Home Blog Page 9

ಸೆ. ೭, ೮ರಂದು ವರವೀರಭದ್ರೇಶ್ವರ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕುರುಡಗಿ ಗ್ರಾಮದ ಆರಾಧ್ಯ ದೈವ ಶ್ರೀ ವರವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಸೆಪ್ಟೆಂಬರ್ ೭ ಮತ್ತು ೮ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ನಿತ್ಯ ಶ್ರೀ ವರವೀರಭದ್ರೇಶ್ವರ ದೇವರಿಗೆ ವೇದಮೂರ್ತಿ ಪಂಚಾಕ್ಷರಯ್ಯ ವೀರಾತಯ್ಯ ಹಿರೇಮಠ ಅವರಿಂದ ರುದ್ರಾಭಿಷೇಕ ನೆರವೇರಲಿದೆ.

ಸೆಪ್ಟೆಂಬರ್ ೭ರಂದು ಬೆಳಿಗ್ಗೆ ೭.೪೫ಕ್ಕೆ ಕಳಸಾರೋಹಣ ನಡೆಯಲಿದೆ. ಇದೇ ಸಂದರ್ಭದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ಪಾದಪೂಜೆ ನೆರವೇರಲಿದೆ.

ಸಂಜೆ ೫ ಗಂಟೆಗೆ ಮಮತಾ, ವಕೀಲ ಸಿದ್ಧಲಿಂಗಪ್ಪ ಕರಬಸಪ್ಪ ಸವಡಿ ಹಾಗೂ ಧಾರವಾಡದ ಕು. ಸೃಷ್ಟಿ, ಕು. ಶ್ರೇಯಾ ಮತ್ತು ಕುಟುಂಬದವರಿಂದ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ ೮ರಂದು ಬೆಳಿಗ್ಗೆ ೯ ಗಂಟೆಗೆ ಗಂಗಾಪೂಜೆ, ಬೆಳಿಗ್ಗೆ ೧೦ ಗಂಟೆಗೆ ಶ್ರೀ ವರವೀರಭದ್ರೇಶ್ವರ ಪುರವಂತರು ಹಾಗೂ ಸಂಗಡಿಗರಿಂದ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ ೭ ಗಂಟೆಗೆ ಸಂಪ್ರದಾಯಬದ್ಧ ಕಡುಬಿನ ಕಾಳಗ ನಡೆಯಲಿದೆ.

ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವರವೀರಭದ್ರೇಶ್ವರ ದೇವರ ದರ್ಶನ ಪಡೆದು, ತಮ್ಮ ತನು–ಮನ–ಧನ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕುರುಡಗಿ ಗ್ರಾಮದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

ಸಮಾಧಿಯಲ್ಲಿದ್ದ ದೇಹ 8 ತಿಂಗಳಾದರೂ ನಿಷ್ಕಳಂಕ!

0

ವಿಜಯಸಾಕ್ಷಿ ಸುದ್ದಿ, ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಭಕ್ತರಲ್ಲಿ ಅಚ್ಚರಿ ಮತ್ತು ಭಕ್ತಿಭಾವ ಮೂಡಿಸಿರುವ ಅಪರೂಪದ ಘಟನೆಯೊಂದು ನಡೆದಿದೆ. ಹಾಲುಮತ ಗುರುಪೀಠದ ಗುರು, ಪವಾಡ ಪುರುಷರೆಂದೇ ಭಕ್ತರಿಂದ ಆರಾಧಿಸಲ್ಪಡುತ್ತಿದ್ದ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರ ಅಂತ್ಯಕ್ರಿಯೆ ನಡೆದು ಎಂಟು ತಿಂಗಳು ಕಳೆದಿದ್ದರೂ, ಸಮಾಧಿಯಿಂದ ಹೊರತೆಗೆದ ವೇಳೆ ಅವರ ದೇಹದಲ್ಲಿ ಯಾವುದೇ ಹಾನಿಯಾಗಿಲ್ಲ ಎಂಬುದು ಭಕ್ತರನ್ನು ಬೆರಗುಗೊಳಿಸಿದೆ. ದೈವವಾಣಿಯಂತೆ ಗುರುವಾರ ಸಮಾಧಿಯಿಂದ ದೇಹವನ್ನು ಹೊರತೆಗೆದು, ವಿಜೃಂಭಣೆಯ ಮೆರವಣಿಗೆ ನಡೆಸಿ ಮರು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಪವಾಡ ಪುರುಷ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರು 2025ರ ಡಿಸೆಂಬರ್ 31ರಂದು ಲಿಂಗೈಕ್ಯರಾಗಿದ್ದರು. ಮರುದಿನ 2026ರ ಜನವರಿ 1ರಂದು ಮನಗೂಳಿ ಪಟ್ಟಣದ ಹೊರವಲಯದ ಚೌಕಿಮಠದ ಬಳಿ ಶಾಸ್ತ್ರೋಕ್ತವಾಗಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಆದರೆ, ಅಂತ್ಯಕ್ರಿಯೆ ನಡೆದ ಎಂಟು ತಿಂಗಳು ಎರಡು ದಿನಗಳ ಬಳಿಕ ಸಮಾಧಿಯಲ್ಲಿದ್ದ ಶ್ರೀಗಳ ದೇಹವನ್ನು ಮತ್ತೊಮ್ಮೆ ಹೊರತೆಗೆದು ಮರು ಅಂತ್ಯಕ್ರಿಯೆ ನೆರವೇರಿಸಲು ಭಕ್ತರು ಮುಂದಾದರು. ಗುರುವಾರ ನಸುಕಿನ ಜಾವ ಸಮಾಧಿಯನ್ನು ತೆರೆಯಿಸಿ ದೇಹವನ್ನು ಹೊರತೆಗೆದ ಸಂದರ್ಭದಲ್ಲಿ, ಇಷ್ಟೊಂದು ತಿಂಗಳು ಕಳೆದಿದ್ದರೂ ದೇಹಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ಕಂಡುಬಂದಿದೆ ಎಂದು ಭಕ್ತರು ತಿಳಿಸಿದ್ದಾರೆ. ಈ ದೃಶ್ಯ ಕಂಡ ಭಕ್ತರು ಅಚ್ಚರಿ ವ್ಯಕ್ತಪಡಿಸಿ, ಇದನ್ನು ಶ್ರೀಗಳ ಪವಾಡವೆಂದು ಭಕ್ತಿಪೂರ್ವಕವಾಗಿ ನಂಬಿದ್ದಾರೆ.

