Home Blog Page 8

ಪ್ರೇಯಸಿಯ ಮನೆಗೆ ನುಗ್ಗಿ ಪೆಟ್ರೋಲ್ ಸುರಿದುಕೊಂಡು ಪ್ರಿಯಕರ ಆತ್ಮಹತ್ಯೆ: ಯುವತಿಗೆ ಬೆಂಕಿ ಹಚ್ಚಲು ಯತ್ನ

0

ಬೆಂಗಳೂರು: ಪ್ರೇಮ ಸಂಬಂಧದ ಗಲಾಟೆ ಭೀಕರ ಅಂತ್ಯ ಕಂಡ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ನಡೆದಿದೆ. ಪ್ರೇಯಸಿಯ ಮನೆಗೆ ನುಗ್ಗಿದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ.

ಮೃತನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಮಂಗಳವಾರ ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಿರಣ್ ಮನೆಗೆ ತೆರಳಿ ಮಾತನಾಡಲು ಯತ್ನಿಸಿದ್ದಾನೆ.

ಮಾತಿನ ಚಕಮಕಿಯ ನಡುವೆ ಗಲಾಟೆ ತೀವ್ರಗೊಂಡಿದ್ದು, ಕಿರಣ್ ತನ್ನ ಬಳಿ ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವ ವೇಳೆ ಆಕೆಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ.

ಬೆಂಕಿಯ ತೀವ್ರತೆಗೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರೀತಿಯಲ್ಲಿ ಉಂಟಾದ ಮನಸ್ತಾಪವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಂಪುಟ ಪುನರ್ ರಚನೆ ಮಾಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ: ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳಿ ಖರ್ಗೆ ಅವರನ್ನು ಭೇಟಿಯಾಗಿದ್ದು, ಸಂಪುಟ ಪುನರ್‌ರಚನೆ ಕುರಿತು ಮನವಿ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ. ಮೇ ಮೊದಲ ವಾರದಲ್ಲಿ ಪುನರ್‌ರಚನೆ ಸಾಧ್ಯತೆ ಇರುವುದಾಗಿ ಸೂಚನೆ ನೀಡಿದ್ದಾರೆ ಎಂದರು.

ಸಂಪುಟ ಪುನರ್‌ರಚನೆ ಸಿಎಂ ಪರಮಾಧಿಕಾರವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ ಎಂದು ವಿವರಿಸಿದರು.

ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ನಾಯಕತ್ವ ಬದಲಾವಣೆ ಬೇಡಿಕೆ ಇಟ್ಟಿಲ್ಲ, ಆ ವಿಷಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ. ನಾವು ಕೇವಲ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಮನವಿ ಮಾಡಿದ್ದೇವೆ ಎಂದು ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಇನ್ನು ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಜೀರ್, ಜಬ್ಬಾರ್ ಹಾಗೂ ಜಮೀರ್ ಅವರ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ನಡೆಸಿದ ದೃಢ ದಾಖಲೆಗಳಿಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.

ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ: ನಾಮಪತ್ರ ತಿರಸ್ಕಾರದ ಆತಂಕದಲ್ಲಿ ನಟ ವಿಜಯ್‌

ಚೆನ್ನೈ: ತಮಿಳುನಾಡು ಚುನಾವಣೆಯ ಕಣದಲ್ಲಿರುವ ನಟ ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ಗಂಭೀರ ಕಾನೂನು ಪ್ರಶ್ನೆಗಳು ಎದುರಾಗಿವೆ. ಪೆರಂಬೂರ್ ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳಿಗೆ ಸಲ್ಲಿಸಿದ ನಾಮಪತ್ರಗಳ ಆಸ್ತಿ ವಿವರಗಳಲ್ಲಿ ಭಾರಿ ಅಸಂಗತತೆ ಕಂಡುಬಂದಿದೆ.

ಮದ್ರಾಸ್ ಹೈಕೋರ್ಟ್ ಈ ವಿಷಯವನ್ನು ಗಮನಿಸಿ ಪ್ರಾಥಮಿಕವಾಗಿ ವ್ಯತ್ಯಾಸವನ್ನು ಅಕ್ರಮವೆಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಸುಮಾರು 105 ಕೋಟಿ ರೂಪಾಯಿಗಳ ವ್ಯತ್ಯಾಸದ ಕುರಿತು ಪೆರಂಬೂರ್ ಮತದಾರರೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆಗೆ ಕಾರಣವಾಗಿದೆ.

