Home Blog Page 10

ಸೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನಂದೋತ್ಸವ ಕಾರ್ಯಕ್ರಮವನ್ನು ಸೆ. 6ರಂದು ನಗರದ ವೀರನಾರಾಯಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ್ ವಜ್ರೇಶ್ವರಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಬಸವೇಶ್ವರ ವೃತ್ತದಿಂದ ವೀರನಾರಾಯಣ ದೇವಸ್ಥಾನದವರೆಗೆ ಶ್ರೀಕೃಷ್ಣನ ಮೆರವಣಿಗೆ ನಡೆಯಲಿದೆ ಎಂದರು.

ಮಧ್ಯಾಹ್ನ 3.30ರಿಂದ ರಾತ್ರಿ 8.30ರವರೆಗೆ ವೀರನಾರಾಯಣ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೀರ್ತನೆ, ಶ್ರೀಕೃಷ್ಣನಿಗೆ ಅಭಿಷೇಕ, ಪ್ರವಚನ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಇಸ್ಕಾನ್‌ನ ಸತ್ಯಮೂರ್ತಿ ಪ್ರಭು ಅವರು ಪ್ರವಚನ ನೀಡಲಿದ್ದಾರೆ. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ, ದತ್ತ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕಿರಣ ಭೂಮಾ, ಎಸ್.ಎಚ್. ಶಿವನಗೌಡ್ರ, ಪ್ರಕಾಶ ಆರ್. ಬಾಕಳೆ ಹಾಗೂ ಕ್ಲರ್ಕ್ ಇನ್‌ನ ಯೋಗೇಶ ಎಸ್. ಸಾವಕಾರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ. ಧರ್ಮದ ಪುನರುತ್ಥಾನ ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಪವಿತ್ರ ದಿನವಾಗಿದೆ. ಶ್ರೀಕೃಷ್ಣನ ಸಂದೇಶ ಹಾಗೂ ಆದರ್ಶಗಳನ್ನು ಸ್ಮರಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಜನ್ಮಾಷ್ಟಮಿ ಆಚರಿಸಬೇಕು ಎಂದು ಸಂಘಟಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತ್ಯುಂಜಯ ನಿಲೂಗಲ್ಲ, ವಿಠ್ಠಲ ಬಾಕಳೆ, ಗೋವಿಂದರಾಜ ಶಿರಹಟ್ಟಿ, ಪ್ರಕಾಶ ಕಳಸಣ್ಣವರ, ಪ್ರವೀಣ ಖಟವಟೆ, ಬಸವರಾಜ ಶೆಟ್ಟರ್ ಹಾಗೂ ಗವಿಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.

Diabetes: ಪುದೀನಾ-ದಾಲ್ಚಿನ್ನಿ ಕಷಾಯ ಕುಡಿದರೆ ಶುಗರ್ ಕಂಟ್ರೋಲ್ ಆಗುತ್ತಾ? ಸತ್ಯ ಏನು?

0

ಮಧುಮೇಹ ಒಮ್ಮೆ ಕಾಣಿಸಿಕೊಂಡ ಬಳಿಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ.

ಇದಕ್ಕಾಗಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ರಕ್ತದಲ್ಲಿನ ಗ್ಲೂಕೋಸ್ ಮೇಲ್ವಿಚಾರಣೆ ಹಾಗೂ ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಪಾಲಿಸುವುದು ಅಗತ್ಯ.

ಈ ನಡುವೆ ಮಧುಮೇಹಕ್ಕೆ ಮನೆಮದ್ದುಗಳೇ ಸಾಕು ಎಂಬ ಹಲವು ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಪುದೀನಾ ಎಲೆ ಮತ್ತು ದಾಲ್ಚಿನ್ನಿಯಿಂದ ತಯಾರಿಸುವ ಕಷಾಯ ಕೂಡ ಒಂದಾಗಿದೆ. ಆದರೆ ಈ ಕಷಾಯವನ್ನು ಕುಡಿಯುವುದರಿಂದ ಮಧುಮೇಹ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಅಥವಾ ಔಷಧಿಗಳನ್ನು ನಿಲ್ಲಿಸಬಹುದು ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಪುದೀನಾ-ದಾಲ್ಚಿನ್ನಿ ಕಷಾಯ ತಯಾರಿಸುವುದು ಹೇಗೆ?