ದೈವವಾಣಿಯಂತೆ ಮರು ಅಂತ್ಯಕ್ರಿಯೆ

ಸಮಾಧಿಯಲ್ಲಿದ್ದ ದೇಹವನ್ನು ಹೊರತೆಗೆಯಲು ಕಾರಣವಾಗಿದ್ದು ದೈವವಾಣಿಯೆಂದು ಭಕ್ತರು ತಿಳಿಸಿದ್ದಾರೆ. ಇತ್ತೀಚೆಗೆ ಲಾಯವ್ವ ಎಂಬ ಭಕ್ತೆಯ ಮೈಮೇಲೆ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರ ದೈವಶಕ್ತಿ ಬಂದಿತ್ತೆಂದು ಹೇಳಲಾಗಿದ್ದು, ಆ ವೇಳೆ “ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಗದ್ದುಗೆ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ನೆರವೇರಿಸಿ. ಹೀಗೆ ಮಾಡಿದರೆ ನಾಡಿಗೆ ಬಂದಿರುವ ಬರಗಾಲ ನೀಗಿ, ಮಳೆ-ಬೆಳೆಯಾಗಿ ಎಲ್ಲರಿಗೂ ಒಳಿತಾಗಲಿದೆ” ಎಂದು ದೈವವಾಣಿ ಕೇಳಿಬಂದಿತ್ತೆಂದು ಭಕ್ತರು ತಿಳಿಸಿದ್ದಾರೆ.

ಈ ದೈವವಾಣಿಯಂತೆ ಗುರುವಾರ ನಸುಕಿನ ಜಾವ ಭಕ್ತರು ಸಮಾಧಿಯಿಂದ ಶ್ರೀಗಳ ದೇಹವನ್ನು ಹೊರತೆಗೆದು, ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಬಳಿಕ ಬೀರಲಿಂಗೇಶ್ವರ ದೇವಸ್ಥಾನದ ಗದ್ದುಗೆ ಸಮೀಪ ದೈವವಾಣಿಯಂತೆ ಮರು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಜಾತ್ರೆಯ ವಾತಾವರಣದಲ್ಲಿ ಭವ್ಯ ಮೆರವಣಿಗೆ

ಮನಗೂಳಿ ಪಟ್ಟಣದಲ್ಲಿ ಡೊಳ್ಳು ಕುಣಿತ, ಸುಮಂಗಲಿಯರ ಕುಂಭಮೇಳ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಶ್ರೀಗಳ ದೇಹದ ವಿಜೃಂಭಣೆಯ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು. ಪಟ್ಟಣದಾದ್ಯಂತ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಈ ಹಿಂದೆ ಬರಗಾಲದ ಸಂದರ್ಭದಲ್ಲಿ ಶ್ರೀ ಮಲ್ಲಯ್ಯ ಸರೂರ ಮುತ್ಯಾರ ಅವರು ಮುಳ್ಳಿನ ಕಂಟೆಯ ಮೇಲೆ ನಿಂತು ಮಳೆ ತರಿಸುವ ಪವಾಡ ಮಾಡಿದ್ದರು ಎಂಬ ನಂಬಿಕೆ ಭಕ್ತರಲ್ಲಿದೆ. ಇದೀಗ ಅವರ ದೈವವಾಣಿಯಂತೆ ಮರು ಅಂತ್ಯಕ್ರಿಯೆ ನೆರವೇರಿಸಿರುವುದರಿಂದ ನಾಡಿನಲ್ಲಿ ಬರಗಾಲ ನೀಗಿ, ಉತ್ತಮ ಮಳೆ-ಬೆಳೆಯಾಗಿ ಸುಭಿಕ್ಷೆ ನೆಲೆಸಲಿದೆ ಎಂಬ ಭರವಸೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.

ಶ್ರೀಗಳ ದೈವವಾಣಿಯಂತೆ ಮರು ಅಂತ್ಯಕ್ರಿಯೆ ನೆರವೇರಿಸಿದ್ದೇವೆ. ಅವರ ಆಶೀರ್ವಾದದಿಂದ ನಾಡಿನ ಬರಗಾಲ ದೂರವಾಗಿ, ಮಳೆ-ಬೆಳೆಯಾಗಿ ಜನಜೀವನ ಸುಖಮಯವಾಗಲಿದೆ ಎಂಬುದು ನಮ್ಮ ಅಚಲ ನಂಬಿಕೆ ಎಂದು ಭಕ್ತರು ತಿಳಿಸಿದ್ದಾರೆ.

ಗುರು ಎಂಬ ಬೆಳಕು: ಅಕ್ಷರದಾಚೆ ಬದುಕು ಕಲಿಸುವ ಶಿಕ್ಷಕ

ಮನುಷ್ಯನ ಬದುಕಿನಲ್ಲಿ ಕೆಲವು ವ್ಯಕ್ತಿಗಳ ಪ್ರಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಮಹತ್ವದ ವ್ಯಕ್ತಿಗಳಲ್ಲಿ ಶಿಕ್ಷಕರ ಸ್ಥಾನ ಅತ್ಯಂತ ವಿಶಿಷ್ಟವಾದುದು. ತಾಯಿ-ತಂದೆಯರು ಮಗುವಿಗೆ ಜನ್ಮ ನೀಡಿದರೆ, ಶಿಕ್ಷಕರು ಆ ಬದುಕಿಗೆ ಜ್ಞಾನ, ಸಂಸ್ಕಾರ, ಮೌಲ್ಯ ಮತ್ತು ಸರಿಯಾದ ದಿಕ್ಕನ್ನು ನೀಡುತ್ತಾರೆ. ಹೀಗಾಗಿ ಶಿಕ್ಷಕ ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿಯಲ್ಲ; ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿ, ಕನಸುಗಳಿಗೆ ರೆಕ್ಕೆ ನೀಡುವ ಮಾರ್ಗದರ್ಶಿ.

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದ ಮಹಾನ್ ತತ್ವಜ್ಞಾನಿ, ಶಿಕ್ಷಣತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣಾರ್ಥ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರ ಸೇವೆ, ತ್ಯಾಗ, ಸಮರ್ಪಣೆ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುವ ಮಹತ್ವದ ದಿನ ಇದಾಗಿದೆ.

ಶಾಲೆಯ ಮೊದಲ ದಿನ ಮಗುವಿನ ಕೈಹಿಡಿದು ಅಕ್ಷರ ಲೋಕಕ್ಕೆ ಪರಿಚಯಿಸುವ ಶಿಕ್ಷಕ, ಮುಂದೆ ಅದೇ ಮಗುವಿನ ಕನಸುಗಳಿಗೆ ರೆಕ್ಕೆ ಕಟ್ಟುತ್ತಾನೆ. ಪುಸ್ತಕದ ಪಾಠದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುತ್ತಾನೆ. ಸೋತಾಗ ಕುಗ್ಗದೆ ಮತ್ತೆ ಪ್ರಯತ್ನಿಸುವುದು, ತಪ್ಪಾದಾಗ ತಿದ್ದಿಕೊಳ್ಳುವುದು, ಯಶಸ್ಸಿನ ಸಂದರ್ಭದಲ್ಲಿ ವಿನಯದಿಂದ ಇರುವುದು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಕಲಿಸುವವನೇ ನಿಜವಾದ ಶಿಕ್ಷಕ.

