕ್ಷಣ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ನಡೆಸಲಾಯಿತು.

ಆರೋಗ್ಯ ತಪಾಸಣೆಯನ್ನು ಡಾ. ದೀಪಾ ಮೂರಶಿಳ್ಳಿನ ಹಾಗೂ ಡಾ. ಕಲ್ಲೇಶ್ ಮೂರಶಿಳ್ಳಿನ ನಡೆಸಿ, ಮಕ್ಕಳಿಗೆ ಆರೋಗ್ಯದ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎ.ಎಸ್. ಮಕಾನದಾರ, ಆನಂದ ವೃದ್ಧಾಶ್ರಮದ ಸಂಸ್ಥಾಪಕ ಗಂಗಾಧರ, ತೋಟಯ್ಯ ಗುಡ್ಡಿಮಠ, ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಗ್ರಾಮಸ್ಥರು ಹಾಗೂ ಕಪ್ಪತ್ತಗಿರಿ ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು.

ಸಮಾಜದ ಆರೋಗ್ಯ, ಶಿಕ್ಷಣ, ವಿಶೇಷ ಚೇತನ ಮಕ್ಕಳು ಹಾಗೂ ವೃದ್ಧರ ಸೇವೆಗೆ ಜನ್ಮದಿನವನ್ನು ಸಮರ್ಪಿಸಿದ ಕಪ್ಪತ್ತಗಿರಿ ಫೌಂಡೇಶನ್‌ನ ಈ ಸಮಾಜಮುಖಿ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜಾನುವಾರುಗಳ ಆರೋಗ್ಯದ ಬಗ್ಗೆ ರೈತರು ಜಾಗೃತರಾಗಲಿ: ಹಿರೇಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಾನುವಾರುಗಳ ಆರೋಗ್ಯ ಕಾಪಾಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಾಗಿ ರೈತರ ಆದಾಯವೂ ವೃದ್ಧಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹೇಳಿದರು.

ನರಗುಂದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಧಾರವಾಡ ಹಾಲು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲು-ಬಾಯಿ ರೋಗ, ಕಪ್ಪು ಕಾಲು, ಗಂಟಲುಬಾಚೆ, ಬ್ರೂಸೆಲ್ಲೋಸಿಸ್ ಸೇರಿದಂತೆ ವಿವಿಧ ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಲು ನಿಯಮಿತ ಲಸಿಕೆ, ಪಶುವೈದ್ಯರ ಸಲಹೆ, ಸ್ವಚ್ಛ ಗೋಶಾಲೆ ಹಾಗೂ ಸಮತೋಲನ ಆಹಾರ ಅತ್ಯಗತ್ಯ ಎಂದು ತಿಳಿಸಿದರು.

ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಿಗೆ ನ್ಯಾಯಯುತ ಬೆಲೆ, ಪಶುವೈದ್ಯಕೀಯ ಸೇವೆ, ಕೃತಕ ಗರ್ಭಧಾರಣೆ, ಮೇವು ಅಭಿವೃದ್ಧಿ, ಪಶು ಆಹಾರ ಹಾಗೂ ತರಬೇತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ನರಗುಂದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಪರೀಕ್ಷಕರಿಗೆ ಜಾನುವಾರುಗಳ ಆರೋಗ್ಯ, ಹಸಿರು ಮೇವು, ಶುದ್ಧ ಹಾಲು ಉತ್ಪಾದನೆ ಹಾಗೂ ಹೈನುಗಾರಿಕೆ ಕುರಿತು ತಜ್ಞರಿಂದ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ, ಧಾರವಾಡ ಹಾಲು ಒಕ್ಕೂಟದ ಅಧಿಕಾರಿಗಳು, ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಿಸಿ ಕಚೇರಿ ಚಲೋಗೆ ತಿಮ್ಮಾಪೂರ ರೈತರ ಬೆಂಬಲ

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗಸ್ಟ್ 5ರಂದು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರುವ ‘ಡಿಸಿ ಕಚೇರಿ ಚಲೋ’ ಬೃಹತ್ ಪ್ರತಿಭಟನೆಗೆ ತಿಮ್ಮಾಪೂರ ಗ್ರಾಮದ ರೈತರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣರೆಡ್ಡಿ ಬಣ) ಗ್ರಾಮ ಘಟಕ ಕೋಟುಮಚಿಗಿ ವತಿಯಿಂದ ರೈತ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ, 2025-26ನೇ ಸಾಲಿನ ಎಲ್ಲ ಬೆಳೆಗಳ ವಿಮೆಯನ್ನು ತಕ್ಷಣ ಮಂಜೂರು ಮಾಡಬೇಕು, ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಕಪ್ಪತ್ತಗುಡ್ಡ ಅರಣ್ಯವನ್ನು ಸಂರಕ್ಷಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ. ಸರ್ಕಾರ ಕೂಡಲೇ ಇವುಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳಿಗಾಗಿ ಎಂಟು ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಯಶಸ್ಸು ಸಾಧಿಸಿದ್ದಾರೆ. ಅದೇ ರೀತಿಯಲ್ಲಿ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ನ್ಯಾಯ ದೊರೆಯಲಿದೆ. ರಾಷ್ಟ್ರೀಕೃತ ಬ್ಯಾಂಕ್ ಸಾಲ ಹಾಗೂ ಬೆಳೆ ವಿಮೆ ಕುರಿತು ಎರಡು-ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಆಗಸ್ಟ್ 5ರ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಶರಣಪ್ಪ ಮ್ಯಾಗೇರಿ ಮಾತನಾಡಿ, ಆಗಸ್ಟ್ 5ರಂದು ನಡೆಯುವ ಪ್ರತಿಭಟನೆಗೆ ತಿಮ್ಮಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗದಗಕ್ಕೆ ತೆರಳಿ ಭಾಗವಹಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಕೋಟುಮಚಿಗಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಿಸಿತು. ಬಳಿಕ “ರೈತರ ಶಕ್ತಿ ಬಹಳ ಇದೆ” ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಸಭೆಯಲ್ಲಿ ಹುಚ್ಚಿರಪ್ಪ ಬಡೆಗೇರ, ಪಾಲಾಕ್ಷಯ್ಯ ಬಳಗೇರಮಠ, ಮಲ್ಲಪ್ಪ ರಮಾಣೆ, ಸಂತೋಷ ಮುತ್ತಾಳ, ಮುನಿಯಪ್ಪ ಶಿಂಗಟಾಲಕೇರಿ, ಮುತ್ತಪ್ಪ ಜಗ್ಗಲ, ಹುಚ್ಚಿರಪ್ಪ ಜೋಗಿನ, ಶಿವರಾಜ ಒಂಟೇಲಿ, ಮಾದೇಗೌಡ ಸಂಕನಗೌಡ್ರ, ಪರಪ್ಪ ಕಡಗದ, ಬೀರಪ್ಪ ಕಂಬಳಿ, ರೇಣಕಪ್ಪ ಕಿನ್ನಾಳ, ಬಾಬು ದಿವಟಿ, ಜಗದೀಶ್ ಮಲ್ಲನವರ ಸೇರಿದಂತೆ ನೂರಾರು ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಶಿಕ್ಷಣದಿಂದಲೇ ಸಮಾಜದ ಭವಿಷ್ಯ ಬದಲಿಸಿ: ಶಾಸಕ ಕೆ. ನೇಮಿರಾಜ ನಾಯ್ಕ್