ಒಂದು ಕಪ್ ನೀರಿಗೆ ಚೆನ್ನಾಗಿ ತೊಳೆದ ಕೆಲವು ಪುದೀನಾ ಎಲೆಗಳು ಹಾಗೂ ಸಣ್ಣ ತುಂಡು ದಾಲ್ಚಿನ್ನಿ ಹಾಕಿ ಸುಮಾರು 5ರಿಂದ 10 ನಿಮಿಷಗಳ ಕಾಲ ಕುದಿಸಬಹುದು. ಬಳಿಕ ಕಷಾಯವನ್ನು ಸೋಸಿ ಬೆಚ್ಚಗಿರುವಾಗ ಸೇವಿಸಬಹುದು.

ಮಧುಮೇಹ ಇರುವವರು ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸದಿರುವುದು ಉತ್ತಮ.

ದಾಲ್ಚಿನ್ನಿ ಶುಗರ್ ಕಡಿಮೆ ಮಾಡುತ್ತಾ?

ದಾಲ್ಚಿನ್ನಿಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಕೆಲವು ಸಂಶೋಧನೆಗಳು ಸೂಚಿಸಿವೆ. ಆದರೆ ದಾಲ್ಚಿನ್ನಿಯನ್ನು ಸೇವಿಸುವುದರಿಂದ ಮಧುಮೇಹಕ್ಕೆ ಚಿಕಿತ್ಸೆ ದೊರೆಯುತ್ತದೆ ಎಂದು ಹೇಳಲು ಸಾಕಷ್ಟು ದೃಢವಾದ ಸಾಕ್ಷ್ಯಗಳಿಲ್ಲ.

ಅದೇ ರೀತಿ ಪುದೀನಾ ವಿವಿಧ ಸಸ್ಯ ಸಂಯುಕ್ತಗಳನ್ನು ಹೊಂದಿದ್ದು, ಪುದೀನಾ ನೀರು ಅಥವಾ ಕಷಾಯ ಸೇವನೆಯಿಂದ ಜೀರ್ಣಕ್ರಿಯೆಗೆ ಆರಾಮ ಸಿಗಬಹುದು. ಆದರೆ ಇದು ಮಧುಮೇಹದ ಔಷಧಿಗೆ ಪರ್ಯಾಯವಲ್ಲ.

ಔಷಧಿ ಸೇವಿಸುವವರು ಎಚ್ಚರಿಕೆ ವಹಿಸಿ:

ಮಧುಮೇಹಕ್ಕೆ ಮಾತ್ರೆಗಳು ಅಥವಾ ಇನ್ಸುಲಿನ್ ಬಳಸುತ್ತಿರುವವರು ಇಂತಹ ಕಷಾಯವನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಔಷಧಿ ಅಥವಾ ಇನ್ಸುಲಿನ್ ಜೊತೆಗೆ ಯಾವುದೇ ಮನೆಮದ್ದನ್ನು ಬಳಸುವಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾಗುವ ಅಪಾಯವಿದೆಯೇ ಎಂಬುದನ್ನು ಗಮನಿಸಬೇಕು.

ಅಲ್ಲದೆ ದಾಲ್ಚಿನ್ನಿಯನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಯಾವುದೇ ಮನೆಮದ್ದನ್ನು ವೈದ್ಯರು ಸೂಚಿಸಿರುವ ಮಧುಮೇಹ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.