ಇಂದಿನ ತಂತ್ರಜ್ಞಾನ ಯುಗದಲ್ಲಿ ಜ್ಞಾನ ಮತ್ತು ಮಾಹಿತಿಯನ್ನು ಪಡೆಯಲು ಅನೇಕ ಮಾರ್ಗಗಳಿವೆ. ಮೊಬೈಲ್, ಇಂಟರ್‌ನೆಟ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಸಾಧನಗಳು ನಮ್ಮ ಕೈಯಲ್ಲಿವೆ. ಆದರೆ ಯಾವುದು ಸರಿಯಾದ ಜ್ಞಾನ? ಅದನ್ನು ಹೇಗೆ ಬಳಸಬೇಕು? ಬದುಕಿನಲ್ಲಿ ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು? ಎಂಬುದನ್ನು ತಿಳಿಸಿಕೊಡುವ ಮಾನವೀಯ ಮಾರ್ಗದರ್ಶನದ ಅಗತ್ಯ ಎಂದಿಗೂ ಕಡಿಮೆಯಾಗುವುದಿಲ್ಲ.

ಒಬ್ಬ ವಿದ್ಯಾರ್ಥಿ ಮುಂದೆ ವೈದ್ಯನಾಗಬಹುದು, ವಿಜ್ಞಾನಿಯಾಗಬಹುದು, ಅಧಿಕಾರಿಯಾಗಬಹುದು, ಉದ್ಯಮಿಯಾಗಬಹುದು ಅಥವಾ ಸಮಾಜ ಸೇವಕನಾಗಬಹುದು. ಆದರೆ ಆತನ ಯಶಸ್ಸಿನ ಪಯಣದ ಆರಂಭದಲ್ಲಿ ದಾರಿ ತೋರಿಸಿದ ಒಬ್ಬ ಶಿಕ್ಷಕನ ಪ್ರೇರಣೆ ಖಂಡಿತವಾಗಿಯೂ ಇರುತ್ತದೆ. ಕೆಲವೊಮ್ಮೆ ಶಿಕ್ಷಕರ ಒಂದೇ ಒಂದು ಮಾತು ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಬಲ್ಲದು. “ನೀನು ಮಾಡಬಲ್ಲೆ” ಎಂಬ ಶಿಕ್ಷಕರ ವಿಶ್ವಾಸದ ಮಾತು ಆತ್ಮವಿಶ್ವಾಸ ಕಳೆದುಕೊಂಡ ವಿದ್ಯಾರ್ಥಿಗೆ ಹೊಸ ಧೈರ್ಯ ನೀಡುತ್ತದೆ.

ಶಿಕ್ಷಕರನ್ನು ಗೌರವಿಸುವುದು ಎಂದರೆ ಕೇವಲ ಒಂದು ದಿನ ಹೂವು ನೀಡಿ ಶುಭಾಶಯ ಹೇಳುವುದಲ್ಲ. ಅವರು ಕಲಿಸಿದ ಉತ್ತಮ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

ಅಕ್ಷರ ಕಲಿಸುವವರು ಹಲವರಿರಬಹುದು; ಆದರೆ ಅಕ್ಷರದಾಚೆ ಬದುಕಿನ ಅರ್ಥ ಕಲಿಸುವವರೇ ನಿಜವಾದ ಗುರು.

ದೀಪವು ತಾನು ಬೆಳಗುತ್ತಾ ಸುತ್ತಲಿನ ಕತ್ತಲೆಯನ್ನು ದೂರ ಮಾಡುವಂತೆ, ಶಿಕ್ಷಕನು ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತಾ ಅನೇಕ ಬದುಕುಗಳಿಗೆ ಬೆಳಕಾಗುತ್ತಾನೆ. ಇಂತಹ ಜ್ಞಾನದೀಪಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಲಿ.

ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ಶ್ರೀಮತಿ ಚಂದ್ರಕಲಾ ಎಂ. ಇಟಗಿಮಠ

ಮಕ್ಕಳ ಬಾಳಿಗೆ ಬೆಳಕಾಗಿರುವ ಅಪರೂಪದ ಸಂಪನ್ಮೂಲ ವ್ಯಕ್ತಿ: ಎಂ.ಎಚ್. ಸವದತ್ತಿ

ಸರ್ಕಾರಿ ಸೇವೆ ಎಂದರೆ ಕೇವಲ ಕರ್ತವ್ಯ ನಿರ್ವಹಣೆಗೆ ಸೀಮಿತವಾಗದೆ, ಮಕ್ಕಳ ಭವಿಷ್ಯ ರೂಪಿಸುವ ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂಬುದನ್ನು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿರುವ ಅಪರೂಪದ ಸಂಪನ್ಮೂಲ ವ್ಯಕ್ತಿ ಎಂ.ಎಚ್. ಸವದತ್ತಿ ಅವರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.

ಮೂಲತಃ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಆರಂಭಿಸಿದ ಸವದತ್ತಿ ಅವರು ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣ ನೀಡದೆ, ಅವರಲ್ಲಿರುವ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಲು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಪ್ರೋತ್ಸಾಹ ನೀಡಿದ್ದು ಅವರ ಶಿಕ್ಷಣ ಪ್ರೀತಿಗೆ ಸಾಕ್ಷಿಯಾಗಿದೆ.

ಶಾಲೆಯಲ್ಲಿ ಮಾದರಿ ವಿಜ್ಞಾನ ಪ್ರಯೋಗಾಲಯ ನಿರ್ಮಿಸಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸಿದರು. ಇದರ ಫಲವಾಗಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದು ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ನಂತರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ತಾಂತ್ರಿಕ ಸಹಾಯಕರಾಗಿ ಪದೋನ್ನತಿ ಪಡೆದರೂ ತಮ್ಮ ಜ್ಞಾನವನ್ನು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕಾರ್ಯಾಗಾರಗಳನ್ನು ನಡೆಸುತ್ತಾ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜ್ಞಾನ ವಿಷಯದ ಪ್ರಯೋಗಗಳು, ಚಿತ್ರಗಳು ಹಾಗೂ ಅವುಗಳ ಭಾಗಗಳನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವುದು ಅವರ ವಿಶೇಷತೆ. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನ ವಿಷಯದ ಭಯ ನಿವಾರಿಸಿ, ಪರೀಕ್ಷಾ ತಂತ್ರಗಳು, ಉತ್ತರ ಬರವಣಿಗೆ ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ನಡೆದ ‘ಪರೀಕ್ಷಾ ಪೇ ಚರ್ಚಾ’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧವನ್ನು ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರ ರವಾನಿಸಿರುವುದು ವಿಶೇಷ ಸಾಧನೆಯಾಗಿದೆ.