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮೂಲಮಂತ್ರವಾಗಿದ್ದು, ಹಡಪದ ಸಮಾಜದ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರನ್ನು ಉನ್ನತ ಶಿಕ್ಷಣದೊಂದಿಗೆ ಉತ್ತಮ ಉದ್ಯೋಗಸ್ಥರನ್ನಾಗಿ ರೂಪಿಸಬೇಕು ಎಂದು ಶಾಸಕ ಕೆ. ನೇಮಿರಾಜ ನಾಯ್ಕ್ ಕರೆ ನೀಡಿದರು.

ಪಟ್ಟಣದ ಹರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಅವರ 892ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳುವಳಿ ಹಾಗೂ ಸಾಮಾಜಿಕ ಕ್ರಾಂತಿಯ ಪ್ರಮುಖ ಹರಿಕಾರರಲ್ಲಿ ಒಬ್ಬರಾಗಿದ್ದು, ಬಸವಣ್ಣನವರ ಆಪ್ತ ಸಹಚರ ಹಾಗೂ ಅನುಭವ ಮಂಟಪದ ಪ್ರಮುಖ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಜೀವನ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ಹಡಪದ ಸಮಾಜವು ಇನ್ನೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರ ಇಂತಹ ಸಮುದಾಯಗಳಿಗೆ ಹೆಚ್ಚಿನ ಅನುದಾನ ಹಾಗೂ ಸೌಲಭ್ಯ ಕಲ್ಪಿಸಬೇಕಿದೆ. ಸಮಾಜದ ಮನವಿಗೆ ಸ್ಪಂದಿಸಿ ಸಮುದಾಯ ಭವನ ನಿರ್ಮಾಣಕ್ಕೆ ಈ ವರ್ಷ ₹25 ಲಕ್ಷ ಹಾಗೂ ಮುಂದಿನ ವರ್ಷ ಮತ್ತೊಂದು ₹25 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ ಅವರು, ಸರ್ಕಾರದಿಂದ ಇನ್ನಷ್ಟು ನೆರವು ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಆಶೀರ್ವಚನ ನೀಡಿದ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು, ಮುಂಡ್ರಿಗಿ, ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಸುಮಾರು 240ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ಮಹಾನ್ ಶಿವಶರಣರು ಎಂದು ಸ್ಮರಿಸಿದರು. ಸಮಾಜದ ಮಕ್ಕಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬಾರದು. ಪೋಷಕರು ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಸರ್ಕಾರವೂ ಹಡಪದ ಸಮಾಜವನ್ನು ಗುರುತಿಸಿ ಮೀಸಲಾತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಹೆಚ್. ಮಂಜುನಾಥ, ಜಿಲ್ಲಾಧ್ಯಕ್ಷ ಡಾ. ಮಲ್ಲಪ್ಪ ಬ್ಯಾಲಾಳು, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ್ರು, ರೆಡ್ಡಿ ಸಮಾಜದ ಅಧ್ಯಕ್ಷ ಬಸವರಾಜ ರೆಡ್ಡಿ, ಕುಮಾರಿ ಕಾವೇರಿ, ಶಿವ ಸಿಂಪಿಗರ ಸಮಾಜದ ಅಧ್ಯಕ್ಷ ಉಮಾಪತಿ ಹನಸಿ, ನರೇಗಲ್ಲು ಬಸವರಾಜ ಸೇರಿದಂತೆ ಸಮಾಜದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬಸವಲೋಕ ತಂಡ ಪ್ರಾರ್ಥನೆ ಸಲ್ಲಿಸಿತು. ಹಾಲೇಶ್ ಹುಚ್ಚನಗೌಡ ಸ್ವಾಗತಿಸಿ ನಿರೂಪಿಸಿದರು.

“ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮುದಾಯದ ಭವಿಷ್ಯ ಉಜ್ವಲವಾಗುತ್ತದೆ, ಪ್ರತಿಯೊಬ್ಬ ಪೋಷಕರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.”

– ಕೆ. ನೇಮಿರಾಜ ನಾಯ್ಕ್, ಶಾಸಕ