ಮುಖ್ಯವಾಗಿ: ಪುದೀನಾ-ದಾಲ್ಚಿನ್ನಿ ಕಷಾಯವನ್ನು ಸಕ್ಕರೆ ಸೇರಿಸದೆ ಸಾಮಾನ್ಯ ಪಾನೀಯವಾಗಿ ಸೇವಿಸುವುದನ್ನು ಮಧುಮೇಹದ ಚಿಕಿತ್ಸೆಯೆಂದು ಪರಿಗಣಿಸಬಾರದು. ಮಧುಮೇಹ ನಿಯಂತ್ರಣಕ್ಕೆ ವೈದ್ಯರ ಸಲಹೆ, ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ರಕ್ತದಲ್ಲಿನ ಸಕ್ಕರೆಯ ಮೇಲ್ವಿಚಾರಣೆ ಹಾಗೂ ಸೂಚಿಸಲಾದ ಔಷಧಿಗಳ ಪಾಲನೆಯೇ ಪ್ರಮುಖ.

Bus Fare Hike: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ; ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ?

0

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ.

ಶೀಘ್ರದಲ್ಲೇ ರಾಜ್ಯದ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ಪರಿಷ್ಕರಿಸುವುದಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟ ಸುಳಿವು ನೀಡಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ತೈಲೋತ್ಪನ್ನಗಳ ಬೆಲೆ ಹೆಚ್ಚಿಸಿದೆ. ತೈಲ ಬೆಲೆ ಏರಿಕೆಯಾದರೂ ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.

ಬಸ್ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ಅವರ ನೇತೃತ್ವದ ಸಮಿತಿ ಸಮಗ್ರ ಅಧ್ಯಯನ ನಡೆಸುತ್ತಿದೆ. ಸಮಿತಿಯು ಶೀಘ್ರದಲ್ಲೇ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ಸಮಿತಿಯ ವರದಿ ಬಂದ ಬಳಿಕ ಅದರ ಶಿಫಾರಸುಗಳನ್ನು ಪರಿಶೀಲಿಸಿ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಜ್ಯದಲ್ಲಿನ ಪ್ರಸ್ತುತ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರ ಜೇಬಿಗೆ ಹೆಚ್ಚಿನ ಹೊರೆಯಾಗದಂತೆ ಸ್ವಲ್ಪ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಹೀಗಾಗಿ, ವರದಿ ಸಲ್ಲಿಕೆಯ ಬಳಿಕ ರಾಜ್ಯದ ಸರ್ಕಾರಿ ಬಸ್ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಹೊರೆ ಬೀಳುವ ಸಾಧ್ಯತೆ ಇದೆ. ಆದರೆ ದರ ಎಷ್ಟು ಹೆಚ್ಚಳವಾಗಲಿದೆ ಎಂಬುದು ಸಮಿತಿ ವರದಿ ಹಾಗೂ ಸರ್ಕಾರದ ಅಂತಿಮ ನಿರ್ಧಾರದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

Hassan News: ಹಾಸನ NSUI ಜಿಲ್ಲಾಧ್ಯಕ್ಷ ವರುಣ್ ಆತ್ಮಹತ್ಯೆ; ಕೌಟುಂಬಿಕ ಕಲಹ ಶಂಕೆ?

0

ಹಾಸನ: ಹಾಸನ ಜಿಲ್ಲಾ NSUI ಅಧ್ಯಕ್ಷ ವರುಣ್.ಎಂ.ಟಿ. (22) ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೇಲೂರು ಪಟ್ಟಣದ ಹೊಳೆ ಬೀದಿಯಲ್ಲಿ ನಡೆದಿದೆ.

ಮನೆಯ ಕೊಠಡಿಯಲ್ಲಿ ವರುಣ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮಾಳೇಗೆರೆ ಗ್ರಾಮದ ತಾರಾನಾಥ್ ಹಾಗೂ ಲೋಲಾಕ್ಷಿ ದಂಪತಿಯ ಎರಡನೇ ಪುತ್ರರಾಗಿದ್ದ ವರುಣ್.ಎಂ.ಟಿ. ಅವರನ್ನು ಕಳೆದ ಜುಲೈ ತಿಂಗಳಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಹಾಸನ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಕುಟುಂಬದಲ್ಲಿ ಕಲಹ ಉಂಟಾದ ಹಿನ್ನೆಲೆಯಲ್ಲಿ ವರುಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು, ಸುಮಾರು ಮೂರು ವರ್ಷಗಳ ಹಿಂದೆ ವರುಣ್ ಅವರ ಸಹೋದರ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದೀಗ ಮತ್ತೊಬ್ಬ ಪುತ್ರನನ್ನೂ ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ವರುಣ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ. ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