೨೦೨೫-೨೬ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗುಣಾತ್ಮಕ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಸವದತ್ತಿ ಅವರು 37 ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈ ಕಾರ್ಯಾಗಾರಗಳಲ್ಲಿ 85 ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, 4,049 ವಿದ್ಯಾರ್ಥಿಗಳು ನೇರ ಪ್ರಯೋಜನ ಪಡೆದಿದ್ದಾರೆ.

ವಿಜಯನಗರ, ಉತ್ತರ ಕನ್ನಡ, ಹುಬ್ಬಳ್ಳಿ ಸೇರಿದಂತೆ ಗದಗ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಶಾಲೆ-ಕಾಲೇಜುಗಳಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿದ್ದಾರೆ.

ಕಾರ್ಯಾಗಾರಗಳಲ್ಲಿ ವಿಜ್ಞಾನ ಪಠ್ಯಕ್ರಮದ ರೂಪರೇಖೆ, ಅಂಕ ಹಂಚಿಕೆ, ಚಟುವಟಿಕೆ ಆಧಾರಿತ ಕಲಿಕೆ, ಪ್ರಯೋಗಗಳು, ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ವೈಜ್ಞಾನಿಕ ಚಿತ್ರಗಳ ಅಭ್ಯಾಸ ಹಾಗೂ ಉತ್ತರ ಬರೆಯುವ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತದೆ. ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಉತ್ತೀರ್ಣತೆ ಸಾಧಿಸಲು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 40+ ಹಾಗೂ 50+ ಅಂಕ ಗಳಿಸಲು ವಿಶೇಷ ಮಾರ್ಗದರ್ಶನ ನೀಡಲಾಗುತ್ತಿದೆ.

ತಮ್ಮ ವಿಶ್ರಾಂತಿ ಮತ್ತು ರಜೆ ದಿನಗಳನ್ನೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮೀಸಲಿಟ್ಟು ಜ್ಞಾನ ಹಂಚುತ್ತಿರುವ ಎಂ.ಎಚ್. ಸವದತ್ತಿ ಅವರ ಸೇವೆ ನಿಜಕ್ಕೂ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ. ಕಚೇರಿಯ ಕರ್ತವ್ಯದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಆತ್ಮವಿಶ್ವಾಸದ ಬೆಳಕು ಹಚ್ಚುತ್ತಿರುವ ಅವರು, ಶಿಕ್ಷಕ ವೃತ್ತಿಯ ನಿಜವಾದ ಅರ್ಥವನ್ನು ತಮ್ಮ ಕಾರ್ಯದ ಮೂಲಕ ಸಾರುತ್ತಿದ್ದಾರೆ.

ವೆಂಕಟೇಶ ಬಿ. ಇಮರಾಪೂರ, ಹಿರಿಯ ಪತ್ರಕರ್ತರು, ಗದಗ

ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ

ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ವಿದ್ಯಾರ್ಥಿಯ ಬದುಕನ್ನು ರೂಪಿಸುವ ಮಾರ್ಗದರ್ಶಿ. ಈ ಮಾತಿಗೆ ಗದಗಿನ “ಗಾಂಧಿ”, “ಶಿಕ್ಷಣ ಭೀಷ್ಮ” ಹಾಗೂ “ಸಂತ ಶಿಕ್ಷಕ” ಎಂದೇ ಖ್ಯಾತರಾದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳು ಜೀವಂತ ಉದಾಹರಣೆಯಾಗಿದ್ದರು.

ಜುಲೈ ೨೩, ೧೯೩೦ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ಬಡ ಕುಟುಂಬದಲ್ಲಿ ಗುರುಪ್ಪ ಮತ್ತು ಭೋರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಬಸವಂತಪ್ಪ ಗುರಪ್ಪ ಅಣ್ಣಿಗೇರಿ ಅವರು, ಸರಳತೆಯಲ್ಲಿಯೇ ಶ್ರೇಷ್ಠತೆಯನ್ನು ಕಂಡ ಮಹನೀಯರಾಗಿದ್ದರು. ಬಾಲ್ಯದಲ್ಲಿಯೇ ಬಾಜೀರಾವ ವೈ. ಕುಲಕರ್ಣಿ ಅವರಂತಹ ಆದರ್ಶ ಶಿಕ್ಷಕರ ಮಾರ್ಗದರ್ಶನ ಪಡೆದ ಅವರು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಆಧ್ಯಾತ್ಮಿಕ ಚಿಂತನೆ, ಧ್ಯಾನ, ಯೋಗ ಹಾಗೂ ಶಿಸ್ತಿನ ಬದುಕು ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿದ್ದವು.

೧೯೫೪ರಲ್ಲಿ ಗದಗಿನ ಮಾಡೆಲ್ ಹೈಸ್ಕೂಲ್‌ನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅಣ್ಣಿಗೇರಿ ಗುರುಗಳ ಬದುಕು ಕ್ರಮೇಣ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಆಶಾಕಿರಣವಾಯಿತು. ಸಣ್ಣ ಕೋಣೆಯೊಂದರಲ್ಲಿ ವಾಸಿಸುತ್ತಿದ್ದ ಅವರು, ಹಳ್ಳಿಗಳಿಂದ ಬಂದ ಬಡ ವಿದ್ಯಾರ್ಥಿಗಳಿಗೆ ತಮ್ಮ ಆಶ್ರಯದಲ್ಲಿಯೇ ಉಚಿತ ಶಿಕ್ಷಣ, ಊಟ ಹಾಗೂ ವಸತಿ ಸೌಲಭ್ಯ ಒದಗಿಸುತ್ತಿದ್ದರು. ತಮ್ಮ ಸಂಬಳದ ಬಹುಪಾಲನ್ನು ವಿದ್ಯಾರ್ಥಿಗಳ ಸೇವೆಗಾಗಿಯೇ ಮೀಸಲಿಟ್ಟಿದ್ದರು.

ಬೆಳಿಗ್ಗೆ ಮತ್ತು ಸಾಯಂಕಾಲ ನೂರಾರು ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಇಂಗ್ಲಿಷ್ ಬೋಧಿಸುತ್ತಿದ್ದ ಅಣ್ಣಿಗೇರಿ ಗುರುಗಳು, ಕಠಿಣವೆನಿಸುವ ಗಣಿತ ವಿಷಯವನ್ನೂ ಅತ್ಯಂತ ಸರಳವಾಗಿ, ವಿದ್ಯಾರ್ಥಿಗಳ ಮನಮುಟ್ಟುವಂತೆ ಕಲಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದರು. ಅವರ ಪಾಲಿಗೆ ಶಿಕ್ಷಣವು ಕೇವಲ ಉದ್ಯೋಗವಾಗಿರಲಿಲ್ಲ; ಅದು ಬದುಕಿನ ಧ್ಯೇಯವಾಗಿತ್ತು.