ಅಫಿಡವಿಟ್ ಪ್ರಕಾರ ತಿರುಚ್ಚಿಯಲ್ಲಿ 220 ಕೋಟಿ ರೂ. ಆದಾಯ ತೋರಿಸಿದರೆ, ಪೆರಂಬೂರ್ ದಾಖಲೆಗಳಲ್ಲಿ 115 ಕೋಟಿ ರೂ. ಮಾತ್ರ ನಮೂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಅಸಮಂಜಸತೆ ಕುರಿತು ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ಹೈಕೋರ್ಟ್ ನೋಟಿಸ್ ನೀಡಿದೆ.

ಇದು ಆರಂಭಿಕ ಹಂತದ ವಿಚಾರಣೆ ಆಗಿದ್ದು, ಯಾವುದೇ ಅಂತಿಮ ಆದೇಶ ಹೊರಬಂದಿಲ್ಲ. ಅಧಿಕಾರಿಗಳ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೊಟ್ಟ ಮಾತು ಉಳಿಸಿಕೊಂಡ ಸಿದ್ದು ಕಾಂಗ್ರೆಸ್​​: ಆಕ್ಸಿಜನ್​​ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ

ಚಾಮರಾಜನಗರ: ದೇಶವನ್ನೇ ಬೆಚ್ಚಿಬೀಳಿಸಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಬಳಿಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂಬ ಬೇಡಿಕೆ ಕೊನೆಗೂ ಈಡೇರಿದೆ. ರಾಜ್ಯ ಸರ್ಕಾರ 25 ಮಂದಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ.

ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇಮಕಾತಿ ಪತ್ರ ವಿತರಿಸಿದರು. ಕೊರೊನಾ ಎರಡನೇ ಅಲೆಯ ವೇಳೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಹಾಗೂ ಪರಿಹಾರ ನೀಡುವ ಭರವಸೆ ನೀಡಿದ್ದರು. ಈಗ ಅದನ್ನು ಸರ್ಕಾರ ಜಾರಿಗೆ ತಂದಿದ್ದು, 25 ಮಂದಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಖಾಯಂ ಹುದ್ದೆಗಳು ಲಭಿಸಿವೆ.

ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಿದ್ದ ಕುಟುಂಬಗಳಿಗೆ ಇದು ದೊಡ್ಡ ಮಟ್ಟದ ನ್ಯಾಯವೆಂದು ಪರಿಗಣಿಸಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ಸಂಕಷ್ಟದಲ್ಲಿದ್ದ ಕುಟುಂಬಗಳ ಬದುಕಿನಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಬಿಟ್ ಕಾಯಿನ್ ಪ್ರಕರಣ: SIT ತನಿಖೆ ವಿಳಂಬ – ಮಧ್ಯಂತರ ವರದಿ ಕೇಳಿದ ಗೃಹ ಸಚಿವ

ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣದ ಎಸ್‌ಐಟಿ ತನಿಖೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಶೀಘ್ರಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ಸೂಚನೆ ನೀಡಿದ್ದಾರೆ. ಮಧ್ಯಂತರ ವರದಿ ನೀಡುವಂತೆ ಎಸ್‌ಐಟಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಎಸ್‌ಐಟಿ ಮೂಲಕ ಇಡಿ ಕೆಲವು ಮಾಹಿತಿಗಳನ್ನು ಪಡೆದಿರಬಹುದು. ಬಿಟ್‌ಕಾಯಿನ್ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಇಡಿಯವರ ಜವಾಬ್ದಾರಿ. ಶ್ರೀಕಿ ಜೊತೆ ಪ್ರಭಾವಿ ವ್ಯಕ್ತಿಗಳ ಮಕ್ಕಳ ಸಂಪರ್ಕವಿದೆ ಎಂಬ ವಿಚಾರವನ್ನು ಇಡಿಯವರೇ ದೃಢಪಡಿಸಬೇಕು. ರಾಜಕೀಯವಾಗಿ ಹೇಳಿಕೆ ನೀಡಬಹುದಾದರೂ, ಸತ್ಯಾಸತ್ಯತೆ ಪರಿಶೀಲನೆ ಮುಖ್ಯ ಎಂದು  ಹೇಳಿದರು.