Nelamangala News: ಕಲ್ಲು ಗಣಿಗಾರಿಕೆಗೆ ಅಕ್ರಮ ಸ್ಫೋಟಕ ಮಾರಾಟ? 600 ಜಿಲೆಟಿನ್ ಕಡ್ಡಿ ವಶ, ಆರೋಪಿ ಅರೆಸ್ಟ್

0

ನೆಲಮಂಗಲ: ಕಾರಿನಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ದಾಬಸ್‌ಪೇಟೆ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜಾಜೂರು ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಡಿಎಸ್‌ಪಿ ಉಮಾರಾಣಿ ಅವರ ಮಾರ್ಗದರ್ಶನದಲ್ಲಿ ದಾಬಸ್‌ಪೇಟೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಕಾರಿನಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಶಿವಶಂಕರ್ ಅಲಿಯಾಸ್ ಆಟೋ ಶಂಕರ್ (38) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯು ದಾಬಸ್‌ಪೇಟೆ ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆ ಚಟುವಟಿಕೆಗಳಿಗೆ ಪರವಾನಗಿ ಪಡೆಯದೆ, ಕಡಿಮೆ ಬೆಲೆಗೆ ಸ್ಫೋಟಕಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ.

ಕಾರಿನಲ್ಲಿ ಸಾಗಿಸುತ್ತಿದ್ದ 600 ಜಿಲೆಟಿನ್ ಕಡ್ಡಿಗಳು ಹಾಗೂ 100 ಡಿಟೋನೇಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಫೋಟಕ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ.

ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆ, 1908 ಹಾಗೂ ಬಿಎನ್‌ಎಸ್ ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಧಾರಾಕಾರ ಮಳೆ; ಇಂದಿರಾ ಗಾಂಧಿ ವಿಮಾನ ನಿಲ್ದಾಣ ಜಲಾವೃತ, ವಿಮಾನ ಸಂಚಾರ ಅಸ್ತವ್ಯಸ್ತ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರಿ ಮಳೆಯಿಂದಾಗಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲ ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ವಿಮಾನ ನಿಲ್ದಾಣದ ಒಳಗೆ ಮಳೆ ನೀರು ನುಗ್ಗಿದ್ದು, ನೀರನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸಪಟ್ಟರು. ಕೆಲವೆಡೆ ಮೊಣಕಾಲು ಎತ್ತರದವರೆಗೆ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದೊಳಗೆ ಸಂಚರಿಸಲು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಧಾರಾಕಾರ ಮಳೆಯ ಪರಿಣಾಮ ದೆಹಲಿಯ ವಿಮಾನ ಸಂಚಾರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಅಹಮದಾಬಾದ್, ಮುಂಬೈ, ಪೋರ್ಟ್ ಬ್ಲೇರ್ ಸೇರಿದಂತೆ ವಿವಿಧ ನಗರಗಳಿಂದ ದೆಹಲಿಗೆ ಆಗಮಿಸಬೇಕಿದ್ದ ಹಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದೆ.

ಭಾರಿ ಮಳೆಯಿಂದಾಗಿ ದೆಹಲಿಯ ಹಲವು ಪ್ರದೇಶಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರಸ್ತೆಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ನಡುವೆ ಹವಾಮಾನ ಇಲಾಖೆ ದೆಹಲಿಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Bengaluru Traffic: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್! ಬೆಂಗಳೂರಿನಲ್ಲಿ ಕಾರ್ಯಾಚರಣೆ ಶುರು!