ವಿದ್ಯಾರ್ಥಿಗಳ ಸರಿ-ತಪ್ಪುಗಳನ್ನು ತಿದ್ದಿ, ಅವರಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದು ಅವರ ಶಿಕ್ಷಣದ ಪ್ರಮುಖ ಉದ್ದೇಶವಾಗಿತ್ತು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಆರು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಅವರು, ನಿವೃತ್ತಿಯ ನಂತರವೂ ತಮ್ಮ ಬೋಧನಾ ಸೇವೆಯನ್ನು ನಿಲ್ಲಿಸಲಿಲ್ಲ. ನವೋದಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ತಮ್ಮ ಕೊನೆಯ ಉಸಿರಿನವರೆಗೂ ಶಿಕ್ಷಣ ಸೇವೆಯನ್ನು ಮುಂದುವರಿಸಿದರು.

ಸೆಪ್ಟೆಂಬರ್ ೫, ೨೦೧೯ರಂದು ತಮ್ಮ ೮೯ನೇ ವಯಸ್ಸಿನಲ್ಲಿ ಲಿಂಗೈಕ್ಯರಾದ ಅಣ್ಣಿಗೇರಿ ಗುರುಗಳು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ಸೇವಾ ಪರಂಪರೆ ಇಂದಿಗೂ ಜೀವಂತವಾಗಿದೆ. ಅವರ ಪಿಂಚಣಿ ಹಣ ಹಾಗೂ ಶಿಷ್ಯರು ನೀಡಿದ ಕೊಡುಗೆಗಳಿಂದ ಸ್ಥಾಪಿತವಾದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಅವರ ಆಶಯ ಮತ್ತು ಆದರ್ಶಗಳನ್ನು ಮುಂದುವರಿಸಿಕೊಂಡು ಸಾಗುತ್ತಿದೆ.

ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ, ಶಾಲಾ ಬ್ಯಾಗ್, ಪ್ರಮಾಣಪತ್ರ ಹಾಗೂ ಇತರ ಪ್ರೋತ್ಸಾಹಗಳನ್ನು ನೀಡುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.

ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಇಂದಿಗೂ ೮ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉಚಿತ ಬೋಧನೆ ನೀಡಲಾಗುತ್ತಿದೆ. ಹಳ್ಳಿಗಳ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ೧೪ ವಿದ್ಯಾರ್ಥಿಗಳು ಆಶ್ರಮದಲ್ಲಿ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಆಧುನಿಕ ಬೋಧನಾ ವ್ಯವಸ್ಥೆಯೊಂದಿಗೆ ತರಗತಿಗಳು ನಡೆಯುತ್ತಿದ್ದರೂ, ಅಣ್ಣಿಗೇರಿ ಗುರುಗಳು ಪ್ರತಿಪಾದಿಸಿದ ಗುರು-ಶಿಷ್ಯ ಪರಂಪರೆಯ ಸೇವಾ ಮನೋಭಾವ ಅಚಲವಾಗಿ ಮುಂದುವರಿದಿದೆ. ೨೦೨೬-೨೭ನೇ ಸಾಲಿನ ಬೇಸಿಗೆ ಶಿಬಿರದಲ್ಲಿ ಸುಮಾರು ೬೫೦ರಿಂದ ೭೦೦ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿರುವುದು ಈ ಸೇವಾ ಪರಂಪರೆಯ ವ್ಯಾಪ್ತಿ ಮತ್ತು ಮಹತ್ವಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶಾಲವಾದ ತರಗತಿ ಕೊಠಡಿ ನಿರ್ಮಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಇದು ಅಣ್ಣಿಗೇರಿ ಗುರುಗಳ ಕನಸಿನ ಶಿಕ್ಷಣ ಸೇವೆಯನ್ನು ಇನ್ನಷ್ಟು ವಿದ್ಯಾರ್ಥಿಗಳ ಬದುಕಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ.

ಅಣ್ಣಿಗೇರಿ ಗುರುಗಳು ಕಲ್ಲಿನಂತಿದ್ದ ವಿದ್ಯಾರ್ಥಿಗಳ ಬದುಕನ್ನು ಸುಂದರ ಮೂರ್ತಿಗಳನ್ನಾಗಿ ರೂಪಿಸಿದ ಅಪರೂಪದ ಶಿಲ್ಪಿಯಾಗಿದ್ದರು. ಅವರ ಬದುಕು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಶಿಕ್ಷಣದ ನಿಜವಾದ ಅರ್ಥ ಕೇವಲ ಜ್ಞಾನವನ್ನು ಹಂಚುವುದಲ್ಲ, ಮತ್ತೊಬ್ಬರ ಬದುಕನ್ನು ಬೆಳಗಿಸುವುದಾಗಿದೆ.

ಗುರುಗಳು ಇಂದು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಆದರ್ಶ, ಶಿಸ್ತು, ಸರಳತೆ ಹಾಗೂ ನಿಸ್ವಾರ್ಥ ಸೇವೆಯ ಬೆಳಕು ಇಂದಿಗೂ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಂದರೆ ಕೇವಲ ಒಬ್ಬ ಮಹಾನ್ ಶಿಕ್ಷಕರನ್ನು ನೆನೆಯುವುದಲ್ಲ; ಅವರು ಬದುಕಿನುದ್ದಕ್ಕೂ ಪಾಲಿಸಿದ ನಿಸ್ವಾರ್ಥ ಶಿಕ್ಷಣ ಸೇವೆಯ ಆದರ್ಶವನ್ನು ಮುಂದುವರಿಸುವ ಸಂಕಲ್ಪ ಮಾಡುವುದು ಕೂಡ ಆಗಿದೆ.

ಮಂಜುಳಾ ತುಂಬರಮಟ್ಟಿ

ಶಿಕ್ಷಕಿ,

ಬಿ.ಜಿ. ಅಣ್ಣಿಗೇರಿ ಆಶ್ರಮ, ಗದಗ.

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಆರೋಪ: ವಿರೇಶ್ ಬಡಿಗೇರ ಸೇರಿ ಮೂವರು ವಿರುದ್ಧ ಕೇಸ್

0

ಗದಗ: ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 200 ಕ್ವಿಂಟಾಲ್ ಅಕ್ಕಿಯನ್ನು ಲಾರಿ ಸಮೇತ ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 2ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮುಂಡರಗಿ-ಕೊರ್ಲಹಳ್ಳಿ ರಸ್ತೆಯ ಮಕ್ತುಂಪುರ ಗ್ರಾಮ ದಾಟಿದ ಬಳಿಕ ದುರ್ಗಮ್ಮ ದೇವಿ ದೇವಸ್ಥಾನದ ಸಮೀಪ ಈ ಅಕ್ರಮ ಸಾಗಾಟ ಪತ್ತೆಯಾಗಿದೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ತಿಳಿಸಲಾಗಿದೆ.