ನಲಪಾಡ್ ಮೇಲಿನ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಹ್ಯಾರಿಸ್ ಅವರ ಇಬ್ಬರು ಪುತ್ರರ ಮನೆಗಳ ಮೇಲೆ ಇಡಿ ದಾಳಿ ನಡೆಸಲಾಗಿದೆ. ದಾಳಿಯ ಒಳಹೊರಗಿನ ವಿವರಗಳು ನಮಗೆ ತಿಳಿದಿಲ್ಲ. ಈ ಬಗ್ಗೆ ಇಡಿಯವರು ಅಧಿಕೃತ ಪ್ರೆಸ್‌ನೋಟ್ ಹೊರಡಿಸಬೇಕು ಎಂದು ಹೇಳಿದರು.

ಈ ಹಿಂದೆ ಸರ್ಕಾರವೇ ಎಸ್‌ಐಟಿ ರಚನೆ ಮಾಡಿದ್ದು, ಇದುವರೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಎಂಬುದನ್ನೂ ಗಮನಕ್ಕೆ ತಂದರು.

ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ವರದಿ ಕೇಳಲಾಗಿದೆ. ಡಿಜಿಪಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ಸ್‌ಪೆಕ್ಟರ್ ಶ್ರೀನಿವಾಸ್ ಪತ್ರ ಬರೆದಿರುವುದಾಗಿ ತಿಳಿದುಬಂದಿದ್ದು, ಎಸ್‌ಪಿ ಕಾಶೀನಾಥ್ ಅವರಿಂದಲೂ ಪ್ರಕರಣದ ವರದಿ ಕೇಳಲಾಗಿದೆ. ಎರಡು ಪ್ರಕರಣಗಳ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

Sharad Pawar: ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು

0

ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಶರದ್ ಪವಾರ್ ಅವರನ್ನು ನಿಯಮಿತ ಆರೋಗ್ಯ ತಪಾಸಣೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

85 ವರ್ಷದ ಪವಾರ್ ಅವರನ್ನು ಎರಡು ದಿನಗಳ ಹಿಂದೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಅವರು ವ್ಹೀಲ್ಚೇರ್‌ನಲ್ಲಿ ಕುಳಿತು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಫೆಬ್ರವರಿ ಆರಂಭದಲ್ಲಿ, ಎದೆಯ ಸೋಂಕು ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಅವರು ಪುಣೆಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

RTO ಅಧಿಕಾರಿಗಳ ಕಾರ್ಯಾಚರಣೆ: 8 ಸ್ಲೀಪರ್ ಬಸ್ ಗಳ ಪಾರ್ಟಿಷನ್ ಡೋರ್ ತೆರವು

ಬೆಂಗಳೂರು: ಸ್ಲೀಪರ್ ಕೋಚ್ ಬಸ್‌ಗಳ ಪದೇಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ, ದೇವನಹಳ್ಳಿ ಆರ್‌ಟಿಒ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.

ದೇವನಹಳ್ಳಿ ಪಟ್ಟಣದ ರಾಣಿ ಕ್ರಾಸ್ ಬಳಿ ಬಸ್‌ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಖಾಸಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಇರುವ ಪಾರ್ಟಿಷನ್ ಡೋರ್‌ಗಳನ್ನು ತೆರವುಗೊಳಿಸಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ಗಳನ್ನು ತಪಾಸಣೆ ಮಾಡಿದ ವೇಳೆ, ಡ್ರೈವರ್ ಮತ್ತು ಪ್ರಯಾಣಿಕರ ನಡುವೆ ಅಳವಡಿಸಿದ್ದ ಡೋರ್‌ಗಳನ್ನು ತೆಗೆದುಹಾಕಲಾಗಿದೆ.