0

ಬೆಂಗಳೂರು: ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವವರಿಗೆ ಸಂಚಾರ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಪಾರ್ಕಿಂಗ್ ವಿರುದ್ಧದ ಟೋಯಿಂಗ್ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿರುವ ಪೊಲೀಸರು, ನಿಯಮ ಉಲ್ಲಂಘಿಸಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ನಗರದ ಹಲವೆಡೆ ಟೋಯಿಂಗ್ ಕಾರ್ಯಾಚರಣೆ ತೀವ್ರಗೊಂಡಿದ್ದು, ವಿಶೇಷವಾಗಿ ಶಾಂತಿನಗರ ಸುತ್ತಮುತ್ತ ಅಕ್ರಮವಾಗಿ ನಿಲ್ಲಿಸಿರುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಹಾಗೂ ನೋ ಪಾರ್ಕಿಂಗ್ ವಲಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ.

ಶಾಂತಿನಗರದ ಸೇಂಟ್ ಜೋಸೆಫ್ ಕಾಲೇಜು ಮತ್ತು ದಿವ್ಯಶ್ರೀ ಚೇಂಬರ್ಸ್ ಸಮೀಪ ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ವಾಹನಗಳನ್ನು ನಿಲ್ಲಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಟೋಯಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅಕ್ರಮವಾಗಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳಿಗೆ 1,150 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1,500 ರೂ. ದಂಡ ವಿಧಿಸಲಾಗುತ್ತಿದೆ. ಟೋಯಿಂಗ್ ಶುಲ್ಕ ಸೇರಿದಂತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡವನ್ನು ವಾಹನ ಮಾಲೀಕರು ಪಾವತಿಸಬೇಕಾಗುತ್ತದೆ.

ಅಶೋಕ್ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಪಾರ್ಕಿಂಗ್ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಅಕ್ರಮ ಪಾರ್ಕಿಂಗ್‌ನಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸವಾರರು ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸದಂತೆ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

2026-27ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ವಿವಿಧ ಜಿಲ್ಲೆಗಳ 31 ಗುರುಗಳಿಗೆ ಸನ್ಮಾನ

0

ಬೆಂಗಳೂರು: 2026-27ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 5ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಒಟ್ಟು 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 11 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಶೇಷ ಶಿಕ್ಷಕರ ವಿಭಾಗದಲ್ಲಿಯೂ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು

  1. ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿ. ಉಮಾ
  2. ಚಿಕ್ಕೋಡಿ–ಮೂಡಲಗಿ ಶೈಕ್ಷಣಿಕ ವಲಯದ ಕೆ.ಹೆಚ್.ಪಿ.ಎಸ್. ಹಲ್ಲೂರು ಕ್ರಾಸ್ ಶಾಲೆಯ ಬಸಪ್ಪ ಪರಪ್ಪ ಪಾಟೀಲ
  3. ಕುಂದಾಪುರ ತಾಲೂಕಿನ ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಶೋಕ
  4. ದೇವದುರ್ಗ ತಾಲೂಕಿನ ಸರ್ಕಾರಿ ಗುಂಡೇರದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಯ ಸುರೇಶ್ ಕೆ.
  5. ವಿಜಯಪುರ ತಾಲೂಕಿನ ಕೆಂಗಲಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಣಮಂತ ಕಲ್ಲಪ್ಪ ಕಾತರಕಿ
  6. ಹೊನ್ನಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಷಾ ವಿ. ನಾಯಕ್
  7. ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಸ್ತಾನ್ ವಲಿ
  8. ಬೆಳಗಾವಿ ಗ್ರಾಮಾಂತರ ತಾಲೂಕಿನ ಜಾಫರವಾಡಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಬಾಳಪ್ಪ ಹಾಲೆನ್ನವರ
  9. ಕೊಳ್ಳೇಗಾಲ ಸತ್ತೇಗಾಲ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರೋಜಮ್ಮ
  10. ಆಳಂದ ತಾಲೂಕಿನ ಗುಂಜಬಬಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ
  11. ಬೆಂಗಳೂರು ದಕ್ಷಿಣ ವಲಯದ ಕೆಂಬತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತ್ನಮ್ಮ ಎನ್.ಎಂ.
  12. ಜಮಖಂಡಿ–ತೇರದಾಳದ ಶ್ರೀ ಜಿನಸೇನಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯ ನೇಮಣ್ಣ ಬಮ್ಮಣ್ಣ ಜಮಖಂಡಿ
  13. ಯಲ್ಲಾಪುರ ಗಣಪತಿಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಮಚಂದ್ರ ಈ. ನಾಯ್ಕ
  14. ಕೊರಟಗೆರೆ ತಾಲೂಕಿನ ಮುದಿಗೌಡನಹನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಾಲಿನಿ ಎಂ.
  15. ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಮಾರನಾಯ್ಕ ಬಿ.ಡಿ.
  16. ಬೆಂಗಳೂರು ಉತ್ತರ ವಲಯದ ಗೃಹಲಕ್ಷ್ಮೀ ಬಡಾವಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೃಷ್ಣಮೂರ್ತಿ ಕೆ.ಎಸ್.
  17. ಹೊನ್ನಾಳಿಯ ಸದಾಶಿವಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ ಬಡಿಗೇರ
  18. ತುರುವೇಕೆರೆಯ ಹೆಗ್ಡೆರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೇಮಕುಮಾರ್ ವಿ.ಎಸ್.
  19. ಸಿರಗುಪ್ಪದ ಕೊಂಚಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದುರಗಪ್ಪ ಎಚ್.
  20. ಗಂಗಾವತಿಯ ಹನವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈಲಾರಪ್ಪ ಬೂದಿಹಾಳ