ಗುಡದೂರು ಗ್ರಾಮದ ದೊಡ್ಡಬಸಪ್ಪ ವಿರೂಪಣ್ಣ ಕಮತರ ಎಂಬಾತನ ಮಾಲೀಕತ್ವದ ಕೆಎ-01/ಎಎಂ-6176 ಸಂಖ್ಯೆಯ ಟಾಟಾ ಆರು ಚಕ್ರಗಳ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಅಕ್ರಮ ಸಾಗಾಟದಲ್ಲಿ ವೀರೇಶ ಬಡಿಗೇರ ಹಾಗೂ ಬೂದಪ್ಪ ಕುರಿ ಸಹ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ದಾಖಲಿಸಲಾಗಿದೆ.

ಲಾರಿಯಲ್ಲಿ ಸುಮಾರು 200 ಕ್ವಿಂಟಾಲ್ ಪಡಿತರ ಅಕ್ಕಿ ಇದ್ದು, ಪ್ರತಿ ಕ್ವಿಂಟಾಲ್‌ಗೆ 2,200 ರೂ.ಗಳಂತೆ ಒಟ್ಟು 4.40 ಲಕ್ಷ ರೂ. ಮೌಲ್ಯದ ಅಕ್ಕಿ ಎಂದು ಅಂದಾಜಿಸಲಾಗಿದೆ.

ಅಕ್ಕಿಯೊಂದಿಗೆ ಲಾರಿಯನ್ನೂ ಪ್ರಕರಣದಲ್ಲಿ ದಾಖಲಿಸಲಾಗಿದ್ದು, ಲಾರಿಯ ಅಂದಾಜು ಮೌಲ್ಯ 6 ಲಕ್ಷ ರೂ. ಎಂದು ತಿಳಿಸಲಾಗಿದೆ. ಹೀಗಾಗಿ ಒಟ್ಟು 10.40 ಲಕ್ಷ ರೂ. ಮೌಲ್ಯದ ಸ್ವತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದೆ.

ಪಡಿತರ ವ್ಯವಸ್ಥೆಯಡಿ ಸಾರ್ವಜನಿಕರಿಗೆ ವಿತರಿಸಬೇಕಾದ ಆಹಾರ ಧಾನ್ಯವನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಆಹಾರ ನಿರೀಕ್ಷಕರಿಂದ ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಪಿಡಿಎಸ್ ನಿಯಂತ್ರಣ ಆದೇಶದ ಕಲಂ 18ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ಷರ ಕಲಿಸಬೇಕಾದ ಗುರು ಅಂಕಿ-ಅಂಶಗಳ ನಡುವೆ ಕಳೆದುಹೋದರು!

ಒಂದು ಮಗು ಮೊದಲ ಬಾರಿಗೆ ಶಾಲೆಯ ಬಾಗಿಲು ದಾಟಿದಾಗ ಅದರ ಕೈಯಲ್ಲಿ ಪುಸ್ತಕ, ಕಣ್ಣಲ್ಲಿ ಕನಸು ಇರುತ್ತದೆ. ಆ ಕನಸಿಗೆ ಅಕ್ಷರದ ರೂಪ ನೀಡಿ, ಬದುಕಿನ ದಾರಿ ತೋರಿಸುವವರು ಶಿಕ್ಷಕರು. ತಾಯಿ-ತಂದೆಯ ನಂತರ ಮಗುವಿನ ಬದುಕಿನ ಮೇಲೆ ಅತ್ಯಂತ ಗಾಢವಾದ ಪ್ರಭಾವ ಬೀರುವ ವ್ಯಕ್ತಿ ಗುರು. ಹೀಗಾಗಿ ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಒಂದು ತಲೆಮಾರನ್ನು ರೂಪಿಸುವ ಶಿಲ್ಪಿ.

ಸೆಪ್ಟೆಂಬರ್ 5ರಂದು ಶಿಕ್ಷಕರಿಗೆ ಹೂವು, ಹಾರ, ಶಾಲು ಮತ್ತು ಸನ್ಮಾನಗಳ ಮೂಲಕ ಗೌರವ ಸಲ್ಲಿಸುತ್ತೇವೆ. ‘ಗುರುವೇ ದೇವರು’ ಎಂದು ಕೊಂಡಾಡುತ್ತೇವೆ. ಆದರೆ ಆ ಗುರುವಿನ ನಿತ್ಯ ಬದುಕನ್ನು ಗಮನಿಸಿದಾಗ, ಅವರ ಕೈಯಲ್ಲಿ ಪಠ್ಯಪುಸ್ತಕದ ಜೊತೆಗೆ ಹತ್ತಾರು ಸರ್ಕಾರಿ ಕರ್ತವ್ಯಗಳ ಕಡತಗಳೂ ಕಾಣಿಸುತ್ತವೆ. ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಶಿಕ್ಷಕರೇ ಇಂದು ಗಣತಿ, ಸಮೀಕ್ಷೆ, ಮತದಾರರ ಮಾಹಿತಿ ಸಂಗ್ರಹ, ಚುನಾವಣಾ ಕರ್ತವ್ಯ ಹಾಗೂ ವಿವಿಧ ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಶಿಕ್ಷಕನ ಗಂಟೆ ಎಂದರೆ ನೂರಾರು ಮಕ್ಕಳ ಸಮಯ

ಶಿಕ್ಷಕನ ಒಂದು ಗಂಟೆ ಕೇವಲ ಅವರ ವೈಯಕ್ತಿಕ ಸಮಯವಲ್ಲ, ಅದು ಅನೇಕ ವಿದ್ಯಾರ್ಥಿಗಳ ಕಲಿಕೆಯ ಸಮಯ. ಶಾಲೆಯ ಹಾಜರಾತಿ, ಪಾಠ ಬೋಧನೆ, ಪರೀಕ್ಷೆ, ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲನೆಯ ನಡುವೆಯೇ ಹೆಚ್ಚುವರಿ ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಪರಿಣಾಮವಾಗಿ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚುವುದರ ಜೊತೆಗೆ ತರಗತಿಯ ಮೇಲೂ ಪರಿಣಾಮ ಬೀರುತ್ತದೆ.

ಗಣತಿಯ ಒಂದು ಅಂಕಿ, ಸಮೀಕ್ಷೆಯ ಒಂದು ಮಾಹಿತಿ ಅಥವಾ ಮತದಾರರ ಪಟ್ಟಿಯಲ್ಲಿನ ಒಂದು ಹೆಸರಿನ ಹಿಂದೆ ಶಿಕ್ಷಕರ ಹಲವು ಗಂಟೆಗಳ ಶ್ರಮ ಅಡಗಿರುತ್ತದೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು, ದಾಖಲೆ ಪರಿಶೀಲಿಸುವುದು ಮತ್ತು ವರದಿ ಸಲ್ಲಿಸುವುದು ಸುಲಭದ ಕೆಲಸವಲ್ಲ.