ಒಟ್ಟು 8 ಬಸ್‌ಗಳ ಡೋರ್‌ಗಳನ್ನು ಬಿಚ್ಚಿಸಿ ಸೀಜ್ ಮಾಡಲಾಗಿದೆ. ಈ ಕಾರ್ಯಾಚರಣೆ ದೇವನಹಳ್ಳಿ ಆರ್‌ಟಿಒ ಸುಧೀರ್ ಅವರ ನೇತೃತ್ವದಲ್ಲಿ ನಡೆಯಿತು.

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರೀ ದುರಂತ

0

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ವೇಳೆ, ಗುಬ್ಬಿ ಸಮೀಪದ ಕಳ್ಳಿಪಾಳ್ಯ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SSLC ಹಿಂದಿ ಭಾಷೆ ಪರೀಕ್ಷೆಗೆ ಗ್ರೇಡ್ ಬದಲು ಅಂಕ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆ (ಹಿಂದಿ ಸೇರಿದಂತೆ) ವಿಷಯಕ್ಕೆ ಈ ವರ್ಷ ಗ್ರೇಡ್ ನೀಡದೇ, ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆಯ ಪದ್ಧತಿಯನ್ನು ಮುಂದುವರಿಸುವಂತೆ ಸೂಚಿಸಿದೆ.

ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 2025ರ ಅಕ್ಟೋಬರ್ 28ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, 2026ರ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿವೆ ಎಂದು ಅವರು ತಿಳಿಸಿದರು.

ಈ ವೇಳೆ ನ್ಯಾಯಮೂರ್ತಿಗಳಾದ ಇಂದಿರೇಶ್ ಅವರು, “ನಿಮ್ಮ ಅಧಿಸೂಚನೆಯ ಉದ್ದೇಶವೇನು? ಕಳೆದ ವರ್ಷ 1.75 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಎಲ್ಲರನ್ನೂ ಪಾಸ್ ಮಾಡುವುದು ನಿಮ್ಮ ಉದ್ದೇಶವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಗ್ರಾಮೀಣ ಭಾಗದ ಸುಮಾರು 80% ವಿದ್ಯಾರ್ಥಿಗಳು ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಅದರಿಂದ ಅವರ ಮೇಲಿನ ಒತ್ತಡ ಕಡಿಮೆ ಮಾಡಲು ಗ್ರೇಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ವಿವರಿಸಿದರು.

ಆದರೆ ನ್ಯಾಯಾಲಯ, “ಈ ವರ್ಷ ಹಳೆಯ ಪದ್ಧತಿಯನ್ನೇ ಅನುಸರಿಸಿ. ಮುಂದಿನ ವರ್ಷ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಸ್ಪಷ್ಟಪಡಿಸಿ, ಅಂಕಗಳನ್ನು ನೀಡಲು ನಿರ್ದೇಶಿಸಿತು.

ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆದಿದ್ದು, ಏಪ್ರಿಲ್ 10ರಂದು ಕರಡು ನಿಯಮಗಳು ರೂಪಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.

ಇನ್ನೂ ಒಂದು ವಾರ ಬಿಸಿಲಿನ ಕಾಟ: ಬೆಂಗಳೂರು ಸೇರಿ ರಾಜ್ಯದಲ್ಲಿ ಉಷ್ಣಾಂಶ ಏರಿಕೆ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೊಂದು ವಾರ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕರುನಾಡು ತೀವ್ರ ಬಿಸಿಲಿನಿಂದ ಬಳಲುತ್ತಿದ್ದು, ರಣಬೇಸಿಗೆಯ ತಾಪಕ್ಕೆ ಜನರು ಹೈರಾಣಾಗಿದ್ದಾರೆ. ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಬೆಂಗಳೂರು ನಗರದಲ್ಲೂ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ 40ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿಯೂ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಹಗಲು ಮಾತ್ರವಲ್ಲದೆ, ರಾತ್ರಿ ವೇಳೆಯಲ್ಲೂ ಉಷ್ಣಾಂಶ ಕಡಿಮೆಯಾಗದೆ ಇರುವುದರಿಂದ ಹೆಚ್ಚುವರಿ ಸೆಕೆ ಅನುಭವವಾಗಲಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!