ಪ್ರೌಢಶಾಲಾ ಶಿಕ್ಷಕರು

  1. ಹಳಿಯಾಳ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ಬಿರಾದಾರ ಸಿದ್ದಪ್ಪ ವೀರಭದ್ರಪ್ಪ
  2. ಜೀವನ್ ಭೀಮಾನಗರ, ಬೆಂಗಳೂರು ದಕ್ಷಿಣ ವಲಯ-4ರ ಕರ್ನಾಟಕ ಪಬ್ಲಿಕ್ ಶಾಲೆಯ ಶೈನಾಕುಮಾರಿ ಎಂ.
  3. ಶಿವಮೊಗ್ಗದ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕುಬೇರನಾಯ್ಕ ಬಿ.
  4. ದೇವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ನೀಲಕಂಠ ಗಾವಂಕರ್
  5. ಬಾಗೇಪಲ್ಲಿ ಗೂಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ. ವೆಂಕಟೇಶ
  6. ಕುಮಟದ ಅಘನಾಶಿನಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಆರ್. ನಾಯ್ಕ
  7. ಬಂಟ್ವಾಳದ ಮೋದನಕಾಪು ಕಾರ್ಮೆಲ್ ಹೈಸ್ಕೂಲ್‌ನ ರೋಶನ್ ಅಲೆಕ್ಸಾಂಡರ್
  8. ಮೈಸೂರು ದಕ್ಷಿಣ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದ ದೈಹಿಕ ಶಿಕ್ಷಕ ಜಯಶೀಲ
  9. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮಥಾಯಿ ಟಿ.
  10. ದಾವಣಗೆರೆ ತಾಲೂಕಿನ ನಿಟ್ಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಯಪ್ಪ ಕೆ.ಟಿ.

ವಿಶೇಷ ಶಿಕ್ಷಕ

  1. ವಿಜಯಪುರ ಗ್ರಾಮಾಂತರ ತಾಲೂಕಿನ ಟಕ್ಕಲಕಿ ಸರ್ಕಾರಿ ಪ್ರೌಢಶಾಲೆಯ ವಿಶೇಷ ಶಿಕ್ಷಕ ಆನಂದ ಮಾದೇವ ಝಂಡೆ.

ಗ್ರಾಮ ಪಂಚಾಯಿತಿ ಕೆರೆ ಒತ್ತುವರಿ ಮಾಡಿದರೆ ಕ್ರಿಮಿನಲ್ ಕೇಸ್: ಕೆರೆ ಒತ್ತುವರಿದಾರರಿಗೆ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ!