ಗುರುವಿಗೆ ಗೌರವ ಎಂದರೆ ಅವರ ಸಮಯಕ್ಕೂ ಗೌರವ

ಶಿಕ್ಷಕರ ದಿನದಂದು ಶಾಲು ಹೊದಿಸುವುದು ಮತ್ತು ಹೂವು ನೀಡುವುದು ಗೌರವದ ಸಂಕೇತವಾಗಬಹುದು. ಆದರೆ ನಿಜವಾದ ಗೌರವ ಎಂದರೆ ಶಿಕ್ಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಂತಹ ವಾತಾವರಣ ನಿರ್ಮಿಸುವುದು. ಹೆಚ್ಚುವರಿ ಕರ್ತವ್ಯಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದಿದ್ದರೂ, ಶಿಕ್ಷಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವುಗಳನ್ನು ನಿರ್ವಹಿಸುವ ವ್ಯವಸ್ಥೆ ಅಗತ್ಯ.

ಗುರುವಿನ ಕೈಯಲ್ಲಿ ಪುಸ್ತಕ ಇರಲಿ, ಕಣ್ಣ ಮುಂದೆ ವಿದ್ಯಾರ್ಥಿಗಳ ಕನಸು ಇರಲಿ. ಏಕೆಂದರೆ ಶಿಕ್ಷಕರ ಸಮಯ ಕಳೆದುಹೋದರೆ ಕೇವಲ ಒಂದು ದಿನದ ಪಾಠವಲ್ಲ; ಕೆಲವೊಮ್ಮೆ ಒಂದು ಮಗುವಿನ ಕಲಿಕೆಯ ಅವಕಾಶವೇ ಕಳೆದುಹೋಗಬಹುದು.

ಗುರುವಿಗೆ ಹೂವು ನೀಡುವುದಕ್ಕಿಂತ ಅವರ ಕೆಲಸಕ್ಕೆ ಗೌರವ ನೀಡೋಣ; ಶಾಲು ಹೊದಿಸುವುದಕ್ಕಿಂತ ಅವರ ಸಮಯವನ್ನು ಮಕ್ಕಳಿಗಾಗಿ ಉಳಿಸೋಣ. ಏಕೆಂದರೆ ಶಿಕ್ಷಕರ ಕೈಯಲ್ಲಿದೆ ನಾಳೆಯ ಸಮಾಜದ ಭವಿಷ್ಯ.

ಸಿಕಂದರ ಎಂ. ಆರಿ
ವಕೀಲರು ಹಾಗೂ ಸಾಹಿತಿಗಳು

ಪೌರಕಾರ್ಮಿಕರನ್ನೇ ಖಾಯಂಗೊಳಿಸುವಂತೆ ಸೆ. 7ರಿಂದ ನಗರಸಭೆ ಎದುರು ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕಸ ಸಂಗ್ರಹಣೆ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರನ್ನು ಪರಿಗಣಿಸದೆ ಹೊಸ ನೇಮಕಾತಿ ಮಾಡಬಾರದು. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನೇ ನೇರ ಪಾವತಿ ಅಡಿಯಲ್ಲಿ ಖಾಯಂಗೊಳಿಸಬೇಕು ಎಂದು ಕೃಷ್ಣ ಪರಾಪುರ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಆಗಸ್ಟ್ 29ರಂದು ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 20 ವರ್ಷಗಳಿಂದ ನಗರದಲ್ಲಿ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ಕಾರ್ಮಿಕರ ಸೇವಾವಧಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ನಾಗಮ್ಮ ಬಳ್ಳಾರಿ ಮಾತನಾಡಿ, ಹಲವು ವರ್ಷಗಳಿಂದ ನಗರದ ಸ್ವಚ್ಛತೆಗಾಗಿ ದುಡಿಯುತ್ತಿರುವ ಕಾರ್ಮಿಕರನ್ನು ಕಡೆಗಣಿಸಿ ಹೊಸಬರನ್ನು ನೇಮಕ ಮಾಡಿಕೊಳ್ಳುವುದು ನ್ಯಾಯಸಮ್ಮತವಲ್ಲ ಎಂದರು.

ಬೇಡಿಕೆ ಈಡೇರಿಸದಿದ್ದರೆ ಸೆ. 7ರಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಿ, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕಾರ್ಮಿಕರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಇಂದ್ರವ್ವ ಸಕ್ಕರಿ, ಕನಕವ್ವ ದೊಡ್ಡಮನಿ, ರಾಜೇಶ್ವರಿ, ಯುವರಾಜ ಬಳ್ಳಾರಿ, ಅನಿತಾ ಯಳವತ್ತಿ, ಕಸ್ತೂರಿವ್ವ ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನಂದೋತ್ಸವ ಕಾರ್ಯಕ್ರಮವನ್ನು ಸೆ. 6ರಂದು ನಗರದ ವೀರನಾರಾಯಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸತೀಶ್ ವಜ್ರೇಶ್ವರಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಬಸವೇಶ್ವರ ವೃತ್ತದಿಂದ ವೀರನಾರಾಯಣ ದೇವಸ್ಥಾನದವರೆಗೆ ಶ್ರೀಕೃಷ್ಣನ ಮೆರವಣಿಗೆ ನಡೆಯಲಿದೆ ಎಂದರು.

ಮಧ್ಯಾಹ್ನ 3.30ರಿಂದ ರಾತ್ರಿ 8.30ರವರೆಗೆ ವೀರನಾರಾಯಣ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೀರ್ತನೆ, ಶ್ರೀಕೃಷ್ಣನಿಗೆ ಅಭಿಷೇಕ, ಪ್ರವಚನ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಇಸ್ಕಾನ್‌ನ ಸತ್ಯಮೂರ್ತಿ ಪ್ರಭು ಅವರು ಪ್ರವಚನ ನೀಡಲಿದ್ದಾರೆ. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ, ದತ್ತ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಕಿರಣ ಭೂಮಾ, ಎಸ್.ಎಚ್. ಶಿವನಗೌಡ್ರ, ಪ್ರಕಾಶ ಆರ್. ಬಾಕಳೆ ಹಾಗೂ ಕ್ಲರ್ಕ್ ಇನ್‌ನ ಯೋಗೇಶ ಎಸ್. ಸಾವಕಾರ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ. ಧರ್ಮದ ಪುನರುತ್ಥಾನ ಹಾಗೂ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಪವಿತ್ರ ದಿನವಾಗಿದೆ. ಶ್ರೀಕೃಷ್ಣನ ಸಂದೇಶ ಹಾಗೂ ಆದರ್ಶಗಳನ್ನು ಸ್ಮರಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಜನ್ಮಾಷ್ಟಮಿ ಆಚರಿಸಬೇಕು ಎಂದು ಸಂಘಟಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತ್ಯುಂಜಯ ನಿಲೂಗಲ್ಲ, ವಿಠ್ಠಲ ಬಾಕಳೆ, ಗೋವಿಂದರಾಜ ಶಿರಹಟ್ಟಿ, ಪ್ರಕಾಶ ಕಳಸಣ್ಣವರ, ಪ್ರವೀಣ ಖಟವಟೆ, ಬಸವರಾಜ ಶೆಟ್ಟರ್ ಹಾಗೂ ಗವಿಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.

Diabetes: ಪುದೀನಾ-ದಾಲ್ಚಿನ್ನಿ ಕಷಾಯ ಕುಡಿದರೆ ಶುಗರ್ ಕಂಟ್ರೋಲ್ ಆಗುತ್ತಾ? ಸತ್ಯ ಏನು?

0

ಮಧುಮೇಹ ಒಮ್ಮೆ ಕಾಣಿಸಿಕೊಂಡ ಬಳಿಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ.

ಇದಕ್ಕಾಗಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ರಕ್ತದಲ್ಲಿನ ಗ್ಲೂಕೋಸ್ ಮೇಲ್ವಿಚಾರಣೆ ಹಾಗೂ ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಪಾಲಿಸುವುದು ಅಗತ್ಯ.

ಈ ನಡುವೆ ಮಧುಮೇಹಕ್ಕೆ ಮನೆಮದ್ದುಗಳೇ ಸಾಕು ಎಂಬ ಹಲವು ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಪುದೀನಾ ಎಲೆ ಮತ್ತು ದಾಲ್ಚಿನ್ನಿಯಿಂದ ತಯಾರಿಸುವ ಕಷಾಯ ಕೂಡ ಒಂದಾಗಿದೆ. ಆದರೆ ಈ ಕಷಾಯವನ್ನು ಕುಡಿಯುವುದರಿಂದ ಮಧುಮೇಹ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಅಥವಾ ಔಷಧಿಗಳನ್ನು ನಿಲ್ಲಿಸಬಹುದು ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಪುದೀನಾ-ದಾಲ್ಚಿನ್ನಿ ಕಷಾಯ ತಯಾರಿಸುವುದು ಹೇಗೆ?

ಒಂದು ಕಪ್ ನೀರಿಗೆ ಚೆನ್ನಾಗಿ ತೊಳೆದ ಕೆಲವು ಪುದೀನಾ ಎಲೆಗಳು ಹಾಗೂ ಸಣ್ಣ ತುಂಡು ದಾಲ್ಚಿನ್ನಿ ಹಾಕಿ ಸುಮಾರು 5ರಿಂದ 10 ನಿಮಿಷಗಳ ಕಾಲ ಕುದಿಸಬಹುದು. ಬಳಿಕ ಕಷಾಯವನ್ನು ಸೋಸಿ ಬೆಚ್ಚಗಿರುವಾಗ ಸೇವಿಸಬಹುದು.

ಮಧುಮೇಹ ಇರುವವರು ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸದಿರುವುದು ಉತ್ತಮ.

ದಾಲ್ಚಿನ್ನಿ ಶುಗರ್ ಕಡಿಮೆ ಮಾಡುತ್ತಾ?

ದಾಲ್ಚಿನ್ನಿಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಕೆಲವು ಸಂಶೋಧನೆಗಳು ಸೂಚಿಸಿವೆ. ಆದರೆ ದಾಲ್ಚಿನ್ನಿಯನ್ನು ಸೇವಿಸುವುದರಿಂದ ಮಧುಮೇಹಕ್ಕೆ ಚಿಕಿತ್ಸೆ ದೊರೆಯುತ್ತದೆ ಎಂದು ಹೇಳಲು ಸಾಕಷ್ಟು ದೃಢವಾದ ಸಾಕ್ಷ್ಯಗಳಿಲ್ಲ.

ಅದೇ ರೀತಿ ಪುದೀನಾ ವಿವಿಧ ಸಸ್ಯ ಸಂಯುಕ್ತಗಳನ್ನು ಹೊಂದಿದ್ದು, ಪುದೀನಾ ನೀರು ಅಥವಾ ಕಷಾಯ ಸೇವನೆಯಿಂದ ಜೀರ್ಣಕ್ರಿಯೆಗೆ ಆರಾಮ ಸಿಗಬಹುದು. ಆದರೆ ಇದು ಮಧುಮೇಹದ ಔಷಧಿಗೆ ಪರ್ಯಾಯವಲ್ಲ.

ಔಷಧಿ ಸೇವಿಸುವವರು ಎಚ್ಚರಿಕೆ ವಹಿಸಿ:

ಮಧುಮೇಹಕ್ಕೆ ಮಾತ್ರೆಗಳು ಅಥವಾ ಇನ್ಸುಲಿನ್ ಬಳಸುತ್ತಿರುವವರು ಇಂತಹ ಕಷಾಯವನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಔಷಧಿ ಅಥವಾ ಇನ್ಸುಲಿನ್ ಜೊತೆಗೆ ಯಾವುದೇ ಮನೆಮದ್ದನ್ನು ಬಳಸುವಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾಗುವ ಅಪಾಯವಿದೆಯೇ ಎಂಬುದನ್ನು ಗಮನಿಸಬೇಕು.

ಅಲ್ಲದೆ ದಾಲ್ಚಿನ್ನಿಯನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಯಾವುದೇ ಮನೆಮದ್ದನ್ನು ವೈದ್ಯರು ಸೂಚಿಸಿರುವ ಮಧುಮೇಹ ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು.

ಮುಖ್ಯವಾಗಿ: ಪುದೀನಾ-ದಾಲ್ಚಿನ್ನಿ ಕಷಾಯವನ್ನು ಸಕ್ಕರೆ ಸೇರಿಸದೆ ಸಾಮಾನ್ಯ ಪಾನೀಯವಾಗಿ ಸೇವಿಸುವುದನ್ನು ಮಧುಮೇಹದ ಚಿಕಿತ್ಸೆಯೆಂದು ಪರಿಗಣಿಸಬಾರದು. ಮಧುಮೇಹ ನಿಯಂತ್ರಣಕ್ಕೆ ವೈದ್ಯರ ಸಲಹೆ, ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ರಕ್ತದಲ್ಲಿನ ಸಕ್ಕರೆಯ ಮೇಲ್ವಿಚಾರಣೆ ಹಾಗೂ ಸೂಚಿಸಲಾದ ಔಷಧಿಗಳ ಪಾಲನೆಯೇ ಪ್ರಮುಖ.