0

ಬೆಂಗಳೂರು: ಗ್ರಾಮ ಪಂಚಾಯತಿಗೆ ಸೇರಿದ ಮತ್ತು ನಿರ್ವಹಿಸುತ್ತಿರುವ ಯಾವುದೇ ಕೆರೆಯನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುವುದು ಮತ್ತು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 4) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಡು ಭೂಮಿ ಇರುವ ರಾಜ್ಯವಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು. ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 32,504 ಕೆರೆಗಳಿದ್ದು, ಈ ಪೈಕಿ 11,498 ಕೆರೆಗಳು ಒತ್ತುವರಿಯಾಗಿದ್ದವು. ಇವುಗಳಲ್ಲಿ 6,670 ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನೂ 4,828 ಕೆರೆಗಳ 11,671 ಎಕರೆ ಒತ್ತುವರಿ ತೆರವುಗೊಳಿಸಬೇಕಿದೆ ಎಂದು ಸಚಿವರು ತಿಳಿಸಿದರು.

ಕೂಡಲೇ ಕೆರೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಯಾರೇ ಹೊಸದಾಗಿ ಕೆರೆ ಒತ್ತುವರಿ ಮಾಡಿದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

ಜಲಶಕ್ತಿ ಸಚಿವಾಲಯ ದೆಹಲಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಜಲ ಕುರಿತ ಇಲಾಖಾ ಶೃಂಗಸಭೆಯಲ್ಲಿ ಭಾಗವಹಿಸಿ, ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ರಾಜ್ಯ ಸರ್ಕಾರ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದ್ದಾಗಿ ಸಚಿವರು ತಿಳಿಸಿದರು.

ರಾಜ್ಯದ ಬಹುತೇಕ ಕಡೆ ಭೂಮಿಯೊಳಗೆ ಹೆಬ್ಬಂಡೆಗಳು ಮತ್ತು ಲ್ಯಾಟರೈಟ್ ಇರುವ ಕಾರಣ ಮಳೆ ನೀರು ಇಂಗದೆ ಅಂತರ್ಜಲ ಕುಸಿಯುತ್ತಿದೆಯೆಂದೂ, ಅತಿಯಾದ ಅಂತರ್ಜಲ ಬಳಕೆಯಿಂದಲೂ ಭೂಮಿಯೊಳಗಿನ ಜಲಮಟ್ಟ ಕುಸಿದಿದೆಯೆಂದೂ ಖಂಡ್ರೆ ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮೇಲ್ಮೈ ಜಲ ಮೂಲಗಳೇ ಜೀವನಾಧಾರವಾಗಲಿದ್ದು, ಕೆರೆ, ಕಟ್ಟೆ, ಸರೋವರ, ನದಿಗಳನ್ನು ಸಂರಕ್ಷಿಸದಿದ್ದರೆ ಜಲಕ್ಷಾಮ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮೈಸೂರು ಯುವ ದಸರಾದಲ್ಲಿ ಪ್ರಭುದೇವ ವಿಶೇಷ ಅತಿಥಿ: ಜಿಲ್ಲಾಡಳಿತದಿಂದ ಗೌರವಪೂರ್ವಕ ಆಹ್ವಾನ

0

ಮೈಸೂರು: ಮೈಸೂರು ದಸರಾ-2026ರ ಸಾಂಸ್ಕೃತಿಕ ಕಾರ್ಯಕ್ರಮ ‘ಯುವ ದಸರಾ’ಗೆ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಲಾಗಿದೆ. ಈ ಸಂಬಂಧ ಮೈಸೂರು ಜಿಲ್ಲಾಡಳಿತದಿಂದ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.

ಜಿಲ್ಲಾಡಳಿತದ ಪ್ರತಿನಿಧಿಗಳು ಪ್ರಭುದೇವ ಅವರಿಗೆ ಪೇಟ ತೊಡಿಸಿ, ಶಾಲು ಹಾಗೂ ಹೂವಿನ ಹಾರ ಹಾಕಿ ಗೌರವಿಸಿದರು. ಬಳಿಕ ಯುವ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಯಿತು.